ಕನ್ನಡಪ್ರಭ ವಾರ್ತೆ ಕನಕಪುರ
ತಾಲೂಕಿನ ಜನರ ಮನೆ ಮನೆಯ ಹಬ್ಬವಾಗಿರುವ ಏಳನೇ ಕನಕೋತ್ಸವ ಹಲವು ವಿಶೇಷತೆಗಳಿಂದ ಕೂಡಿದ್ದು, ಸುಮಾರು 150ಕ್ಕೂ ಹೆಚ್ಚು ಗ್ರಾಮ ದೇವತೆಗಳ ಪಲ್ಲಕ್ಕಿಯೊಂದಿಗೆ ನಗರದ ಅಯ್ಯಪ್ಪ ಸ್ವಾಮಿ ದೇಗುಲದ ಬಳಿಯಿಂದ ಪ್ರಮುಖ ರಸ್ತೆಯಲ್ಲಿ ಭವ್ಯ ಮೆರವಣಿಗೆ ಸಾಗಿತು. ನಂದಿ ಕುಣಿತ, ತೊಗಲು ಬೊಂಬೆ ಪ್ರದರ್ಶನ, ಪಟ್ಟದ ಕುಣಿತ, ಮಂಗಳವಾದ್ಯ, ತಮಟೆ, ಡೊಳ್ಳು ಕುಣಿತ, ಮಹಿಷಿ, ಆಂಜನೇಯ, ಕರಡಿವೇಷ ಸೇರಿದಂತೆ ಹಲವು ಕಲಾ ತಂಡಗಳ ಪ್ರದರ್ಶನ ಮೆರೆವಣಿಗೆಯ ವೈಭವವನ್ನು ಕಟ್ಟಿಕೊಟ್ಟವು ಜೊತೆಗೆ ತಾಲೂಕಿನ ಶಕ್ತಿ ದೇವತೆಗಳಾದ ಶ್ರೀ ಕೇಂಕೇರಮ್ಮ ಹಾಗೂ ಕಬ್ಬಾಳಮ್ಮ ದೇವಿಯ ಅಲಂಕೃತ ಮೂರ್ತಿ ಹೊತ್ತ ಅಂಬಾರಿ ಆನೆಯನ್ನು ಸಾವಿರಾರು ಜನರು ಕಣ್ತುಂಬಿಕೊಂಡರು.
ತಾಲೂಕು ಕ್ರೀಡಾಂಗಣದ ಬಳಿ ಕನಕೋತ್ಸವ ಅಂಗವಾಗಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಹಾಗೂ ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ಪೇಟೆಕೆರೆ ಬಳಿ ಮತ್ಸ್ಯಲೋಕ ಹಾಗೂ ಪ್ಯಾಂಟಸಿ ವರ್ಲ್ಡ್ ಗೆ ಚಾಲನೆ ನೀಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಸಂತಸ ವ್ಯಕ್ತಪಡಿಸಿದರು.ನಂತರ ಎಲ್ಲಾ ಜನಾಂಗ, ವರ್ಗ, ಪಕ್ಷದವರೂ ಸಮಾರಂಭಕ್ಕೆ ಆಗಮಿಸಿ ಉತ್ಸವದ ಭವ್ಯ ಸಂಭ್ರಮ ಆನಂದಿಸುವಂತೆ ತಿಳಿಸಿದರು.
ಐದು ದಿನಗಳ ಕನಕೋತ್ಸವ ಸಮಾರಂಭದ ಮೊದಲ ದಿನ ನಗರ ವ್ಯಾಪ್ತಿಯಲ್ಲಿ ಮನೆಗೊಂದು ರಂಗೋಲಿ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು, ಮುಖ್ಯ ವೇದಿಕೆಯಲ್ಲಿ ರಂಗಗೀತೆಗಳ ಸ್ಪರ್ಧೆ, ವೇಷ ಭೂಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು, ಸಂಜೆ ನಡೆದ ಖ್ಯಾತ ಸಂಗೀತ ನಿರ್ದೇಶಕ ರಘು ದೀಕ್ಷಿತ್ ತಂಡದ ರಸಮಂಜರಿ ಕಾರ್ಯಕ್ರಮಕ್ಕೆ ಸಾವಿರಾರು ಜನರು ಸಾಕ್ಷಿಯಾದರು, ನಗರದ ಉರ್ದು ಶಾಲೆಯ ಮೈದಾನದಲ್ಲಿ ಸಮಾರಂಭಕ್ಕೆ ಆಗಮಿಸಿದ ಸಾವಿರಾರು ಜನತೆಗೆ ರುಚಿ- ಶುಚಿಯಾದ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು, ಸಂಚಾರ ದಟ್ಟಣೆ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಆರಕ್ಷಕ ಸಿಬ್ಬಂದಿ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು.ಶಾಸಕರಾದ ಆನೆಕಲ್ ಶಿವಣ್ಣ, ರೂಪಾ ಶಶಿಧರ್, ನೆಲಮಂಗಲ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಬಲ್ಕಿಸ್ ಬಾನು, ದಿನೇಶ್ ಗೂಳಿಗೌಡ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಕನಕಪುರ ರೂರಲ್ ಎಜುಕೇಷನ್ ಸೊಸೈಟಿ ಮುಖ್ಯಸ್ಥ ಶ್ರೀಕಂಠು ಸೇರಿ ಪಕ್ಷದ ಹಲವು ಮುಖಂಡರು ಉಪಸ್ಥಿತರಿದ್ದರು.