ವಿರಾಜಪೇಟೆ: ಸಮೀಪದ ಬೆಟೋಳಿ ಗ್ರಾಮದ ರಾಮನಗರದ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಹುತ್ತರಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ವಿರಾಜಪೇಟೆ: ಸಮೀಪದ ಬೆಟೋಳಿ ಗ್ರಾಮದ ರಾಮನಗರದ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಹುತ್ತರಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ವಿಶ್ವನಾಥ್ ಭಟ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ಜರುಗಿದವು. ಅರ್ಚಕರು ಮೊದಲಿಗೆ ದೇವಸ್ಥಾನದ ಒಳ ಆವರಣದಲ್ಲಿರುವ ಶ್ರೀ ಮಹಾಗಣಪತಿ ದೇವರ ಗುಡಿಯಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಪೂಜೆಯನ್ನು ಸಲ್ಲಿಸಿದರು. ತದನಂತರ ಶ್ರೀ ನಾಗ, ಶ್ರೀ ವನದುರ್ಗ ದೇವಿಗೆ ಪೂಜೆಯನ್ನು ಸಲ್ಲಿಸಲಾಯಿತು. ಬಳಿಕ ಶ್ರೀ ಅಯ್ಯಪ್ಪ ಸ್ವಾಮಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿ ನೆರೆ ಕಟ್ಟಲಾಯಿತು. ದೇವಸ್ಥಾನದ ಆಡಳಿತ ಮಂಡಳಿಯವರು ಹಾಗೂ ಭಕ್ತಾದಿಗಳ ಜೊತೆಗೂಡಿ ತೆರಳಿ ಸಮೀಪದ ಮಕ್ಕಿಮನೆ ಬಿ ಆರ್ ಶ್ರೀನಿವಾಸ್ ಅವರ ಗದ್ದೆಗೆ ತೆರಳಲಾಯಿತು. ಭತ್ತದ ಕದಿರನ್ನು ತೆಗೆಯುವ ಸ್ಥಳದಲ್ಲಿ ಬಾಳೆಯನ್ನು ಕಟ್ಟುವುದರ ಮೂಲಕ ತೋರಣ ಹಾಗೂ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಅರ್ಚಕರು ಧಾನ್ಯಲಕ್ಷ್ಮಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆಯನ್ನು ಸಲ್ಲಿಸಿದರು. ಧಾನ್ಯ ಲಕ್ಷ್ಮಿಗೆ ಹಾಲಿನ ಅಭಿಷೇಕವನ್ನು ಮಾಡಿದರು. ಹಣ್ಣುಕಾಯಿಯನ್ನು ಮಾಡುವುದರ ಮೂಲಕ ಮಹಾಮಂಗಳಾರತಿಯನ್ನು ನೆರವೇರಿಸಿದರು. ಬಳಿಕ ಕದಿರನ್ನು ತೆಗೆಯಲಾಯಿತು. ನೆರೆದಿದ್ದ ಭಕ್ತರು ಪೋಲಿ ಪೋಲಿಯೇ ದೇವಾ ಎಂಬುದಾಗಿ ಉದ್ಗಾರವನ್ನು ಮಾಡಿದರು. ಮಾತ್ರವಲ್ಲದೆ ಕಾವೇರಮ್ಮೆ ಇಗ್ಗುತ್ತಪ್ಪ ದೇವರ ಸ್ಮರಣೆಯನ್ನು ಮಾಡುವುದರ ಮೂಲಕ ಪ್ರಾರ್ಥಿಸಿದರು. ಅರ್ಚಕರು ನೆರೆದಿದ್ದ ಭಕ್ತಾದಿಗಳಿಗೆ ಕದಿರನ್ನು ವಿತರಿಸಿದರು. ತದನಂತರ ದೇವಸ್ಥಾನಕ್ಕೆ ಕದಿರನ್ನು ತೆಗೆದುಕೊಂಡು ಹೋಗಲಾಯಿತು. ಶ್ರೀ ಅಯ್ಯಪ್ಪ ಸ್ವಾಮಿ ದೇವರ ಗುಡಿಯ ಎದುರುಗಡೆ ಭತ್ತದ ಕದಿರನ್ನು ಇಡುವುದರ ಮೂಲಕ ಅರ್ಚಕರು ವಿಶೇಷ ಪೂಜೆಯನ್ನು ಸಲ್ಲಿಸಿದರು. ಭಕ್ತರು ಧಾನ್ಯಲಕ್ಷ್ಮಿಗೆ ನಮಿಸಿದರು. ಶ್ರೀ ಅಯ್ಯಪ್ಪ ಸ್ವಾಮಿಗೆ ಅರ್ಚನೆ ,ನೈವೇದ್ಯ ಸಮರ್ಪಣೆ, ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ ಇನ್ನು ಮುಂತಾದ ಸೇವೆಗಳು ಸಲ್ಲಿಕೆಯಾದವು. ತದನಂತರ ಅರ್ಚಕರು ಪ್ರಾರ್ಥನೆಯನ್ನು ಸಲ್ಲಿಸಿ, ಮಹಾ ಮಂಗಳಾರತಿಯನ್ನು ನೆರವೇರಿಸಿದರು. ಬಳಿಕ ನೆರೆದಿದ್ದ ಭಕ್ತರಿಗೆ ಪ್ರಸಾದ ವಿತರಣೆಯು ಜರುಗಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷ ಶೈಲೇಶ್, ಕಾರ್ಯದರ್ಶಿ ಶಾಂತಿಭೂಷಣ್, ಖಜಾಂಚಿ ಜ್ಯೋತಿ, ಸದಸ್ಯರುಗಳಾದ ಸುಮನ, ರಾಮಶರ್ಮ, ವಾಸುದೇವ, ಸೀತಮ್ಮ, ತೀರ್ಥರಾಮ, ಮಕ್ಕಿಮನೆ ಗದ್ದೆಯ ಮಾಲೀಕರುಗಳಾದ ಬಿ ಆರ್ ಶ್ರೀನಿವಾಸ್ ಹಾಗೂ ಸೂರಜ್ ಬಿ ಪಿ ಉಪಸ್ಥಿತರಿದ್ದರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಸಂದರ್ಭದಲ್ಲಿ ಹಾಜರಿದ್ದರು. ಭಕ್ತರು ಈ ಸಂದರ್ಭದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.