ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ, ಸಂತ ಶ್ರೀ ಕನಕದಾಸರ ಜಯಂತ್ಯುತ್ಸವ ಸಮಿತಿ ಸಂಯುಕ್ತವಾಗಿ ಶುಕ್ರವಾರ ಆಯೋಜಿಸಿದ್ದ ದಾಸಶ್ರೇಷ್ಠ ಸಂತಕವಿ ಶ್ರೀ ಕನಕದಾಸರ 539ನೇ ಜಯಂತಿಯನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಕನಕದಾಸರು ತಮ್ಮ ಸಾಹಿತ್ಯ, ಕೀರ್ತನೆಗಳು ಹಾಗೂ ತತ್ವಪದಗಳ ಮೂಲಕ ಸಮಾಜದಲ್ಲಿನ ಅಸಮಾನತೆ, ಜಾತಿ ವ್ಯವಸ್ಥೆ ಮತ್ತು ಮೌಢ್ಯಗಳನ್ನು ಪ್ರಶ್ನಿಸಿ, ಸಮಾನತೆ, ಮಾನವೀಯತೆ ಹಾಗೂ ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಸಾರಿದ ಮಹಾನ್ ಸಮಾಜ ಸುಧಾರಕರು ಎಂದರು.ಕನಕದಾಸರು 15- 16ನೇ ಶತಮಾನದಲ್ಲಿ ಬದುಕಿದ್ದರೂ, ಅವರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಬರೀ ಭಕ್ತಿಗೀತೆಗಳಿಗಷ್ಟೇ ಸೀಮಿತವಾಗದೆ, ಕುಲ ಕುಲವೆಂದು ಹೊಡೆದಾಡುವಿರಿ ಎಂಬ ಕೀರ್ತನೆ ಮೂಲಕ ಸಮಾಜದಲ್ಲಿ ಸಮಾನತೆ ತರಲು ಪ್ರಯತ್ನಿಸಿದರು. ಕನಕದಾಸರ ಆದರ್ಶಗಳು ಮತ್ತು ತತ್ವಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಜಾತಿ-ಧರ್ಮಗಳ ಭೇದಭಾವವಿಲ್ಲದ ಸಮಾನತೆ ಹಾಗೂ ಸೌಹಾರ್ದತೆಯ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ತಳಮಟ್ಟದಲ್ಲಿರುವ ಬಡವರು ಮತ್ತು ದುರ್ಬಲ ವರ್ಗದವರಿಗೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರದಲ್ಲಿ ಕನಕದಾಸರ ಸಮಗ್ರ ಸಾಹಿತ್ಯದ ಅನುವಾದ, ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸ್ಮಾರಕಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿತ್ತು. ಪ್ರಸ್ತುತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಿದ್ದು, ಇದರಿಂದ ಬಡವರ ಬದುಕಿನಲ್ಲಿ ನೆಮ್ಮದಿ ಮೂಡಿದೆ ಮತ್ತು ರಾಜ್ಯದ ತಲಾ ಆದಾಯವೂ ಹೆಚ್ಚಿದೆ ಎಂದರು.
ಕನಕದಾಸರು ಸಾರಿದ ಸಮಾನತೆ, ಸಹಬಾಳ್ವೆ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶಗಳು ಇಂದಿಗೂ ಅತ್ಯಂತ ಪ್ರಸ್ತುತವಾಗಿವೆ. ಅವರ ಚಿಂತನೆಗಳು ಕೇವಲ ಜಯಂತಿ ಆಚರಣೆಗಳಿಗೆ ಸೀಮಿತವಾಗದೆ, ಪ್ರತಿಯೊಬ್ಬರ ಬದುಕಿನಲ್ಲೂ ಅಳವಡಿಕೆಯಾಗಬೇಕು. ಕನಕದಾಸರ ಕೀರ್ತನೆಗಳು ಮತ್ತು ವಿಚಾರಧಾರೆಗಳನ್ನು ಮನೆಮನೆಗೂ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಕನಕದಾಸರು ದೇವರ ಹೆಸರಿನಲ್ಲಿ ಹಲವು ಕೀರ್ತನೆಗಳು, ಸಾಹಿತ್ಯ ಮತ್ತು ಕಾವ್ಯಗಳ ಮೂಲಕ ಸಮಾಜದ ಅಂಕುಡೊಂಕುಗಳು, ಅಸಮಾನತೆ ಹಾಗೂ ಮೌಢ್ಯ ಆಚರಣೆಗಳನ್ನು ಖಂಡಿಸಿ ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು.