ಕುಮಟಾ: ಕಾಂಡ್ಲಾವನಗಳು ಜೈವಿಕ ವ್ಯವಸ್ಥೆಯ ಹಾಟ್‌ಸ್ಪಾಟ್ ಮಾತ್ರವಲ್ಲದೇ ಜನರ ಬದುಕನ್ನು ಕಟ್ಟುವ ಕೇಂದ್ರಗಳೂ ಆಗಿವೆ ಎಂದು ಹೊನ್ನಾವರ ಅರಣ್ಯ ವಿಭಾಗದ ಡಿಎಫ್‌ಒ ಯೋಗೀಶ ಸಿ.ಕೆ. ಹೇಳಿದರು.
ಕಾಂಡ್ಲಾ ವನಗಳು ಸಮೃದ್ಧ ಜೀವ ವೈವಿಧ್ಯತೆಯ ಕೇಂದ್ರವಾಗುವ ಜತೆಯಲ್ಲಿ ಕಡಲ್ಕೊರೆತ ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರಕೃತಿ ವಿಕೋಪ, ಪ್ರವಾಹದ ಸಂದರ್ಭದಲ್ಲಿ ಉಂಟಾಗಬಹುದಾದ ಅಪಾಯವನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈಗಾಗಲೇ ಯುನೆಸ್ಕೋ ಅಧ್ಯಯನದ ಪ್ರಕಾರ ಜಿಲ್ಲೆಯಲ್ಲಿ ೨೧೫೬.೬೩ ಹೆಕ್ಟೇರ್ ಕಾಂಡ್ಲಾ ಪ್ರದೇಶವಿದ್ದು, ಕೆಲವು ಕಾಂಡ್ಲಾ ವನಗಳನ್ನು ಅಭಿವೃದ್ಧಿಪಡಿಸುವುದರಿಂದ ಮೀನುಗಾರಿಕೆ ಹಾಗೂ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ. ಇದರಿಂದ ಸ್ಥಳೀಯರಿಗೂ ವಿವಿಧ ರೀತಿಯ ಆದಾಯದ ಮೂಲವಾಗುತ್ತದೆ. ಸ್ಕೊಡ್‌ವೆಸ್‌ನಂತಹ ಸಂಘ-ಸಂಸ್ಥೆಗಳು ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿದರೆ ಕಾಂಡ್ಲಾ ಸಂರಕ್ಷಣಾ ಕಾರ್ಯಕ್ರಮವನ್ನೂ ಪರಿಣಾಮಕಾರಿಯಾಗಿ ಯಶಸ್ವಿಗೊಳಿಸಲು ಸಾಧ್ಯ ಎಂದರು.
ಅಭಿಯಾನದ ಮುಖ್ಯಸ್ಥ ಸ್ಕೊಡ್‌ವೆಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಮಾತನಾಡಿ, ಕಳೆದ ಮಳೆಗಾಲದಲ್ಲಿ ಜಿಲ್ಲೆಯಲ್ಲಾದ ಹಲವಾರು ಪ್ರಕೃತಿ ವಿಕೋಪ ಸಂಗತಿಗಳು, ನದಿಯಂಚಿನಲ್ಲಿ ಉಂಟಾದ ಅನಾಹುತಗಳು, ಕಡಲ ಜೀವ ವೈವಿಧ್ಯತೆಯ ವ್ಯವಸ್ಥೆಯಲ್ಲಾಗುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಅಘನಾಶಿನಿ ಕಾಂಡ್ಲಾ ಸಂರಕ್ಷಣಾ ಅಭಿಯಾನ ಆರಂಭಿಸಿದ್ದೇವೆ. ಈ ಅಭಿಯಾನ ಪ್ರಥಮ ಹಂತದಲ್ಲಿ ಕಾರವಾರದಿಂದ ಭಟ್ಕಳದ ವರೆಗಿನ ಸಮುದ್ರತೀರ, ನದಿ ಪ್ರದೇಶಗಳಲ್ಲಿ ನಡೆಯಲಿದ್ದು ಕಾಂಡ್ಲಾ ನಾಟಿ, ನೆಡುತೋಪು ಸಂರಕ್ಷಣೆ, ಜನಜಾಗೃತಿ, ನದಿ ತೀರ ಪ್ರದೇಶಗಳ ಜನರಿಗೆ ವಿವಿಧ ಹಂತದ ಕೌಶಲ್ಯ ತರಬೇತಿ, ಪರಿಸರ ಪ್ರವಾಸೋದ್ಯಮ, ಜೇನು ಸಾಕಾಣಿಕೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಲಾಗಿದೆ. ಸಾರ್ವಜನಿಕರು ಸಂಘ-ಸಂಸ್ಥೆಗಳು, ಜನ ಪ್ರತಿನಿಧಿಗಳು ಈ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ವಿನಂತಿಸಿದರು.ಹಿರೇಗುತ್ತಿ ಆರ್‌ಎಫ್‌ಒ ರಾಜು ನಾಯ್ಕ ಹಾಗೂ ಸಿಬ್ಬಂದಿ, ಸ್ಕೊಡ್‌ವೆಸ್ ಸಿಬ್ಬಂದಿ, ಸ್ಥಳೀಯರು, ಉಪಸ್ಥಿತರಿದ್ದರು. ಸ್ಥಳೀಯರ ಸಹಕಾರದಲ್ಲಿ ಸಾವಿರಾರು ಕಾಂಡ್ಲಾ ಸಸಿಗಳನ್ನು ನಾಟಿ ಮಾಡಲಾಯಿತು. ಸ್ಕೋಡ್‌ವೆಸ್ ಕಾರ್ಯಕ್ರಮಾಧಿಕಾರಿ ನಾರಾಯಣ ಹೆಗಡೆ ಸ್ವಾಗತಿಸಿ, ನಿರ್ವಹಿಸಿದರು. ಅಭಿಯಾನದ ಸಂಯೋಜಕಿ ಶೋಭಾ ಎಸ್.ಜಿ. ವಂದಿಸಿದರು.