- ಚಿಕ್ಕಮಗಳೂರಿನಲ್ಲಿ ಭಕ್ತ ಶ್ರೇಷ್ಠ ಕನಕದಾಸರ ಜಯಂತ್ಯುತ್ಸವ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಭಕ್ತ ಹಾಗೂ ಭಗವಂತನ ಸಂಬಂಧವನ್ನು ಸಾಕ್ಷಾತ್ಕರಿಸಿ ತೋರಿಸಿದವರು ಭಕ್ತ ಶ್ರೇಷ್ಠ ಕನಕದಾಸರು. ಭಕ್ತಿ ಪರಾಕಾಷ್ಠೆಗೆ ಮತ್ತೊಂದು ಉದಾಹರಣೆಯೂ ಅವರೆ. ಆಧ್ಯಾತ್ಮಿಕ ಉನ್ನತಿಯ ನಿದರ್ಶನವೂ ಅವರೆ. ಹೀಗಾಗಿ 538 ವರ್ಷಗಳ ನಂತರವೂ ಸಮಾಜಕ್ಕೆ ಪ್ರೇರಣೆಯಾಗಿ ಜನಮಾನಸದಲ್ಲಿ ಉಳಿದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.ಜಿಲ್ಲಾಡಳಿತದಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ನಡೆದ ಭಕ್ತ ಶ್ರೇಷ್ಠ ಕನಕದಾಸರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು. ಧಾರ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸಲು ಭಾರತದಲ್ಲಿ ಭಕ್ತಿ ಚಳುವಳಿ ಆಯಾ ಕಾಲ ಕಾಲಕ್ಕೆ ತನ್ನ ಪ್ರಭಾವ ಬೀರುತ್ತಾ ಬಂದಿದೆ. ಪರಕೀಯ ಆಕ್ರಮಣಕಾರರು, ಈ ದೇಶದ ಸಂಸ್ಕೃತಿ ನಾಶ ಮಾಡಬೇಕೆಂದು ಬಂದವರನ್ನು ಜನಸಾಮಾನ್ಯರಲ್ಲಿದ್ದಂತಹ ಭಕ್ತಿ ಚಳುವಳಿಗಳು, ಭಕ್ತಿ, ಶ್ರದ್ಧೆ ಉದ್ದೇಶ ಸಾಧಿಸಲು ಹವಣಿಸಿದ ಅವರನ್ನು ಮಣಿಸಿತು. ಭೇದ ಅಳಿಸಿ, ವಿವಿಧತೆಯಲ್ಲಿ ಏಕತೆ ಎತ್ತಿ ಹಿಡಿದವರು ಕನಕದಾಸರು. ಬಸವಣ್ಣನವರು, ಕನಕದಾಸರು, ಪುರಂದರ ದಾಸರು, ಸಂತ ಶಿಶುನಾಳ ಶರೀಫರು, ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನಾವು ಗೌರವಿಸುತ್ತಿರುವುದು ಬದುಕಿನ ರೀತಿಯ ಕಾರಣಕ್ಕಾಗಿ ಎಂದರು.ಜಾತೀಯತೆ ಮತ್ತು ಅಸ್ಪೃಶ್ಯತೆ ಬಗ್ಗೆ ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದನೆಲೆಯನೇನಾದರೂ ಬಲ್ಲಿರಾ.. ಬಲ್ಲಿರಾ..? ಎಂದು ಪ್ರಶ್ನಿಸಿ ಮಾನವ ಕುಲದ ಸಮಾನತೆ ಎತ್ತಿ ಹಿಡಿದವರು ಕನಕದಾಸರು. ಭಗವಂತ ಕೂಡ ಕನಕದಾಸರ ಭಾವನೆಗೆ ಇಂಬು ಕೊಟ್ಟಂತೆ ಅವರಿರುವ ಕಡೆಗೇ ತಿರುಗಿ ದರ್ಶನ ನೀಡಿ ತಾನು ಭೇದ ಬಯಸುವವನಲ್ಲ ಎಂದು ಜಗತ್ತಿಗೆ ಸಂದೇಶ ನೀಡಿದ್ದಾನೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಶೋಷಿತ ವರ್ಗಕ್ಕೆ ದೊಡ್ಡ ಧ್ವನಿ ಯಾಗಿದ್ದವರು ಕನಕದಾಸರು. ಅವರು ಮೂಢನಂಬಿಕೆಗಳ ವಿರುದ್ಧ ಬಹಳ ಸೌಮ್ಯವಾಗಿ ಪ್ರತಿಭಟಿಸುತ್ತಿದ್ದ ಅದ್ಭುತ ಸಾಹಿತಿ, ಹೃದಯ ಸ್ವರ್ಶಿ ಸಂಗೀತಗಾರ ಮಾತ್ರವಲ್ಲ ಸಾಮಾಜಿಕ ಹೋರಾಟಗಾರರಾಗಿದ್ದವರು. ದಾಸ ಶ್ರೇಷ್ಠರ ಸಾಲಿನಲ್ಲಿ ಕನಕ ದಾಸರಿಗೆ ವಿಶಿಷ್ಟ ಸ್ಥಾನವಿದೆ. ಕವಿಗಳಾಗಿ, ಕೀರ್ತನಕಾರರಾಗಿ, ಸಾಹಿತ್ಯ, ಸಂಗೀತ ಹಾಗೂ ಆಧ್ಯಾತ್ಮಿಕ ಸ್ತರಗಳಲ್ಲಿ ಅವರ ಸಾಧನೆ ಸ್ಮರಣೀಯ ಎಂದು ಹೇಳಿದರು.ಬುದ್ದ, ಬಸವಣ್ಣ, ಕನಕದಾಸರು, ಡಾ.ಅಂಬೇಡ್ಕರ್ ಈ ಎಲ್ಲ ಮಹಾಪುರುಷರ ಜಯಂತಿಯನ್ನು ವರ್ಷದಲ್ಲಿ ಒಮ್ಮೆ ಆಚರಿಸು ತ್ತೇವೆ. ಅವರೆಲ್ಲ ಇಂತಹುದೇ ಧರ್ಮ ಬೇಕೆಂಬ ನಿರೀಕ್ಷೆಯಲ್ಲಿ ಹುಟ್ಟಲಿಲ್ಲ. ಇವರೆಲ್ಲ ಒಂದೊಂದು ಧರ್ಮದಲ್ಲಿ ಜನಿಸಿರ ಬಹುದು. ಆದರೆ, ಈ ನಾಲ್ವರು ಮಹಾನುಭಾವರ ವಿಚಾರಧಾರೆ, ವರ್ಣಬೇಧ ನೀತಿ ವಿರುದ್ಧದ ನಿಲುವು ಶೋಷಿತ ವರ್ಗದವರನ್ನು ಸಮಾಜದ ಮುನ್ನೆಲೆಗೆ ತರುವುದಕ್ಕೆ ಪೂರಕವಾಗಿತ್ತು. ಇವರೆಲ್ಲರ ಹೋರಾಟದ ನಡುವೆಯೂ ಈ ದೇಶದಲ್ಲಿ ಜಾತಿ ವ್ಯವಸ್ಥೆ ಸಂಪೂರ್ಣವಾಗಿ ನಶಿಸಿಲ್ಲ ಎನ್ನುವುದು ವಿಷಾದದ ಸಂಗತಿ. ಸಮ ಸಮಾಜದ ನಿರ್ಮಾಣಕ್ಕೆ ದುಡಿದ ಈ ಮಹಾಪುರುಷರು ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತರಲ್ಲ ಎಂದು ಹೇಳಿದರು. ಕಾರ್ಯಕ್ರಮಕ್ಕೆ ಮುನ್ನ ನಗರದ ತಾಲೂಕು ಕಚೇರಿ ಸಮೀಪ ಶ್ರೀ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಕುವೆಂಪು ಕಲಾಮಂದಿರದವರೆಗೆ ನಡೆದ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಗೊಂಬೆ ಕುಣಿತ, ನಾದಸ್ವರ, ಕನಕದಾಸರ ವೇಷಭೂಷಣಧಾರಿ ಮಕ್ಕಳು ಗಮನ ಸೆಳೆದರು.
ಕೇಂದ್ರದ ರಾಜ್ಯ ಪರಿಸರ ಮೌಲ್ಯ ಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್, ಉಪನ್ಯಾಸಕಿ ದೀಪಾ ಹಿರೇಗುತ್ತಿ ಕನಕದಾಸರ ಬಗ್ಗೆ ಉಪನ್ಯಾಸ ನೀಡಿದರು. ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ಉಪಾಧ್ಯಕ್ಷೆ ಲಲಿತಾಬಾಯಿ ರವಿನಾಯಕ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎಸ್.ಶಾಂತೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ, ತಾಲೂಕು ಕುರುಬರ ಸಂಘದ ಅಧ್ಯಕ್ಷ ರಾಜು, ರಾಜ್ಯ ಕುರುಬರ ಸಂಘದ ನಿರ್ದೇಶಕರಾದ ಪುಟ್ಟೇಗೌಡ ಹಾಗೂ ರೇಖಾ ಹುಲಿಯಪ್ಪಗೌಡ, ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಪಟ್ಟೇಗೌಡ, ಸಂಘದ ಜಿಲ್ಲಾ ಕಾರ್ಯದರ್ಶಿ ಪುಷ್ಪರಾಜ್, ಕನಕಶ್ರೀ ಮಹಿಳಾ ಸಮಾಜದ ಅಧ್ಯಕ್ಷೆ ಶಾರದಾ ಮಾಸ್ತೇಗೌಡ, ಮುಖಂಡರಾದ ಎಚ್.ಪಿ.ಮಂಜೇಗೌಡ, ಬೆಳವಾಡಿ ರವೀಂದ್ರ, ಈಶ್ವರಳ್ಳಿ ಮಹೇಶ್, ಚಂದ್ರೇಗೌಡ, ಕೆ.ವಿ.ಮಂಜುನಾಥ್, ಸುಜಾತಾ ಶಿವಕುಮಾರ್, ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ, ಜಿಲ್ಲಾ ಎಸ್ಪಿ ಡಾ.ವಿಕ್ರಮ್ ಅಮಟೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿ.ರಮೇಶ್ ಇದ್ದರು.8 ಕೆಸಿಕೆಎಂ 1
ಚಿಕ್ಕಮಗಳೂರಿನಲ್ಲಿ ಕುವೆಂಪು ಕಲಾಮಂದಿರದಲ್ಲಿ ಶನಿವಾರ ನಡೆದ ಭಕ್ತ ಶ್ರೇಷ್ಠ ಕನಕದಾಸರ ಜಯಂತ್ಯುತ್ಸವವನ್ನು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಉದ್ಘಾಟಿಸಿದರು. ಶಾಸಕ ಎಚ್.ಡಿ. ತಮ್ಮಯ್ಯ, ಗಾಯತ್ರಿ ಶಾಂತೇಗೌಡ, ಎ.ಎನ್. ಮಹೇಶ್, ರೇಖಾ ಹುಲಿಯಪ್ಪಗೌಡ ಇದ್ದರು.