ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರು ತಮ್ಮ ಪತ್ನಿ ಹಾಗೂ ಕುಟುಂಬ ಸದಸ್ಯರೊಂದಿಗೆ ಕೊಡಗಿನ ಮಡಿಕೇರಿಯಲ್ಲಿರುವ ಐತಿಹಾಸಿಕ ಶ್ರೀ ಓಂಕಾರೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮಡಿಕೇರಿ: ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರು ತಮ್ಮ ಪತ್ನಿ ಹಾಗೂ ಕುಟುಂಬ ಸದಸ್ಯರೊಂದಿಗೆ ಕೊಡಗಿನ ಮಡಿಕೇರಿಯಲ್ಲಿರುವ ಐತಿಹಾಸಿಕ ಶ್ರೀ ಓಂಕಾರೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.ಕುಟುಂಬದೊಂದಿಗೆ ಮಡಿಕೇರಿಗೆ ಪ್ರವಾಸ ಕೈಗೊಂಡಿದ್ದ ರೈನಾ ಅವರು, ಪ್ರಸಿದ್ಧ ಓಂಕಾರೇಶ್ವರ ಸ್ವಾಮಿಯ ದರ್ಶನ ಪಡೆದು ಆಶೀರ್ವಾದ ಕೋರಿದರು.ದೇವಾಲಯ ಭೇಟಿಯ ಸುಂದರ ಕ್ಷಣಗಳನ್ನು ಮತ್ತು ಫೋಟೋಗಳನ್ನು ಸುರೇಶ್ ರೈನಾ ಅವರು ತಮ್ಮ ಅಧಿಕೃತ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಹಂಚಿಕೊಂಡಿದ್ದು, ‘ಕೆಲವು ಸ್ಥಳಗಳು ಮನಸ್ಸಿಗೆ ಅಪಾರ ಶಾಂತಿಯನ್ನು ನೀಡುತ್ತವೆ’ ಎಂದು ತಮ್ಮ ಭಕ್ತಿಯ ಅನುಭವವನ್ನು ವ್ಯಕ್ತಪಡಿಸಿದ್ದಾರೆ.
ನೆಚ್ಚಿನ ಕ್ರಿಕೆಟಿಗನನ್ನು ಮಡಿಕೇರಿಯಲ್ಲಿ ಕಂಡ ಸ್ಥಳೀಯ ಅಭಿಮಾನಿಗಳು ಹಾಗೂ ಪ್ರವಾಸಿಗರು ಸಂತಸ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳು ವೈರಲ್ ಆಗಿವೆ.ಕೊಡಗಿಗೆ ಆಗಮಿಸಿರುವ ರೈನಾ ಹಾಗೂ ಕುಟುಂಬ ಮಡಿಕೇರಿ ಸಮೀಪದ ಖಾಸಗಿ ರೆಸಾರ್ಟ್ ವೊಂದರಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂದು ತಿಳಿದು ಬಂದಿದೆ.