ಕನ್ನಡಪ್ರಭ ವಾರ್ತೆ ಯಲಬುರ್ಗಾ
ಇಡೀ ಮನುಕುಲದ ಜನಾಂಗಕ್ಕೆ ಒಳಿತನ್ನು ಸಾರುವ ಮೂಲಕ ಜಾತಿ ವ್ಯವಸ್ಥೆ, ಸಾಮಾಜಿಕ ನ್ಯಾಯ, ಕಂದಾಚಾರ ನಿರ್ಮೂಲನೆಗೆ ಹೋರಾಟ ನಡೆಸಿದವರು ಸಂತ ಶ್ರೇಷ್ಠ ಕನಕದಾಸರು ಎಂದು ತಹಸೀಲ್ದಾರ ಬಸವರಾಜ ತೆನ್ನಳ್ಳಿ ಹೇಳಿದರು.ಪಟ್ಟಣದ ಬಯಲು ರಂಗಮಂದಿರ ಆವರಣದಲ್ಲಿ ಸೋಮವಾರ ತಾಲೂಕಾಡಳಿತ ವತಿಯಿಂದ ನಡೆದ ತಾಲೂಕಾ ಮಟ್ಟದ ಭಕ್ತಶ್ರೇಷ್ಠ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದಿ, ಸಮಾಜ ಸುಧಾರಣೆಗೆ ತಮ್ಮ ದಾಸ ಪದಗಳನ್ನು ಕಾಣಿಕೆಯಾಗಿ ನೀಡಿದ ಮಹಾನ್ ದಾರ್ಶನಿಕರಾಗಿದ್ದಾರೆ ಎಂದರು.
ದಾಸರು ಲೋಕಕ್ಕೆ ನೀಡಿದ ಅಮೋಘ ಸಂದೇಶವನ್ನು ಸಾರುವ ಕೀರ್ತನೆಯೊಂದು ಹೀಗಿದೆ, ತಲ್ಲಣಿಸಿದರು ಕಂಡ್ಯಾ ತಾಳು ಮನವೇ ಎಲ್ಲರನ್ನು ಸಲಹುವನು ಇದಕ್ಕೆ ಸಂಶಯವಿಲ್ಲ ಎಂಬ ವಾಣಿಯನ್ನು ಡಂಗುರ ರೂಪದಲ್ಲಿ ಸಾರಿ ಲೋಕದ ಜನತೆಯಲ್ಲಿ ಮನೆ ಮಾಡಿರುವ ಸಂದೇಹವನ್ನು ನಿವಾರಣೆಗೊಳಿಸಿದ್ದಾರೆ. ಅವರು ರಚಿಸಿದ ಕಾವ್ಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.ಹಾಲುಮತ ಸಮಾಜ ತಾಲೂಕಾಧ್ಯಕ್ಷ ವೀರನಗೌಡ ಪೋಲೀಸ್ ಪಾಟೀಲ ಹಾಗೂ ನ್ಯಾಯವಾದಿ ಬಿ.ಎಂ. ಶಿರೂರ ಮಾತನಾಡಿ, ಹಾಲುಮತ ಸಮಾಜ ಹಾಲಿನಂತೆ ಪವಿತ್ರವಾದ ಸಮಾಜವಾಗಿದೆ. ಕನಕದಾಸರು ತಮ್ಮ ಕೃತಿಗಳಲ್ಲಿ ಹುಟ್ಟಿನಿಂದ ಬಂದ ಜಾತಿಗೆ ಮಹತ್ವ ಕೊಡದೆ ಮನುಷ್ಯರ ಆಚಾರ-ವಿಚಾರ ಮತ್ತು ನಡೆ-ನುಡಿಗಳಿಗೆ ಪ್ರಾಶಸ್ಯ ಕೊಡುವ ಮೂಲಕ ಎಲ್ಲರೂ ಒಂದೇ ಮನುಷ್ಯ ಜಾತಿ ಸಾರಿ ಹೇಳಿದ ದಾಸರಲ್ಲಿ ಶ್ರೇಷ್ಠರಾಗಿದ್ದಾರೆ ಎಂದರು.
ಶಿಕ್ಷಕ ಬಸವರಾಜ ಕೊಂಡಗುರಿ ಉಪನ್ಯಾಸ ನೀಡಿ, ಸಂತರು, ಶರಣರು, ದಾರ್ಶನಿಕರು ಇಡೀ ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದ್ದಾರೆ. ಅಂತವರ ಸತ್ಯ ವಿಚಾರಗಳನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು. ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅತಿಥಿಗಳಾಗಿ ದೊಡ್ಡಯ್ಯ ಗುರುವಿನ್, ತಾಪಂ ಇಒ ಸಂತೋಷ ಪಾಟೀಲ ಬಿರಾದಾರ, ಜಿಪಂ ಮಾಜಿ ಸದಸ್ಯರಾದ ರಾಮಣ್ಣ ಸಾಲಭಾವಿ, ಕೆರಿಬಸಪ್ಪ ನಿಡಗುಂದಿ, ಅಂದಾನಗೌಡ ಉಳ್ಳಾಗಡ್ಡಿ, ಅಮರೇಶ ಹುಬ್ಬಳ್ಳಿ, ಅಶೋಕ ಗೌಡ್ರ, ರೇವಣಪ್ಪ ಹಿರೇಕುರಬರ, ಯಲ್ಲಪ್ಪ ಹೊಸ್ಮನಿ, ಎಚ್.ಎಚ್. ಕುರಿ, ಮುಖ್ಯಾಧಿಕಾರಿ ನಾಗೇಶ, ಹನುಮಂತಪ್ಪ ಹನುಮಾಪೂರ, ಬಾಲಚಂದ್ರ ಸಾಲಭಾವಿ, ಸಾವಿತ್ರಿ ಗೊಲ್ಲರ, ದೊಡ್ಡರೇವಣೆಪ್ಪ ಹಿರೇಕುರಬರ, ಶಾರದಾ ಸಾಲಭಾವಿ, ಶ್ರೀದೇವಿ ಗುರುವಿನ್ ಸೇರಿದಂತೆ ಅಧಿಕಾರಿಗಳು ಹಾಗೂ ಪಪಂ ಸರ್ವ ಸದಸ್ಯರು ಉಪಸ್ಥಿತರಿದ್ದರು. ಶಿಕ್ಷಕ ಬಸವರಾಜ ಅಂಗಡಿ ನಿರೂಪಿಸಿದರು. ಶಿಕ್ಷಕ ಮೆಹಬೂಬಸಾಬ ಬಾದಶಹಾ ಸ್ವಾಗತಿಸಿದರು.
ಇದಕ್ಕೂ ಮೊದಲು ಪಟ್ಟಣದ ಬೀರಲಿಂಗೇಶ್ವರ ದೇವಸ್ಥಾನದಿಂದ ಕನಕದಾಸರ ಭಾವಚಿತ್ರದೊಂದಿಗೆ ವಿವಿಧ ವಾಧ್ಯ ಮೇಳದೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ಮಾಡಲಾಯಿತು.