ಹೂವಿನಹಡಗಲಿ: ದಾಸ ಸಾಹಿತ್ಯದಲ್ಲಿ ಉಗ ಭೋಗ, ಕೀರ್ತನೆಗಳು, ಕವಿತೆಗಳ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ದಾಸ ಶ್ರೇಷ್ಠ ಭಕ್ತ ಕನಕದಾಸರು ಶ್ರಮಿಸಿದ್ದಾರೆಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ. ಕೊಟ್ರಗೌಡ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ತಾಪಂ ಇಒ ಜಿ. ಪರಮೇಶ್ವರ ಮಾತನಾಡಿ, ಕನಕದಾಸರಿಗೆ ಅಬ್ಬರ ಆಡಂಬರದ ಭಕ್ತಿ ಬೇಕಿಲ್ಲ, ನಿಜ ಭಕ್ತಿ ಇದ್ದರೇ ಸಾಕು ಅವರ ಆದರ್ಶ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ನೆಮ್ಮದಿ ಬದುಕು ನಡೆಸಲು ಸಾಧ್ಯವಿದೆ. ಕನಕದಾಸರ ಭಕ್ತಿ ಪರಕಾಷ್ಠೆಗೆ ಕೃಷ್ಣನ ದರ್ಶನ, ಯಮನ ಕೋಣ ದರ್ಶನ, ಕಾಗಿನೆಲೆ ಆದಿ ಕೇಶವನ ದರ್ಶನ ಪಡೆದಿದ್ದಾರೆ. ಇವರೊಬ್ಬ ಕವಿ ಅಲ್ಲ ತತ್ವಜ್ಞಾನಿಯಾಗಿದ್ದು, ಇವರ ಬರಹಗಳು ಇಂದಿಗೂ ಪ್ರಸ್ತುತವಾಗಿವೆ. ಸರಳ ಭಾಷೆಯಲ್ಲಿ ಸಾಹಿತ್ಯ ರಚಿಸಿದ್ದಾರೆಂದು ಹೇಳಿದರು.
ಶಿಕ್ಷಕ ಹಡಗಲಿ ಬಸವರಾಜ ಉಪನ್ಯಾಸ ನೀಡುತ್ತಾ, ಇಡೀ ದಾಸ ಪರಂಪರೆಯಲ್ಲಿ ಶೂದ್ರ ದಾಸರಾಗಿರುವ ಕನಕದಾಸರನ್ನು ಒಂದು ಸಮಾಜಕ್ಕೆ ಮೀಸಲು ಮಾಡಬಾರದು, ಇವರ ಕೀರ್ತನೆ ಬದುಕಿಗೆ ದಾರಿದೀಪವಾಗಿವೆ, ರಾಮಧಾನ್ಯ ಚರಿತೆ, ಹರಿಭಕ್ತ ಸಾರ, ಮೋಹನ ತರಂಗಿಣಿ ಇವರ ಶ್ರೇಷ್ಠ ಕೃತಿಗಳಾಗಿದ್ದು, ಕನಕದಾಸರ ಜೀವನ ಸಂದೇಶ ಇಂದಿನ ಯುವ ಪೀಳಿಗೆಗೆ ತಲುಪಿಸಬೇಕಿದೆ ಎಂದರು. ಸಮಾಜದ ಮುಖಂಡ ಎಂ.ಪರಮೇಶ್ವರಪ್ಪ, ಮಾವು ಅಭಿವೃದ್ಧಿ ಮಾರಾಟ ಮಹಾ ಮಂಡಳಿ ನಿರ್ದೇಶಕ ಬಿ.ಹನುಮಂತಪ್ಪ ಮಾತನಾಡಿದರು. ಈಟಿ ಲಿಂಗರಾಜ, ಎಚ್. ವಿಶ್ವನಾಥ, ಈಟಿ ಹನುಮೇಶ, ಉಪ ತಹಸೀಲ್ದಾರ್ ಕೊಟ್ರಮ್ಮ, ಈಟಿ ಮಾಲತೇಶ, ಮಲ್ಲಿಕಾರ್ಜುನ ಪೂಜಾರ್, ಹನುಮಂತಪ್ಪ, ಬಿಇಒ ಕೆ.ಮಂಗಳಾ, ಬಿಸಿಎಂ ಅಧಿಕಾರಿ ವಿ. ರಮೇಶ ಸೇರಿದಂತೆ ಇತರರಿದ್ದರು.ಇದೇ ವೇಳೆ ಕರಾಟೆಯ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ವಿಜೇತಳಾಗಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಮಾಗಳ ಗ್ರಾಮದ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ನೀಲಮ್ಮ ಇವರನ್ನು ಸನ್ಮಾನಿಸಲಾಯಿತು.