ಕುಲಕುಲವೆಂದು ಹೊಡೆದಾಡದಿರಿ ಎಂದ ದಾಸ ಶ್ರೇಷ್ಠ ಕನಕದಾಸ

KannadaprabhaNewsNetwork | Published : Nov 19, 2024 12:45 AM

ಸಾರಾಂಶ

ಕನಕದಾಸರು 15, 16ನೇ ಶತಮಾನದಲ್ಲಿ ಕೀರ್ತನೆ, ಕಾವ್ಯಗಳ ಮುಖಾಂತರ ಅನೇಕ ಕೃತಿಗಳನ್ನು ರಚನೆ ಮಾಡಿ ಅದರ ಮುಖಾಂತರ ಸಮಾಜದಲ್ಲಿ ಸಮ ಸಮಾಜ ನಿರ್ಮಾಣ, ಸಮಾಜ ಸುಧಾರಣೆ, ಜಾತ್ಯತೀತ ಸಮಾಜ ಮಾಡಲು ಯತ್ನಿಸಿದರು ಎಂದು ಸಚಿವ ಖಂಡ್ರೆ ಅಭಿಪ್ರಾಯಪಟ್ಟರು,

ಕನ್ನಡಪ್ರಭ ವಾರ್ತೆ ಬೀದರ್ಭಕ್ತ ಶ್ರೇಷ್ಠ ಕನಕದಾಸರು ಅಂದಿನ ಜಾತಿ ವ್ಯವಸ್ಥೆಯಲ್ಲಿ ಮೇಲು ಕೀಳು ಎಂಬ ಭಾವನೆ ಹೋಗಲಾಡಿಸಲು ಪ್ರಯತ್ನಿಸಿದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಹೇಳಿದರು.ಸೋಮವಾರ ಬೋಮ್ಮಗೊಂಡೇಶ್ವರ ವೃತ್ತದಲ್ಲಿ ಭಕ್ತ ಶ್ರೇಷ್ಠ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಕನಕದಾಸರು 15, 16ನೇ ಶತಮಾನದಲ್ಲಿ ಕೀರ್ತನೆ, ಕಾವ್ಯಗಳ ಮುಖಾಂತರ ಅನೇಕ ಕೃತಿಗಳನ್ನು ರಚನೆ ಮಾಡಿ ಅದರ ಮುಖಾಂತರ ಸಮಾಜದಲ್ಲಿ ಸಮ ಸಮಾಜ ನಿರ್ಮಾಣ, ಸಮಾಜ ಸುಧಾರಣೆ, ಜಾತ್ಯತೀತ ಸಮಾಜ ಮಾಡಲು ಯತ್ನಿಸಿದರು.ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಶೋಷಣೆಯನ್ನು ನಿವಾರಣೆ ಮಾಡಲು ಮನುಕುಲವನ್ನು ಒಂದೇ ಎಂದ ಕನಕರು, ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನ್ನು ಬಲ್ಲಿರಾ, ಜೀವಕ್ಕೆ ಕುಲವಿದೆಯಾ, ಆತ್ಮಕ್ಕೆ ಕುಲವಿದೆಯಾ ಎಂದರಲ್ಲದೆ, ತಮ್ಮ ಸಂಪತ್ತು, ಸಂಸಾರ ತ್ಯಾಗ ಮಾಡಿ ಕೀರ್ತನೆ ಮೂಲಕ ನಾಡಿನಾದ್ಯಂತ ಸುತ್ತಾಡಿ ಧಾರ್ಮಿಕ ಜಾಗೃತಿ ಮಾಡಿದರು. ಹೀಗೆ ಸಮಾಜ ಸುಧಾರಣೆ ಮಾಡಿ ನಮಗೆಲ್ಲರಿಗೂ ಆದರ್ಶಗಳನ್ನು ನೀಡಿದ್ದಾರೆ. ಅವರು ಕೊಟ್ಟಂತಹ ವಿಚಾರಧಾರೆಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.ಇದಕ್ಕೂ ಮುನ್ನ ಭಕ್ತ ಶ್ರೇಷ್ಠ ಕನಕದಾಸರ ಭಾವಚಿತ್ರದ ಮೆರವಣಿಗೆಯು ಬಸವೇಶ್ವರ ವೃತ್ತ, ಭಗತಸಿಂಗ್‌ ವೃತ್ತ, ಡಾ.ಅಂಬೇಡ್ಕರ ವೃತ್ತ, ಹರಳಯ್ಯ ವೃತ್ತ, ರೋಟರಿ ವೃತ್ತದ ಮಾರ್ಗವಾಗಿ ರಂಗಮಂದಿರದವರೆಗೆ ನಡೆಯಿತು. ಮೆರವಣಿಗೆಯಲ್ಲಿ ಸಚಿವರಾದ ಈಶ್ವರ ಖಂಡ್ರೆ, ರಹೀಂ ಖಾನ್, ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ, ಅಮೃತರಾವ ಚಿಮಕೋಡೆ ಸೇರಿದಂತೆ ಇನ್ನಿತರ ಮುಖಂಡರು ಕುಣಿದು ಕುಪ್ಪಳಿಸಿದರು. ಕಾರ್ಯಕ್ರಮದಲ್ಲಿ ಪೌರಾಡಳಿತ ಸಚಿವರಾದ ರಹೀಂಖಾನ್, ಬೀದರ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಮಾಜಿ ಸಚಿವರಾದ ಬಂಡೆಪ್ಪಾ ಖಾಶಂಪೂರ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ ಚೀಮಕೋಡ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಸಹಾಯಕ ಆಯುಕ್ತರಾದ ಎಂ.ಡಿ.ಶಕೀಲ್, ನಗರಸಭೆ ಅಧ್ಯಕ್ಷ ಎಂ.ಡಿ.ಗೌಸ್, ಸದಸ್ಯರಾದ ಶಶಿ ಹೋಸಳ್ಳಿ, ಹಣಮಂತ ಮಲ್ಕಾಪೂರ, ಮುಖಂಡರಾದ ಬಾಬುರಾವ ಮಲ್ಕಾಪೂರೆ, ಮಲ್ಲಿಕಾರ್ಜುನ ಪರಿಹಾರ, ಮಾಳಪ್ಪ ಅಡಸಾರೆ, ಪಂಡಿತ ಚಿದ್ರಿ, ಈಶ್ವರಸಿಂಗ ಠಾಕೂರ, ಬಸವರಾಜ ಹೆಡೆ, ಪೀರಪ್ಪ ಯರನಳ್ಳಿ, ಲಲಿತಾ ಕರಂಜಿ, ರಾಜಕುಮಾರ ಕಂದಗೋಳ, ಸೋಮಶೇಖರ ಚಿದ್ರಿ, ತುಕಾರಾಮ ಚಿದ್ರಿ, ಗಣಪತರಾವ ಸೋಲಪುರ, ನಾಗರಾಜ ನಂದಗಾಂವ, ವಿಜಯಕುಮಾರ ಖಾಶೆಂಪೂರ, ಬಸವರಾಜ ಮಾಳಗೆ, ಚಂದ್ರಕಾಂತ ಹಿಪ್ಪಳಗಾಂವ ಸೇರಿದಂತೆ ಭಕ್ತ ಕನಕದಾಸರ ಅಭಿಮಾನಿಗಳು, ಮುಖಂಡರು ಸೇರಿದಂತೆ ಇತರರು ಉಪಸ್ಥಿತರಿದ್ದರು.ಕನಕದಾಸರ ಚಿಂತನೆಗಳು ಮನುಕುಲಕ್ಕೆ ಮಾರ್ಗದರ್ಶಿಔರಾದ್: ಕನಕದಾಸರ ಚಿಂತನೆಗಳು ಸಮಸ್ತ ಮನುಕುಲಕ್ಕೆ ಮಾರ್ಗದರ್ಶಕವಾಗಿವೆ ಎಂದು ಮಾಜಿ ಸಚಿವ ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ತಿಳಿಸಿದರು.ಕನಕದಾಸರ ಜಯಂತಿಯ ನಿಮಿತ್ತ ಔರಾದ(ಬಿ) ತಾಲ್ಲೂಕಿನ ಬೋಂತಿ ತಾಂಡಾದಲ್ಲಿನ ಗೃಹ ಕಛೇರಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ, ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಕನಕದಾಸರು ನಾಡು ಕಂಡ ಶ್ರೇಷ್ಠ ಸಂತರಲ್ಲಿ ಒಬ್ಬರಾಗಿದ್ದರು. ಅಧ್ಯಾತ್ಮಕತೆಯನ್ನು ಮೈಗೂಡಿಸಿಕೊಂಡಿದ್ದ ಅವರು ಸಮಾಜದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದರು ಎಂದರು. ಈ ಸಂದರ್ಭದಲ್ಲಿ ಸಚಿನ ರಾಠೋಡ, ಸುಭಾಷ ರಾಠೋಡ, ಗಜಾಧರ ರಾಠೋಡ, ದಾದಾರಾವ ಪವಾರ, ಬಳವಂತ ಪವಾರ, ಮನೋಹರ ಕಲಾಟೆ, ಕಂಟೆಪ್ಪ ಜೀರ್ಗೆ, ಅಭಿಜಿತ ಕೋಕನಾರೆ ಸೇರಿದಂತೆ ಇತರರಿದ್ದರು.ಕನಕದಾಸರು ಒಂದು ಕುಲಕ್ಕೆ ಸೀಮಿತವಾದದ್ದು ವಿಪರ್‍ಯಾಸ ಕಮಲನಗರ: ಭಕ್ತಿ ಪಂಥದ ಹರಿಕಾರರಾಗಿ 15-16ನೇ ಶತಮಾನದಲ್ಲಿ ಕನ್ನಡ ಭಾಷೆಯಲ್ಲಿ ಕೀರ್ತನೆ, ಉಗಾಭೋಗಗಳನ್ನು ರಚಿಸಿ ಹಾಡುವುದರ ಮೂಲಕ ಕನ್ನಡ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸಿದವರು ಕನಕದಾಸರು ಎಂದು ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಸುಶೀಲಾ ಸಜ್ಜನ ನುಡಿದರು.

ಕಮಲನಗರ ಗ್ರಾಮ ಪಂಚಾಯತನಲ್ಲಿ ಹಮ್ಮಿಕೊಂಡಿದ್ದ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಉಪಾಧ್ಯಕ್ಷರಾದ ಅರ್ಚನಾ ಧನರಾಜ್ ಮಾತನಾಡಿ, ಕನಕದಾಸರು ಜಾತಿ. ಮತ. ಪoಥಗಳನ್ನು ಮೀರಿ ಬೆಳೆದವರು ಇಂತಹ ದಾಸರನ್ನು ಇಂದು ಜಾತಿ.ಮತಕ್ಕೆ ಸೀಮಿತಗೊಳಿಸುವ ಪ್ರಯತ್ನ ಆಗಬಾರದು. ಸಮಾಜದಲ್ಲಿರುವ ಜಾತಿಯತೆಯನ್ನು, ಮೇಲು ಕೀಳು ಭಾವನೆ, ಸಾಮಾಜಿಕ ತಾರತಮ್ಯವನ್ನು ತಮ್ಮ ಕಿರ್ತನೆಗಳ ಮೂಲಕ ಸಮಾಜವನ್ನು ಎಚ್ಚರಿಸಿ ಸುಧಾರಿಸುವ ಕಾರ್ಯವನ್ನು ಕನಕದಾಸರು ಮಾಡಿದರು ಎಂದರು.

ಪಿಡಿಓ ರಾಜಕುಮಾರ್ ತಂಬಾಕೆ ಪ್ರಾಸ್ತಾವಿಕ ಮಾತನಾಡಿ, ದಾಸಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಅಪಾರ. ದಾಸಸಾಹಿತ್ಯವಿಲ್ಲದ ಕನ್ನಡ ಸಾಹಿತ್ಯ ಅಪೂರ್ಣವಾಗಿದೆ ಆದ್ದರಿಂದ ಪ್ರತಿಯೊಬ್ಬರೂ ಕನಕದಾಸರ ಜೀವನ ಓದಿ ಅವರು ಬರೆದ ಸಾಹಿತ್ಯ ಅಧ್ಯಯನ ಮಾಡಿ ಆ ದಾರಿಯಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನ ಎಲ್ಲರೂ ಮಾಡಬೇಕೆಂದರು.ಗ್ರಾಮ ಪಂಚಾಯತ್ ಸದಸ್ಯರಾದ ರಾಜಕುಮಾರ್ ಗಾಯಕವಾಡ್, ಸಾಯಿನಾಥ್ ಕಾಂಬಳೆ, ಗ್ರಾಮದ ಮುಖಂಡರಾದ ಮಹೇಶ್ ಸಜ್ಜನ್, ಗ್ರಾ.ಪಂ ಸಿಬ್ಬಂದಿಗಳಾದ ಮಲ್ಲಪ್ಪಾ, ಧೂಳಪ್ಪ, ಶರಣಪ್ಪ, ಮಾದೇವ ಗಾಯಕವಾಡ್, ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಕನಕದಾಸರು ಕವಿಯು ಹೌದು, ಕಲಿಯೂ ಹೌದು: ಉಪನ್ಯಾಸಕ ದೇವಿದಾಸ ಜೋಶಿ

ಔರಾದ್: ವಿದೇಶಿಗರು ಕನಕನಲ್ಲಿನ ಪ್ರತಿಭೆ, ಸಾಮರ್ಥ್ಯ ಹಾಗೂ ಯೋಗ್ಯತೆಯನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ ಎಂದು ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉಪನ್ಯಾಸಕ ದೇವಿದಾಸ ಜೋಶಿ ಹೇಳಿದರು.

ಪಟ್ಟಣದ ತಹಸೀಲ್ ಕಚೇರಿ ಆವರಣದಲ್ಲಿ ಸೋಮವಾರ ತಾಲೂಕು ಆಡಳಿತದಿಂದ ನಡೆದ ಕನಕ ಜಯಂತೋತ್ಸವ ಸಮಾರಂಭದಲ್ಲಿ ಮಾತನಾಡಿ, ಕನಕದಾಸರು ಈ ನಾಡು ಕಂಡ ಕವಿಯೂ ಹೌದು ಕಲಿಯು ಹೌದು ಎಂದು ಇಂಗ್ಲೆಂಡ್‌ನ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ ಎಂದರು.ನಾವು ಕನ್ನಡಿಗರು ಕನಕದಾಸರನ್ನು ಇಲ್ಲಿಯವರೆಗೂ ಅರಿತುಕೊಳ್ಳಲು ಸಾಧ್ಯವಾಗಿಲ್ಲ. ಕನಕ ಒಬ್ಬ ಹರಿದಾಸರು ಅಥವಾ ಒಂದು ಸಮುದಾಯದ ವ್ಯಕ್ತಿ ಎಂದು ಪರಿಗಣಿಸದೆ ಅವರು ಹಲವು ವ್ಯಕ್ತಿತ್ವಗಳ ಸಂಗಮ ಎಂಬುದು ಮನನ ಮಾಡಿಕೊಳ್ಳಬೇಕಿದೆ ಎಂದರು.

ಪಟ್ಟಣ ಪಂಚಾಯತಿ ಅಧ್ಯಕ್ಷೆ ಸರುಬಾಯಿ ಘುಳೆ ಮಾತನಾಡಿ, ಕನಕದಾಸರು ಬಸವಾದಿ ಶರಣರಂತೆ ಬದುಕಿನ ಆಶಯ ಜನಸಾಮಾನ್ಯರಿಗೆ ತೋರ್ಪಡಿಸಿದ ಮೇರು ವ್ಯಕ್ತಿತ್ವ ಎಂದರು. ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ ಮಾತನಾಡಿ, ಇಂದು ಕನಕದಾಸರ ವಿಚಾರಗಳು ನಮ್ಮೆಲ್ಲರ ಬದುಕಿಗೆ ಅವಶ್ಯಕವಾಗಿವೆ ಎಂದರು.ಈ ಸಂದರ್ಭದಲ್ಲಿ ಪಪಂ ಉಪಾಧ್ಯಕ್ಷೆ ರಾಧಾಬಾಯಿ ಕೃಷ್ಣ ನರೋಟೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಧೋಂಡಿಬಾ ನರೋಟೆ, ಪಪಂ ಸದಸ್ಯ ಗುಂಡಪ್ಪ ಮುದಾಳೆ, ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಬಿಇಒ ಪ್ರಕಾಶ ರಾಠೋಡ್, ಟಿಎಚ್ಒ ಡಾ. ಗಾಯತ್ರಿ, ವಕೀಲರ ಸಂಘದ ಅಧ್ಯಕ್ಷ ಸಂದೀಪ ಮೇತ್ರೆ, ಗಣಪತಿ ಮೇತ್ರೆ, ಸಂಜೀವ ಮೇತ್ರೆ, ಮಾದಪ್ಪ ಕೋಟೆ, ಸುಧಾಕರ ಕೊಳ್ಳುರ್, ಶಿವಾಜಿರಾವ ಪಾಟೀಲ್, ಸೂರ್ಯಕಾಂತ ಸಿಂಗೆ, ಬಾಲಾಜಿ ಅಮರವಾಡಿ, ಅರ್ಜುನ ಭಂಗೆ, ರಾಜಕುಮಾರ ಮುದಾಳೆ, ಹಣಮಂತ ಮೇತ್ರೆ ಎಕಲಾರ ಸೇರಿದಂತೆ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಇನ್ನಿತರರಿದ್ದರು.

--ಬಾಕ್ಸ್‌:

ಮೆರವಣಿಗೆಯಲ್ಲಿ ಕಿರ್ತನೆಗಳಿಗೆ ನೃತ್ಯಬಸ್ ನಿಲ್ದಾಣ ಹತ್ತಿರದ ಕನಕದಾಸ ವೃತ್ತದಲ್ಲಿ ಪೂಜೆಗೈದು ಮೆರವಣಿಗೆಗೆ ಪಪಂ ಅಧ್ಯಕ್ಷೆ ಸರುಬಾಯಿ ಘುಳೆ ಚಾಲನೆ ನೀಡಿದರು. ಬಸವೇಶ್ವರ ವೃತ್ತ, ಸಾರ್ವಜನಿಕ ಆಸ್ಪತ್ರೆ, ಅಗ್ನಿಕುಂಡ, ಪೊಲೀಸ್ ಠಾಣೆ, ನ್ಯಾಯಾಲಯ, ಪ್ರವಾಸಿ ಮಂದಿರ ಮಾರ್ಗವಾಗಿ ತಹಸೀಲ್ ಕಚೇರಿ ಆವರಣ ತಲುಪಿತು.

ಮೆರವಣಿಗೆಯಲ್ಲಿ ಕಲಬುರ್ಗಿ ಡೊಳ್ಳಿನ ತಂಡ, ವಿವಿಧ ಶಾಲಾ ಕಾಲೇಜು ಮಕ್ಕಳು ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸಿದರು. ಬೋರಾಳ ಸರ್ಕಾರಿ ಶಾಲೆ, ಬಸವನವಾಡಿ ತಾಂಡಾ ಶಾಲೆ, ಸ್ವ್ಯಾಗ್ ನೃತ್ಯ ತರಬೇತಿ ಕೇಂದ್ರ, ಆದರ್ಶ ವಿದ್ಯಾಲಯ, ಬಾಲಭಾರತಿ ಶಾಲೆ, ಬಸವ ಹಿರಿಯ ಪ್ರಾಥಮಿಕ ಶಾಲೆ, ಇಂದಿರಾ ಕಾನ್ವೆಂಟ್ ಶಾಲಾ ಮಕ್ಕಳಿಂದ ಕನಕದಾಸರ ಭಕ್ತಿ ಗೀತೆ ಮತ್ತು ಕಿರ್ತನೆಗಳ ನೃತ್ಯ ಎಲ್ಲರ ಗಮನ ಸೆಳೆಯಿತು.

Share this article