ರಕ್ಷಣೆ ಇಲ್ಲದೆ ಶಿಥಿಲವಾದ ಕನಕಾಚಲಪತಿ ಗಾಲಿ, ಇರುಸು

KannadaprabhaNewsNetwork |  
Published : Dec 15, 2025, 03:30 AM IST
ಪೋಟೋ                                                   ನಾಲ್ಕೈದು ವರ್ಷಗಳಿಂದ ಕೊಳೆಯುತ್ತಿರುವ ಕನಕಾಚಲಪತಿ ರಥಕ್ಕೆ ಬಳಸಿದ ಇರುಸು, ಗಾಲಿಗಳು.  | Kannada Prabha

ಸಾರಾಂಶ

ಜಾತ್ರಾ ಸಮಯದಲ್ಲಿ ರಥ ಪರಿಶೀಲಿಸಿ ಹಾಳಾಗಿರುವ ಇರುಸು ಅಥವಾ ಗಾಲಿಗಳನ್ನು ಬದಲಿಸಿ, ಹೊಸದನ್ನು ನಿರ್ಮಿಸಿ ಜೋಡಿಸಲಾಗುತ್ತಿತ್ತು

ಎಂ. ಪ್ರಹ್ಲಾದ್ ಕನಕಗಿರಿ

ಇಲ್ಲಿನ ಮುಜರಾಯಿ ಇಲಾಖೆಯ ಶ್ರೀ ಕನಕಾಚಲಪತಿ ರಥಕ್ಕೆ ಬಳಸಿದ್ದ ಲಕ್ಷಾಂತರ ವೆಚ್ಚದ ಕಟ್ಟಿಗೆಯ ಇರುಸು ಹಾಗೂ ಗಾಲಿಗಳು ಈಗ ರಕ್ಷಣೆ ಇಲ್ಲದೆ ಹಾಳಾಗುತ್ತಿದೆ.

ಹೌದು, ೨೦೧೯ರಲ್ಲಿ ಕನಕಾಚಲಪತಿ ದೇವಸ್ಥಾನ ರಥಕ್ಕೆ ಹೈಡ್ರೋಲಿಕ್ ಬ್ರೆಕ್, ಕಬ್ಬಿಣದ ಇರುಸು ಹಾಗೂ ಆಸ್ಟ್ರೇಲಿಯನ್ ಹೊನ್ನಿ ಕಟ್ಟಿಗೆಯ ಆರು ಹೊಸ ಗಾಲಿ ಜೋಡಿಸಿ ರಥಕ್ಕೆ ಹೊಸ ಸ್ಪರ್ಶ ನೀಡಲಾಗಿತ್ತು. ಈ ಮೊದಲು ರಥಕ್ಕೆ ಅಳವಡಿಸಲಾಗಿದ್ದ ಲಕ್ಷಾಂತರ ವೆಚ್ಚದ ಕಟ್ಟಿಗೆ ಸಾಮಗ್ರಿಗಳು ಲದ್ದಿ ಹುಳುವಿನ ಪಾಲಾಗುತ್ತಿವೆ. ನಾಲ್ಕೈದು ವರ್ಷಗಳ ಪೂರ್ವದಲ್ಲಿ ರಥಕ್ಕೆ ಒಂದು ಗಾಲಿ ಜೋಡಿಸುವುದಕ್ಕೆ ಒಂದೂವರೆ ಲಕ್ಷ ವೆಚ್ಚವಾಗುತ್ತಿತ್ತು. ಹಲವು ವರ್ಷಗಳಿಂದ ಹಳೇ ಪೊಲೀಸ್ ಠಾಣೆಯ ಪರಿಸರದಲ್ಲಿ ಕಟ್ಟಿಗೆ ಸಾಮಗ್ರಿ ಬಿಸಾಡಲಾಗಿದ್ದು, ಇವು ಈಗ ಹಾಳಾಗುತ್ತಿವೆ.

ದೇವಸ್ಥಾನದ ಹಣ ದುರ್ಬಳಕೆ: ಜಾತ್ರಾ ಸಮಯದಲ್ಲಿ ರಥ ಪರಿಶೀಲಿಸಿ ಹಾಳಾಗಿರುವ ಇರುಸು ಅಥವಾ ಗಾಲಿಗಳನ್ನು ಬದಲಿಸಿ, ಹೊಸದನ್ನು ನಿರ್ಮಿಸಿ ಜೋಡಿಸಲಾಗುತ್ತಿತ್ತು. ರಥಕ್ಕೆ ₹೯೦ ಲಕ್ಷ ವೆಚ್ಚದಲ್ಲಿ ಆಧುನಿಕ ಸ್ಪರ್ಶ ನೀಡಿದ ಪೂರ್ವದಲ್ಲಿ ಬಳಸಿದ್ದ ಕಟ್ಟಿಗೆ ಸಾಮಗ್ರಿಗಳ ತಯಾರಿಗೆ ದೇವಸ್ಥಾನ ನಿಧಿಯಿಂದ ಲಕ್ಷಾಂತರ ರು. ಬಳಸಿಕೊಳ್ಳಲಾಗಿತ್ತು. ರಥಕ್ಕೆ ಹೊಸ ಟಚ್ ನೀಡುವ ನೆಪದಲ್ಲಿ ಗುಣಮಟ್ಟದ ಹಳೆಯ ಗಾಲಿ ಹಾಗೂ ಇರುಸನ್ನು ತೆಗೆಯಲಾಯಿತು. ಹೀಗೆ ತೆಗೆದ ಗಾಲಿ ಹಾಗೂ ಇರುಸು ನಾಲ್ಕೈದು ವರ್ಷಗಳಿಂದ ಗಾಳಿ, ಮಳೆಗೆ ಸಿಲುಕಿ ಹಾಳಾಗುತ್ತಿದೆ. ದೇವಸ್ಥಾನದ ಹಣ ನೀರಲ್ಲಿ ಹಾಕಿದಂತಾಗಿದೆ.

ಟೆಂಡರ್ ಕರೆದಿಲ್ಲ: ಗಾಳಿ, ಮಳೆಗೆ ಗುಣಮಟ್ಟದ ಸಾಮಗ್ರಿಗಳನ್ನು ಸಂರಕ್ಷಿಸಲು ಸಾರ್ವಜನಿಕರು ಅಂದೇ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಅಧಿಕಾರಿಗಳು ಸಾಮಗ್ರಿಗಳ ಸಂರಕ್ಷಣೆಗೆ ಮಾಡಿಲ್ಲ ಅಥವಾ ಟೆಂಡರ್ ಕರೆದು ದೇವಸ್ಥಾನಕ್ಕೆ ಆದಾಯ ಬರುವಂತೆಯೂ ನೋಡಿಕೊಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ವಹಿಸಿದ್ದರಿಂದಲೇ ಲಕ್ಷಾಂತರ ಬೆಲೆ ಬಾಳುವ ಕಟ್ಟಿಗೆ ಹಾಳಾಗುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂಬುದು ಭಕ್ತರ ಆಗ್ರಹವಾಗಿದೆ.

ರಥಕ್ಕೆ ಹೊಸ ಸ್ಪರ್ಶ ನೀಡುವ ಮೊದಲೇ ಹಳೇ ಗಾಲಿ, ಇರುಸು ಸುರಕ್ಷಿತವಾಗಿ ಇಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ರಥಕ್ಕೆ ಹೊಸ ಸಾಮಗ್ರಿ ಜೋಡಿಸಿದ ಬಳಿಕ ಹಳೇ ಸಾಮಗ್ರಿಗಳ ರಕ್ಷಣೆಯಾಗಲಿಲ್ಲ. ಇದರಿಂದ ದೇವಸ್ಥಾನದ ಲಕ್ಷಾಂತರ ರು. ನಿರುಪಯುಕ್ತವಾಗಿದೆ. ಈ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಭಕ್ತ ಹನುಮಂತರೆಡ್ಡಿ ತಿಳಿಸಿದ್ದಾರೆ.

ಗಾಲಿ, ಇರುಸುಗಳು ದೇವರ ಕಟ್ಟಿಗೆಯಾಗಿದ್ದರಿಂದ ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ. ಈ ಬಗ್ಗೆ ದತ್ತಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ದೇವಸ್ಥಾನದ ಇಒ ವಿಶ್ವನಾಥ ಮುರುಡಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೂರು ದಿನಗಳ ಅರಿವು ಕಾರ್ಯಕ್ರಮಕ್ಕೆ ಕ್ರಿಯಾ ಯೋಜನೆ ರೂಪಿಸಿ: ಜಿಲ್ಲಾಧಿಕಾರಿ ದಿವ್ಯ ಪ್ರಭು
ಶ್ರಮ, ಆತ್ಮವಿಶ್ವಾಸದಿಂದ ಕ್ರೀಡೆಯಲ್ಲಿ ಉನ್ನತ ಮಟ್ಟದ ಸಾಧನೆ ಸಾಧ್ಯ