ಪ್ರಹ್ಲಾದರೆಡ್ಡಿ ಮಾದಿನಾಳ
ಸಮ್ಮೇಳನ ಹಿನ್ನೆಲೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೆಂಕೋಬ ಆಚಾರ್ ಜೋಶಿ, ಹೈದರಾಬಾದ್ ಕರ್ನಾಟಕ ವಿಮೋಚನೆಗೆ ಹೋರಾಡಿದ ಜಯತೀರ್ಥ ರಾಜಪುರೋಹಿತ, ನವಲಿಯ ಜೆಮ್ಲಾ ನಾಯ್ಕ್ ಹಾಗೂ ನಿವೃತ್ತ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಮಹಾಂತಯ್ಯಸ್ವಾಮಿ, ಕನಕಗಿರಿಯನ್ನಾಳಿದ ರಾಜಾ ಉಡಚಪ್ಪ ನಾಯಕ, ದಾಸ ಹಾಗೂ ಶರಣ ಸಾಹಿತ್ಯವನ್ನು ಮೂರು ದಶಕಗಳ ಕಾಲ ಶ್ರೀಮಂತಗೊಳಿಸಿದ ಸಜ್ಜಪ್ಪ ಮಾಸ್ತರ, ನಾರಾಯಣರೆಡ್ಡಿ ಶಿವನಗುಂಡಿ, ರಾಮಚಂದ್ರಪ್ಪ ತುಪ್ಪದ, ಚುಟುಕು ಸಾಹಿತ್ಯದಲ್ಲಿ ಹೆಸರುವಾಸಿಯಾಗಿದ್ದ ಸಾವಿತ್ರಮ್ಮ ಭುವನೇಶ್ವರಯ್ಯ ಹೆಸರಿನಲ್ಲಿ ರಾಜಬೀದಿಯಲ್ಲಿ ಮಹಾದ್ವಾರಗಳ ಸಿದ್ಧಪಡಿಸಲಾಗಿದೆ.
ಇನ್ನೂ ಗಂಗಾವತಿ ರಸ್ತೆಯ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತ, ವಾಲ್ಮೀಕಿ ವೃತ್ತ, ತೊಂಡಿತೇವರಪ್ಪ ಕಮಾನ್ ಕನ್ನಡ ಧ್ವಜ ಹಾಗೂ ಸಮ್ಮೇಳನದ ಬ್ಯಾನರ್‌ಗಳಿಂದ ಪಟ್ಟಣ ರಾರಾಜಿಸುತ್ತಿದೆ. ಕನಕಗಿರಿಯಲ್ಲಿ ಜೀವಂತ ಸಮಾಧಿಸ್ಥರಾಗಿರುವ ಅನುಭಾವಿ ಚಿದಾನಂದ ಅವಧೂತರ ಹೆಸರಿನಲ್ಲಿ ಮುಖ್ಯ ವೇದಿಕೆ ಹಾಗೂ ರಾಣಿ ಗೌರಮ್ಮನ ಹೆಸರಿನಲ್ಲಿ ಮಹಾ ಮಂಟಪ ಸಿದ್ಧಗೊಂಡಿದೆ.ಶಾಲಾ ಮಕ್ಕಳಿಂದ ಆಕರ್ಷಕ ಪಥಸಂಚಲನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಆನಂತರ ತಾಯಿ ಭುವನೇಶ್ವರಿ ಭಾವಚಿತ್ರ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ರಾಜಬೀದಿ ಅಲಂಕೃತಗೊಂಡಿದೆ.
ಬೈಕ್ ಜಾಗೃತಿ ಜಾಥಾಕ್ಕೆ ಹುಸೇನದಾಸ ಚಾಲನೆ: ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ನ. ೭ರಂದು ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆ ಪಟ್ಟಣದಲ್ಲಿ ಬೈಕ್ ಜಾಗೃತಿ ಜಾಥಾಕ್ಕೆ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಹುಸೇನದಾಸ್ ಶುಕ್ರವಾರ ಚಾಲನೆ ನೀಡಿದರು.
ಕಸಾಪ ಕಚೇರಿಯಿಂದ ಆರಂಭವಾದ ಜಾಥಾ ಪಟ್ಟಣದ ಎಪಿಎಂಸಿ, ವಾಲ್ಮೀಕಿ ವೃತ್ತ, ನವಲಿ ರಸ್ತೆ, ಇಂದಿರಾನಗರ, ಬಸವೇಶ್ವರ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಸೊಸೈಟಿ, ಕಲ್ಮಠ ರಸ್ತೆ ಮೂಲಕ ಜಾಗೃತಿ ಜಾಥಾ ನಡೆಯಿತು.