ಕನ್ನಡಪ್ರಭ ವಾರ್ತೆ ಆಲೂರು
ತಾಲೂಕಿನ ಪಾಳ್ಯ ಹೋಬಳಿಯ ಕಣತೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ 21 ಅಡಿ ಎತ್ತರದ ಶಿವಲಿಂಗ ಮತ್ತು ಶಿವನ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮ ಡಿ. 23ರ ಸೋಮವಾರ ನಡೆಯಲಿದೆ ಎಂದು ಕಣತೂರು ಶಂಕರ ಲಿಂಗೇಶ್ವರ ಟ್ರಸ್ಟ್ ಅಧ್ಯಕ್ಷ ಕೆ ಬಿ ಬಾಲಲೋಚನ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಷ್ಟು ಎತ್ತರದ ಶಿವಲಿಂಗ ಹಾಗೂ ಶಿವನಮೂರ್ತಿ ಎಲ್ಲೂ ಪ್ರತಿಷ್ಠಾಪಿಸಿಲ್ಲ. ಕಣತೂರು ಗ್ರಾಮದಲ್ಲಿ ನೂತನವಾಗಿ ಶಿವಲಿಂಗ ಹಾಗೂ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, ದಿನಾಂಕ 22ರ ಭಾನುವಾರ ಸಂಜೆ ಗೋದೂಳಿ ಲಗ್ನದಲ್ಲಿ ಗಂಗಾಪೂಜೆ, ಆಚಾರ್ಯ ವರುಣ, ಹೃತ್ವಿಕ್ ವರುಣ ಪ್ರಾರ್ಥನೆ ಹಾಗೂ ಗಣಪತಿ ಪೂಜೆ, ಗಣಪತಿ ಹೋಮ, ಪುಣ್ಯಾಹವಾಚನ, ವಾಸ್ತುಮಂಡಲ ರಚಿಸಿ, ವಾಸ್ತು, ನವಗ್ರಹ, ಸುದರ್ಶನ ಹೋಮ, ಮಂಗಳಾರತಿ ಪೂರ್ಣಾಹುತಿ, ನವಕ ಪ್ರಧಾನ ಕಳಶ ಸ್ಥಾಪನೆ ನಡೆದಿದೆ.
ಸ್ವಸ್ತಿಶ್ರೀ ಶ್ರೀ ಕ್ರೋಧಿನಾಮ ಸಂವತ್ಸರದ ಧನುರ್ಮಾಸದ 8 ದಿನ ಸಲ್ಲುವ ಮಾರ್ಗಶಿರ ಬಹುಳ ಡಿ. 23ರ ಸೋಮವಾರ ಬೆಳಗ್ಗೆ 4 ಗಂಟೆಯಿಂದ 7 ಗಂಟೆಗೆ ಒದಗುವ ವೃಷ್ಚಿಕ ಲಗ್ನದಲ್ಲಿ ಶ್ರೀ ಶಂಕರ ಲಿಂಗೇಶ್ವರ ಸ್ವಾಮಿಗೆ ಪಂಚಾಮೃತ ಅಭಿಷೇಕ, ಕಲಾ ಹೋಮ, ಅಲಂಕಾರ ಪೂಜೆ, ಪೂರ್ಣಾಹುತಿ ಲೋಕಾರ್ಪಣೆ ಕಾರ್ಯಕ್ರಮ ಹಾಗೂ 21 ಅಡಿ ಶಿವಲಿಂಗ ಮತ್ತು ಶಿವಮೂರ್ತಿ ಲೋಕಾರ್ಪಣೆಯನ್ನು ಕಾರ್ಜುವಳ್ಳಿ ಹಿರೇಮಠದ ಶ್ರೀ ಷ. ಬ್ರ. ಸದಾಶಿವ ಶಿವಾಚಾರ್ಯ ಮಹಾಸ್ವಾಮೀಜಿ ನೆರವೇರಿಸಲಿದ್ದಾರೆ.ಚಿತ್ರದುರ್ಗ ಮಡಿವಾಳ ಮಾಚಿದೇವ ಸಂಸ್ಥಾನ ಮಠದ ಶ್ರೀ ಜಗದ್ಗುರು ಶ್ರೀ ಬಸವ ಮಾಚಿದೇವ ಮಹಾಸ್ವಾಮೀಜಿಯು ಶಂಕರ ಲಿಂಗೇಶ್ವರ ಪಾದುಕೆ ನಾಮಫಲಕ ಲೋಕಾರ್ಪಣೆ ಮಾಡುವರು. ಸಂಕಲಾಪುರ ಮಠದ ಶ್ರೀ ಮನಿಪ್ರ ಧರ್ಮರಾಜೇಂದ್ರ ಮಹಾಸ್ವಾಮಿ ದೀಪದ ಕಂಬವನ್ನು ಲೋಕಾರ್ಪಣೆ ಮಾಡುವರು ಹಾಗೂ ಧ್ವಜಸ್ತಂಭ ಲೋಕಾರ್ಪಣೆಯನ್ನು ಹಳೇಬೀಡು ಪುಷ್ಪಗಿರಿ ಮಹಾಸಂಸ್ಥಾನ ದ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ನೆರವೇರಿಸುವರು. ಹೋಮ- ಹವನ, ಪೂರ್ಣಾಹುತಿಯನ್ನು ಹಾಸನ ತಣ್ಣೀರು ಹಳ್ಳದ ಮಾನಿ ವಿಜಯಕುಮಾರ ಸ್ವಾಮೀಜಿ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನಟರಾಜು ನಾಕಲಗೂಡು ಮಾತನಾಡಿ, ಡಿ 23ರ ಸೋಮವಾರ ನಡೆಯುವ 21 ಅಡಿ ಶಿವಲಿಂಗ ಮತ್ತು ಶಿವನ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಸಂಸದ ಶ್ರೇಯಸ್ ಪಟೇಲ್ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕ ಎಚ್ ಕೆ ಕುಮಾರಸ್ವಾಮಿ, ವಿಶೇಷ ಆಹ್ವಾನಿತರಾಗಿ ಎಂಎಸ್ ನಾಗೇಂದ್ರ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಸಿದ್ದೇಶ್ ನಾಗೇಂದ್ರ, ತಾಲೂಕು ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಕೆ ಎಸ್ ಮಂಜೇಗೌಡ, ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಜಗದೀಶ್ ಕಬ್ಬಿನಹಳ್ಳಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವಿಶೇಷ ಆಹ್ವಾನಿತ ಸದಸ್ಯ ರವಿ ನಾಕಲಗೂಡು, ವೀರಶೈವ ಸಂಘದ ತಾಲೂಕು ಅಧ್ಯಕ್ಷ ರೇಣುಕಾ ಪ್ರಸಾದ್, ಕಾರ್ಯದರ್ಶಿ ಎಸ್ ಎಸ್ ಶಿವಮೂರ್ತಿ, ಖಜಾಂಚಿ ಟೀಕ್ ರಾಜು, ಕಣತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪೃಥ್ವಿ ಜಯರಾಮ್ ಸೇರಿದಂತೆ ಗ್ರಾಪಂ ಎಲ್ಲಾ ಸದಸ್ಯರು, ಕಣತೂರು ಗ್ರಾಮಸ್ಥರಾದ ಕೆ ಪಿ ಶಾಂತರಾಜು, ಕೆ ಪಿ ಮಲ್ಲೇಶ್, ಚಂದ್ರ ಶೆಟ್ಟಿ, ಸೇರಿದಂತೆ ಪುರೋಹಿತರಾದ ಕೆ ವೈ ರಾಘವೇಂದ್ರ ಶರ್ಮ ಹಾಗೂ ಜಯಣ್ಣ ಭಾಗವಹಿಸಲಿದ್ದಾರೆ ಎಂದ ಅವರು ಮುತ್ತೈದೆಯರಿಗೆ ಬಾಗಿನ ಕಾರ್ಯಕ್ರಮ ಹಾಗೂ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಶಂಕರ ಲಿಂಗೇಶ್ವರ ಟ್ರಸ್ಟ್ ಅಧ್ಯಕ್ಷ ಕೆ ಬಿ ಬಾಲ ಲೋಚನ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನಟರಾಜು ನಾಕಲಗೂಡು, ಗ್ರಾಮಸ್ಥರಾದ ಜನಾರ್ದನ್, ಮಹೇಶ್ ಇದ್ದರು.