ಕಾರಟಗಿ:
ತಾಲೂಕಿನ ಬೇವಿನಾಳದಲ್ಲಿ ಕನಕದಾಸರ ಮೂರ್ತಿ ಭಗ್ನಗೊಳಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಪೊಲೀಸರು ಈಗಾಗಲೇ ಅನಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲು ಸೂಚಿಸಲಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.ತಾಲೂಕಿನ ಬೇವಿನಾಳಕ್ಕೆ ಶನಿವಾರ ಭೇಟಿ ನೀಡಿ ಭಗ್ನಗೊಂಡ ಕನಕದಾಸ ಮೂರ್ತಿ ಪರಿಶೀಲಿಸಿದ ಸಚಿವರು, ಹಾಲುಮತ ಸಮಾಜದ ಮುಖಂಡರೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಪೊಲೀಸರು ಕೆಲ ಮಾಹಿತಿ ಕಲೆ ಹಾಕಿದ್ದು, ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಗ್ರಾಮದಲ್ಲಿ ಯಾವುದೇ ಸಿಸಿ ಕ್ಯಾಮೆರಾ ಇಲ್ಲದ ಕಾರಣಕ್ಕೆ ಸ್ವಲ್ಪ ತಡವಾಗಿದೆ. ಕೆಲ ತಾಂತ್ರಿಕ ಸಹಾಯದ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಬೇಕಾಗಿದೆ ಎಂದ ಅವರು, ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವು ಸಾಕ್ಷ್ಯಾಧಾರ, ಮಾಹಿತಿ ಸಂಗ್ರಹಿಸಿದ್ದಾರೆ. ಪ್ರಕರಣ ತನಿಖಾ ಹಂತದಲ್ಲಿ ಇರುವುದರಿಂದ ಏನೇನನ್ನು ಹೇಳುವುದಿಲ್ಲ ಎಂದರು.ಹೊಸ ಮೂರ್ತಿ ಪ್ರತಿಷ್ಠಾಪನೆ:
ಬೇವಿನಾಳಕ್ಕೆ ನೂತನ ಕನಕದಾಸರ ಮೂರ್ತಿ ಪ್ರತಿಷ್ಠಾಪಿಸಲಾಗುವುದು. ಈ ಕುರಿತು ಹಾಲುಮತ ಸಮಾಜದ ಮುಖಂಡರೊಂದಿಗೆ ಚರ್ಚಿಸಿದ್ದು ಹೊಸ ಮೂರ್ತಿ ಕಲ್ಲಿನ ಅಥವಾ ಫೈಬರ್‌ನಿಂದ ಪ್ರತಿಷ್ಠಾಪಿಸಲಾಗುವುದು ಎಂದು ಸಚಿವರು ಹೇಳಿದರು.ಈ ವೇಳೆ ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ, ತಹಸೀಲ್ದಾರ್ ಎಂ. ಕುಮಾರಸ್ವಾಮಿ, ತಾಪಂ ಇಒ ಲಕ್ಷ್ಮೀದೇವಿ, ಕಂದಾಯ ನಿರೀಕ್ಷಕಿ ಸಂಗಮ್ಮ ಹಿರೇಮಠ, ಹಾಲುಮತ ಸಮಾಜದ ಹಿರಿಯರಾದ ಜನಗಂಡೆಪ್ಪ ಪೂಜಾರಿ, ಹನುಮಂತಪ್ಪ ಶಾಲಿಗನೂರು, ನಿವೃತ್ತ ಪಿಎಸ್‌ಐ ಮಲ್ಲಪ್ಪ, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಉಮೇಶ ಭಂಗಿ, ಶರಣಪ್ಪ ಪರಕಿ, ಹನುಮಂತಪ್ಪ ವಾಲಿಕಾರ್, ಲಿಂಗಪ್ಪ ಗೌರಿಪುರ, ಹುಲುಗಪ್ಪ ಪೂಜಾರಿ, ರಾಮಚಂದ್ರ ವಕೀಲ, ರಮೇಶ ಕುಂಟೋಜಿ, ದೇವಪ್ಪ ಬಾವಿಕಟ್ಟೆ, ಅಗರೆಪ್ಪ ಕೊಟ್ನೆಕಲ್, ಕಾರಮಿಂಚಂಪ್ಪ ಜಮಾಪುರ, ಅಮರೇಶ ತಳವಾರ ಬರಗೂರು, ಬಸಪ್ಪ ಶಾಲಿಗನೂರು, ಶಿವಪ್ಪ ಬೇವಿನಾಳ, ಹೂವಪ್ಪ ಸಾಹುಕಾರ, ದ್ಯಾವಣ್ಣ ಕಬ್ಬೆರ್ ಇದ್ದರು.