ಹೆದ್ದಾರಿ ಸಭೆ ನಿರ್ವಹಿಸಿದ ಕಂದಿಕೆರೆ ಜಗದೀಶ್ ರೌಡಿಶೀಟರ್

KannadaprabhaNewsNetwork | Published : Jul 31, 2024 1:11 AM

ಸಾರಾಂಶ

Kandikere Jagdish rowdy sheeter who conducted the highway meeting

-ಐಮಂಗಲ ಠಾಣೆಯ ಎಂಓಬಿ ಆತ । ಹಲವು ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದಿದ್ದ ಕಂದಿಕೆರೆ ಜಗದೀಶ್

------

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಹೆದ್ದಾರಿ ಭೂ ಸ್ವಾಧೀನ ಸಮಸ್ಯೆ ಕುರಿತ ಸಭೆಯಲ್ಲಿ ಜಬರ್ ದಸ್ತ್ ಆಗಿ ಮಾತನಾಡಿ, ಇಡೀ ಸಭೆಯ ಕಂಟ್ರೋಲ್ ಗೆ ತೆಗೆದುಕೊಂಡ ಕಂದಿಕೆರೆ ಜಗದೀಶ್ ರೌಡಿಶೀಟರ್ ಎಂಬ ಅಚ್ಚರಿ ಸಂಗತಿ ಬಯಲಾಗಿದೆ. ಈತ ಕೆಲ ಪ್ರಕರಣಗಳಲ್ಲಿ ಜೈಲಿಗೂ ಹೋಗಿ ಬಂದಿದ್ದಾನೆ ಎನ್ನಲಾಗಿದೆ.

ಹಿರಿಯೂರು ತಾಲೂಕಿನ ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿಶೀಟರ್ ಆಗಿದ್ದಾನೆ. ಇದಲ್ಲದೇ ಎಂಓಬಿ ಪಟ್ಟಿಯಲ್ಲಿದ್ದಾನೆ. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಬ್ಬ ಮುಂತಾದ ಕಾರ್ಯಕ್ರಮಗಳು ನಡೆದರೂ ಈತನನ್ನ ಠಾಣೆಗೆ ಕರೆಯಿಸಿ ಪರೇಡ್ ಮಾಡಿಸಿ, ಎಚ್ಚರಿಕೆ ನೀಡಿ ಕಳಿಸಲಾಗುತ್ತೆ. ಇಂತಹ ರೌಡಿ ಶೀಟರ್ ಜಿಲ್ಲಾ ದಂಡಾಧಿಕಾರಿಯೂ ಆದ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಜಬರ್ ದಸ್ತ್ ಆಗಿ ಮೀಟಿಂಗ್ ನಿರ್ವಹಣೆ ಮಾಡಿದ ಸಂಗತಿ ಆಡಳಿತ ವ್ಯವಸ್ಥೆಗೆ ಸವಾಲಾಗಿದೆ. ಈ ವಿಚಾರದಲ್ಲಿ ಅಧಿಕಾರಿಗಳೂ ಕೂಡಾ ಅಸಹಾಯಕರು. ಸಚಿವರ ಸಂಗಡ ಬಂದು ಸಭೆಯಲ್ಲಿ ಕುಳಿತುಕೊಂಡರೆ ಅವರನ್ನು ಹೊರ ಹೋಗಿ ಎಂದು ಹೇಳಲಾರದ ಪರಿಸ್ಥಿತಿ ಅವರದ್ದಾಗಿದೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಈತ ನಡೆದುಕೊಂಡ ಬಗೆಗೆ ಕನ್ನಡಪ್ರಭ ಮಂಗಳವಾರ ವಿಸ್ತೃತ ವರದಿ ಪ್ರಕಟಿಸಿತ್ತು, ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದೆ. ಬಹಳಷ್ಚು ಜನರು ಈತ ರೌಡಿಶೀಟರ್ ಎಂಬ ಸಂಗತಿ ಹಂಚಿಕೊಂಡು ಹಳೆ ಪ್ರಕರಣಗಳ ಹರವಿದ್ದಾರೆ. ಮತ್ತೊಂದಿಷ್ಟು ಮಂದಿ ಈತ ಪೊಲೀಸ್ ಠಾಣೆಯಲ್ಲಿ ಕೈಲಿಡಿದ ಸ್ಲೇಟ್ ನ್ನು ಕನ್ನಡಪ್ರಭಕ್ಕೆ ಕಳಿಸಿ ಪ್ರಕಟಿಸುವಂತೆ ವಿನಂತಿಸಿದ್ದಾರೆ. ರೌಡಿ ಶೀಟರ್ ಗಳು ಇಡೀ ಹಿರಿಯೂರು ಅಧಿಕಾರಿ ವಲಯ ನಿಯಂತ್ರಿಸುತ್ತಿದ್ದಾರೆ, ಪ್ರಜಾಪ್ರಭುತ್ವ ಎಲ್ಲಿಗೆ ಬಂದು ನಿಂತಿತು ನೋಡಿ ಎಂದು ಮತ್ತೊಂದಿಷ್ಟು ಮಂದಿ ಕಳವಳ ವ್ಯಕ್ತಪಡಿಸಿದ್ದಾರೆ.

-------------

ಪೋಟೋ ಫೈಲ್ ನೇಮ್ಕಂದಿಕೆರೆ ಜಗದೀಶ್

-----

Share this article