ಕನಕಗಿರಿ: ಕನಕಗಿರಿ ಉತ್ಸವ ನಿಮಿತ್ತ ಕೆಪಿಎಸ್ ಹಾಗೂ ಕಲ್ಮಠ ಶಾಲಾ ಮೈದಾನದಲ್ಲಿ ನಡೆದ ಕ್ರೀಡಾಕೂಟದಲ್ಲಿ ವಾಲಿಬಾಲ್, ಕಬ್ಬಡ್ಡಿ ಪಂದ್ಯಾವಳಿಗಳು ತುರುಸಾಗಿ ನಡೆದವು.ಬೆಂಗಳೂರು, ಮೈಸೂರು, ದಾವಣಗೆರೆ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ವಿವಿಧ ಆಟೋಟಗಳಲ್ಲಿ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಪುರುಷರ ಕಬಡ್ಡಿಯಲ್ಲಿ ಯರಡೋಣ ಪ್ರಥಮ, ಹೊಸ ಜೂರಟಗಿ ದ್ವಿತೀಯ ಸ್ಥಾನ ಪಡೆದವು. ಮಹಿಳೆಯರ ಕಬ್ಬಡಿಯಲ್ಲಿ ಗಂಗಾವತಿ ಪ್ರಥಮ, ಯಲಬುರ್ಗಾದ ಜೈ ಕರ್ನಾಟಕ ತಂಡ ದ್ವಿತೀಯ ಹಾಗೂ ತಾವರಗೇರಾ ತೃತೀಯ ಸ್ಥಾನ ಪಡೆದವು.ಪುರುಷರ ವಾಲಿಬಾಲ್ ಪಂದ್ಯಾವಳಿಯಲ್ಲಿ ಯುವಸೇವಾ ಎ ತಂಡ ಪ್ರಥಮ, ಯುವಸೇವಾ ಬಿ ತಂಡ ದ್ವಿತೀಯ ಹಾಗೂ ಹುಲಗಿ ತಂಡ ತೃತೀಯ ಸ್ಥಾನಕ್ಕೆ ಪಡೆದರೆ ಮಹಿಳೆಯರ ವಿಭಾಗದಲ್ಲಿ ಕೊಪ್ಪಳದ ಡಿವೈಎಸ್ ಕ್ರೀಡಾ ವಸತಿ ನಿಲಯದ ಮಕ್ಕಳು ಪ್ರಥಮ ಹಾಗೂ ದ್ವಿತೀಯ ಹಾಗೂ ಕೊಪ್ಪಳ ತಂಡ ತೃತೀಯ ಸ್ಥಾನ ಪಡೆದುಕೊಂಡವೆ.ಪುರುಷರು ಬಾಲ್ ಬ್ಯಾಡ್ಮಿಂಟನ ವಿಭಾಗದಲ್ಲಿ ಹನುಮಸಾಗರ ಪ್ರಥಮ, ಕೊಪ್ಪಳ ದ್ವಿತೀಯ ಹಾಗೂ ಹನುಮಸಾಗರ ತಂಡ ತೃತೀಯ ಸ್ಥಾನ ಪಡೆದರೆ, ಮಹಿಳೆಯರ ಭಾಗದಲ್ಲಿ ಹನುಮಸಾಗರ-ಎ ಪ್ರಥಮ ಹನುಮಸಾಗರ-ಬಿ ದ್ವಿತೀಯ ಹಾಗೂ ವೈಜೆಆರ್ ವಿದ್ಯಾನಗರ ಗಂಗಾವತಿ ತೃತೀಯ ಸ್ಥಾನ ಪಡೆದುಕೊಂಡಿದ್ದು, ಎಲ್ಲಾ ವಿಜೇತ ತಂಡಗಳಿಗೆ ಬಹುಮಾನ ನೀಡಿರುವುದಾಗಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡ್ರ ತಿಳಿಸಿದ್ದಾರೆ.
ಆಕರ್ಷಕ ಅಂಗವಿಕಲರ ಕಬಡ್ಡಿ:ಪ್ರದರ್ಶನ ಪಂದ್ಯಕ್ಕಾಗಿ ಆಗಮಿಸಿದ ಆಹ್ವಾನಿತ ಕುಷ್ಟಗಿ ಹಾಗೂ ಕನಕಗಿರಿಯ ವಿಕಲಚೇತನರ ಕಬಡ್ಡಿ ಪಂದ್ಯವು ಆಕರ್ಷಕವಾಗಿತ್ತು. ಎರಡೂ ತಂಡಗಳ ಕ್ರೀಡಾಪಟುಗಳ ಉತ್ತಮ ಪ್ರದರ್ಶನ ನೀಡಿದರು. ನೆರೆದಿದ್ದ ಜನರು ಶಿಳ್ಳೆ, ಕೇಕೆ ಹಾಕಿ ಹುರಿದುಂಬಿಸಿದರು. ಆಟ ವೀಕ್ಷಿಸಿದ ಅಧಿಕಾರಿಗಳು ಆಟಗಾರರನ್ನು ಅಭಿನಂದಿಸಿದರು. ಇದೇ ವೇಳೆ ಕ್ರೀಡಾಪಟುಗಳಿಗೆ ಅಭಿನಂದನಾ ಪ್ರಮಾಣಪತ್ರ, ಪ್ರಶಸ್ತಿ ವಿತರಿಸಿ, ಗೌರವಿಸಿದರು.ಈ ವೇಳೆ ಉಪವಿಭಾಗಾಧಿಕಾರಿ ಕ್ಯಾ.ಮಹೇಶ ಮಾಲಗಿತ್ತಿ, ಜಿಪಂ ಸಿಇಒ ರಾಹುಲ್ ರತ್ಮಂ ಪಾಂಡೆ, ತಹಶೀಲ್ದಾರ ವಿಶ್ವನಾಥ ಮುರುಡಿ, ತಾಪಂ ಇಒ ಚಂದ್ರಶೇಖರ ಕಂದಕೂರು, ಪಿಐ ಎಂ.ಡಿ. ಫೈಜುಲ್ಲಾ, ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶರಣಪ್ಪ, ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಸತೀಶಕುಮಾರ ಜರ‍್ಹಾಳ ಸೇರಿದಂತೆ ಇತರರು ಇದ್ದರು.