- ಕುರುಬರಹಳ್ಳಿ ಗ್ರಾಮದಲ್ಲಿ ಶ್ರೀ ಭಕ್ತಶ್ರೇಷ್ಟ ಕನಕದಾಸರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ಅನಾವರಣ
ನಾಡಿಗೆ ದಾಸಶ್ರೇಷ್ಠ ಕನಕದಾಸರು ಮತ್ತು ಸಂಗೊಳ್ಳಿ ರಾಯಣ್ಣನವರ ಕೊಡುಗೆ ಅಪಾರ. ಕನಕರ ಕೀರ್ತನೆಗಳು ಜನರಲ್ಲಿ ಜಾಗೃತಿ ಮೂಡಿಸಿದರೆ, ರಾಯಣ್ಣ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿ ರಾಷ್ಟ್ರದ ಏಕತೆಗೆ ದುಡಿದ ಮಹಾಚೇತನ ಎಂದು ರಾಜ್ಯ ಪರಿಸರ ಮೌಲ್ಯ ಮಾಪನ ಪ್ರಾಧಿಕಾರ ಅಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.ತಾಲೂಕಿನ ಮರ್ಲೆ ಸಮೀಪದ ಕುರುಬರಹಳ್ಳಿ ಗ್ರಾಮದಲ್ಲಿ ಶ್ರೀ ಭಕ್ತಶ್ರೇಷ್ಠ ಕನಕದಾಸರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.ಕುಲ ಕುಲವೆಂದು ಹೊಡೆದಾಡದಿರಿ ಎಂಬ ಕೀರ್ತನೆಯೊಂದಿಗೆ ನಾಡಿನಾದ್ಯಂತ ಕನಕದಾಸರು ಸಂಚರಿಸಿ ಜನರ ಮನಸ್ಸಿನಲ್ಲಿದ್ದ ಮೇಲು ಕೀಳೆಂಬ ವಿಷ ಬೀಜವನ್ನು ಕಿತ್ತೆಸೆಯಲು ಶ್ರಮಿಸಿದವರು. ದಾಸಶ್ರೇಷ್ಠರ ವಾಣಿಯಂತೆ ನಾಡಿನ ಕುರುಬ ಸಮಾಜ ಕನಕದಾಸರ ಹಾದಿಯಲ್ಲಿ ಸಾಗಿ, ಸಂದೇಶ ಅಳವಡಿಸಿಕೊಂಡು ಜೀವಿಸುತ್ತಿದೆ ಎಂದು ತಿಳಿಸಿದರು.ಸಮ ಸಮಾಜದ ನಿರ್ಮಾಣಕ್ಕೆ ಕನಕದಾಸರು ತಮ್ಮ ಅಮೂಲ್ಯ ಕೀರ್ತನೆಗಳ ಮೂಲಕ ಸಮಾಜದ ದೃಷ್ಟಿಕೋನ ಬದಲಿದ ಶ್ರೇಷ್ಠರು. ಇಂದು ಕುರುಬ ಸಮಾಜ ಎಲ್ಲಾ ಜಾತಿ, ಧರ್ಮದೊಂದಿಗೆ ಒಟ್ಟಾಗಿ ಜೀವಿಸುವ ಮೂಲಕ ಮನುಷ್ಯ ಕುಲ ಒಂದೇ ಎಂಬ ಮಾನವೀಯ ಮೌಲ್ಯಗಳು ಹಾಗೂ ಕನಕದಾಸರ ವಾಣಿಯಂತೆ ಜೀವನ ನಡೆಸುತ್ತಿದೆ ಎಂದರು. ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ ಕಿತ್ತೂರು ರಾಣಿ ಚೆನ್ನಮ್ಮ ಆಪ್ತರಾಗಿ ನಂಬಿಕೆ, ವಿಶ್ವಾಸ ಹಾಗೂ ಬಲಗೈ ಭಂಟನಾಗಿ ರಾಷ್ಟ್ರದ ಏಳಿಗೆಗೆ ಹೋರಾಡಿದ ಧೀಮಂತ ನಾಯಕ. ಪ್ರಸ್ತುತ ಹಾಲು ಕೆಡಬಹುದು, ಆದರೆ, ಹಾಲುಮತ ಸಮಾಜ ಎಂದಿಗೂ ಕೆಡುವುದಿಲ್ಲ ಎಂಬ ನಾಣ್ನುಡಿಯಂತೆ ಕುರುಬರು ತಮ್ಮದೇ ಶೈಲಿಯಲ್ಲಿ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದಾರೆ ಎಂದು ಹೇಳಿದರು.ರಾಷ್ಟ್ರ ಹಾಗೂ ರಾಜ್ಯದಲ್ಲಿ ಕುರುಬ ಜನಾಂಗದ ಸೇವೆ ಅಪಾರವಿದೆ. ಅಶೋಕ ಚಕ್ರವರ್ತಿ, ಕಾಳಿದಾಸ, ಚಂದ್ರಗುಪ್ತ ಮೌರ್ಯ ಕುರುಬ ಜನಾಂಗದವರಾಗಿ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ 16 ಬಜೆಟ್‌ಗಳನ್ನು ಮಂಡಿಸಿ ಅರ್ಥಶಾಸ್ತ್ರಜ್ಞರಾಗುವ ಮೂಲಕ ಕುರುಬ ಸಮಾಜದ ಶಕ್ತಿ ಹೆಚ್ಚಿಸಿದ್ದಾರೆ ಎಂದರು.ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ ಗ್ರಾಮದಲ್ಲಿ ನಾಡಿನ ಶ್ರೇಷ್ಠ ವ್ಯಕ್ತಿಗಳ ವಿಗ್ರಹ ಸ್ಥಾಪಿಸಿ ಇಡೀ ಗ್ರಾಮವೇ ಹಬ್ಬದಂತೆ ಆಚರಿಸುತ್ತಿರುವುದು ಒಳ್ಳೆಯ ಸಂಗತಿ. ಸಮಾಜದ ಏಳಿಗೆಗೆ ಶ್ರಮಿಸಿರುವ ಕನಕದಾಸರು, ರಾಯಣ್ಣವರನ್ನು ಪೂಜಿಸಿ, ವಿಚಾರಧಾರೆಗಳನ್ನು ಮಕ್ಕಳಿಗೆ ಪರಿಚಯಿಸುವ ಮುಖೇನಾ ಮಾದರಿ ಗ್ರಾಮವನ್ನಾಗಿ ರೂಪಿಸಬೇಕು ಎಂದರು.ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ಕನಕದಾಸರು ದೈವಭಕ್ತರಾದರೆ, ಸಂಗೊಳ್ಳಿ ರಾಯಣ್ಣ ದೇಶಭಕ್ತರು. ಅವರ ಜೀವನಾದರ್ಶಗಳು ಪ್ರತಿ ಯುವ ಜನಾಂಗಕ್ಕೆ ಸಾರ್ಥಕ ವಾಗಲಿದೆ. ವಿಶೇಷವಾಗಿ ಭಗವಂತ ಶ್ರೀ ಕೃಷ್ಣನನ್ನು ತನ್ನೆಡೆಗೆ ಒಲಿಸಿಕೊಂಡ ಕನಕದಾಸರು ಭಕ್ತಶ್ರೇಷ್ಠರಾದರು ಎಂದು ಹೇಳಿದರು.ತಾಲೂಕು ಕುರುಬರ ಸಂಘದ ಅಧ್ಯಕ್ಷ ಮಣೇನಹಳ್ಳಿ ರಾಜು ಮಾತನಾಡಿ, ಗ್ರಾಮದಲ್ಲಿ ಪ್ರತಿಮೆ ಸ್ಥಾಪಿಸಿದರೆ ಸಾಲದು. ಪ್ರತಿನಿತ್ಯ ಗ್ರಾಮಸ್ಥರು ಸ್ವಚ್ಛತೆ, ಪೂಜಾ ಕೈಂಕರ್ಯ ನಡೆಸುವ ಮೂಲಕ ಶ್ರೇಷ್ಠ ವ್ಯಕ್ತಿಗಳ ಸ್ಥಳವನ್ನು ಅಚ್ಚುಕಟ್ಟು ನಿರ್ವಹಿಸ ಬೇಕು. ಪ್ರತಿಮೆಗೆ ಚ್ಯುತಿ ಬಾರದಂತೆ ಜೋಪಾನಗೊಳಿಸುವುದು ಗ್ರಾಮಸ್ಥರ ಮುಖ್ಯ ಜವಾಬ್ದಾರಿ ಎಂದರು. ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಮಾತನಾಡಿ, ಕನಕದಾಸರು ಮತ್ತು ರಾಯಣ್ಣವರ ವಿಚಾರಧಾರೆ ತಿಳಿಸಲು ದಿನ ಗಟ್ಟಲೇ ಸಾಲದು. ಕನಕರ ವಾಣಿಯಂತೆ ಅಜ್ಞಾನಿಗಳ ಅಧಿಕ ಸ್ನೇಹಕ್ಕಿಂತ, ಸುಜ್ಞಾನಿಗಳ ಜೊತೆ ಜಗಳವಾಡುವುದೇ ಲೇಸು. ಹೆಚ್ಚು ಸಮಯ ಸಜ್ಜನರೊಂದಿಗೆ ಸ್ನೇಹ ಬೆಳೆಸಿ, ಭಕ್ತಶ್ರೇಷ್ಠರ ಕೀರ್ತನೆ ಮತ್ತು ರಾಯಣ್ಣ ಬದುಕನ್ನು ಆದರ್ಶ ವಾಗಿಸಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಪಂ ಮಾಜಿ ಅಧ್ಯಕ್ಷೆ ಶಾರದ ಮಾಸ್ತೇಗೌಡ, ನಾಡಿನ ಶ್ರೇಷ್ಠರ ಜೀವನ ಚರಿತ್ರೆ ತಿಳಿಸುವ ಸಲುವಾಗಿ ಗ್ರಾಮದಲ್ಲಿ ಭಕ್ತಶ್ರೇಷ್ಠ ಕನಕದಾಸರು, ಸಂಗೊಳ್ಳಿ ರಾಯಣ್ಣ ನವರ ಪ್ರತಿಭೆ ನಿರ್ಮಿಸುವ ಮೂಲಕ ಮುಂದಿನ ಪೀಳಿಗೆಗೆ ಕುರುಬರು ಸಲ್ಲಿಸಿದ ಸೇವೆ ಪರಿಚಯಿಸಲಾಗುತ್ತಿದೆ ಎಂದು ಹೇಳಿದರು.ಇದೇ ವೇಳೆ ಗ್ರಾಮದಲ್ಲಿ ನಿರ್ಮಾಣಗೊಂಡ ಶ್ರೀ ಕನಕದಾಸರು ಮತ್ತು ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಸರ್ವರು ಪುಷ್ಪಾ ರ್ಚನೆ ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎಸ್. ಶಾಂತೇಗೌಡ, ಜಿಪಂ ಮಾಜಿ ಸದಸ್ಯ ಕೆ.ವಿ.ಮಂಜುನಾಥ್, ಗ್ರಾಪಂ ಮಾಜಿ ಅಧ್ಯಕ್ಷ ಕೆ.ಇ. ಮಂಜೇಗೌಡ, ಕೆಂಚೇಗೌಡ, ತಾಪಂ ಮಾಜಿ ಉಪಾಧ್ಯಕ್ಷ ಧರ್ಮೇಗೌಡ, ಅಂಬಳೆ ಬಿಜೆಪಿ ಹೋಬಳಿ ಉಪಾಧ್ಯಕ್ಷ ಕೆ.ಸಿ.ಮಾಸ್ತೇಗೌಡ, ಮುಖಂಡರಾದ ಕೃಷ್ಣೇಗೌಡ, ಬಲರಾಮ್, ಚಿಕ್ಕೇಗೌಡ, ಚಂದ್ರೇಗೌಡ, ಎಂ.ಸಿ. ರಮೇಶ್, ತಮ್ಮೇಗೌಡ ಉಪಸ್ಥಿತರಿದ್ದರು. 25 ಕೆಸಿಕೆಎಂ 3ಚಿಕ್ಕಮಗಳೂರು ತಾಲೂಕಿನ ಮರ್ಲೆ ಸಮೀಪದ ಕುರುಬರಹಳ್ಳಿ ಗ್ರಾಮದಲ್ಲಿ ಶ್ರೀ ಭಕ್ತಶ್ರೇಷ್ಠ ಕನಕದಾಸರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ಅನಾವರಣ ಕಾರ್ಯಕ್ರಮ ಗುರುವಾರ ನಡೆಯಿತು. ಎ.ಎನ್.ಮಹೇಶ್, ಕೆ.ಎಸ್. ಶಾಂತೇಗೌಡ, ಕೆ.ವಿ. ಮಂಜುನಾಥ್, ಶಾರದ ಮಾಸ್ತೇಗೌಡ ಇದ್ದರು.