ಕನ್ನಡಪ್ರಭ ವಾರ್ತೆ ವಿಜಯಪುರ
ಕ್ರಾಂತಿವೀರ ಬ್ರಿಗೇಡ್ ನೇತೃತ್ವದಲ್ಲಿ ಶುಕ್ರವಾರ ನಿಯೋಗದೊಂದಿಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಈಶ್ವರಪ್ಪ, ಶ್ರೀಗಳ ನಿರ್ಬಂಧ ಆದೇಶವನ್ನು ವಾಪಸ್ ಪಡೆಯುವಂತೆ ಮನವಿಯಲ್ಲಿ ಒತ್ತಾಯಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ಹೇರಿ ಸ್ವಾಮಿಗಳು ನಮ್ಮೆಲ್ಲರಿಗೂ ದೇವರ ಸ್ವರೂಪ. ದೇವರು ಮಾಡದ ಹಾಗೂ ಸರ್ಕಾರ ಮಾಡದ ಕೆಲಸಗಳನ್ನು ಅವರು ಮಾಡುತ್ತಿದ್ದಾರೆ. ಸಾವಯವ ಕೃಷಿ, ಶೈಕ್ಷಣಿಕ ಸೇವೆ, ಸಾಮಾಜಿಕ ಸೇವೆ, ಆರೋಗ್ಯ ಸೇವೆ ಸೇರಿದಂತೆ ಅನೇಕ ಕೊಡುಗೆಗಳನ್ನು ಸಮಾಜಕ್ಕೆ ನೀಡಿದ್ದಾರೆ. ಅಂತಹ ಶ್ರೀಗಳಿಗೆ ರಾಜ್ಯ ಸರ್ಕಾರ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ಬರದಂತೆ ನಿರ್ಬಂಧ ಹಾಕಿದ್ದು ಕೋಟಿ ಕೋಟಿ ಹಿಂದೂಗಳಿಗೆ ನೋವಾಗಿದೆ. ತಕ್ಷಣ ನಿರ್ಬಂಧ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.ನಿರ್ಬಂಧದ ಕುರಿತು ಶ್ರೀಗಳು ಒಂದು ಕರೆ ಕೊಟ್ಟರೆ ರಾಜ್ಯದಲ್ಲಿ ದಂಗೆ ಏಳುತ್ತದೆ. ಯಾರ ಮುಲಾಜಿಗೂ ಒಳಗಾಗದೆ ಹಿಂದೂ ಸಮಾಜವನ್ನು ಒಗ್ಗೂಡಿಸುವ ಸನ್ಯಾಸಿ ಅವರು. ಆದರೆ ಹಿಂದೂ ಸಮಾಜದಲ್ಲಿ ಗುಂಪುಗಾರಿಕೆ ಆಗಲು ಕಾರಣವೇ ಈ ರಾಜ್ಯ ಕಾಂಗ್ರೆಸ್ ಸರ್ಕಾರ. ಹಿಂದೂ ಸಮಾಜವನ್ನು ತುಂಡು ಮಾಡುವುದರಲ್ಲಿ ಮೊದಲನೇ ಅಗ್ರ ಸ್ಥಾನದಲ್ಲಿರುವುದೇ ಸಚಿವ ಎಂ.ಬಿ.ಪಾಟೀಲ. ರಾಜ್ಯ ಸರ್ಕಾರಕ್ಕೆ ಯಾಕೆ ದುರ್ಬುದ್ಧಿ ಬಂತೋ ಗೊತ್ತಿಲ್ಲ. ಶ್ರೀಗಳಿಗೆ ನಿರ್ಬಂಧ ಹಾಕಿದ್ದರಿಂದಲೇ ರಾಜ್ಯ ಸರ್ಕಾರದಲ್ಲಿ ಗೊಂದಲ ಉಂಟಾಗಿದೆ. ಇದೇ ರೀತಿ ಮುಂದುವರೆದರೆ ರಾಜ್ಯ ಸರ್ಕಾರ ಅಂತಿಮ ಕ್ಷಣವನ್ನು ಎಣಿಸುತ್ತದೆ ಎಂದು ಭವಿಷ್ಯ ನುಡಿದರು. ಸರ್ಕಾರದ ನಡೆಯಿಂದಾಗಿ ಈ ಸರ್ಕಾರ ಬಹಳ ದಿನಗಳ ಕಾಲ ಉಳಿಯಲ್ಲ. ರಾಷ್ಟ್ರಪತಿ ಆಡಳಿತ ಬರುತ್ತೋ ಅಥವಾ ಚುನಾವಣೆಯೇ ಎದುರಾಗಬಹುದು ಎಂದು ಅಭಿಪ್ರಾಯಪಟ್ಟರು.
ಆರ್‌ಎಸ್‌ಎಸ್ ಕುರಿತು ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಆರ್‌ಎಸ್‌ಎಸ್‌ನಲ್ಲಿ ಎಲ್ಲಾದರೂ ದೇಶಪ್ರೇಮ ಬಿಟ್ಟು ಸ್ವಾರ್ಥಿಗಳಾಗಿ ಎಂದು ಹೇಳಿದ್ದಾರಾ? ಸರ್ಕಾರ ಮಾಡುವ ಕೆಲಸವನ್ನು ಆರ್‌ಎಸ್‌ಎಸ್ ಮಾಡುತ್ತಿದೆ. ಅದರ ಬಗ್ಗೆ ಏಕೆ ಸಿಟ್ಟು ಗೊತ್ತಿಲ್ಲ. ಸರ್ಕಾರಿ ನೌಕರರು ಆರ್‌ಎಸ್‌ಎಸ್ ಹೋಗಬಾರದು ಎಂದು ಪ್ರಿಯಾಂಕ ಖರ್ಗೆ ಬಾಯಿಗೆ ಬಂದಂಗೆ ಮಾತನಾಡುತ್ತಿದ್ದಾರೆ. ಆರ್‌ಎಸ್‌ಎಸ್ ಇಲ್ಲದಿದ್ದರೆ ಇಂದು ನಾವೆಲ್ಲ ಮುಲ್ಲಾಗಳಾಗುತ್ತಿದ್ದೆವು. ಮೋದಿ ಪ್ರಧಾನಿ ಆಗುವವರೆಗೂ ಭಾರತಕ್ಕೆ ಅನ್ಯ ರಾಷ್ಟ್ರಗಳು ಸಪೋರ್ಟ್ ಮಾಡುತ್ತಿರಲಿಲ್ಲ. ಈಗ ನಮ್ಮ ದೇಶಕ್ಕೆ ಸಪೋರ್ಟ್ ಮಾಡುತ್ತಿವೆ ಎಂದು ತಿಳಿಸಿದರು.ಈ ವೇಳೆ ಕ್ರಾಂತಿವೀರ ಬ್ರಿಗೇಡ್ ರಾಜ್ಯಾಧ್ಯಕ್ಷ ಬಸವರಾಜ ಬಾಳಿಕಾಯಿ, ಕಾರ್ಯಾಧ್ಯಕ್ಷ ಕೆ.ಇ.ಕಾಂತೇಶ, ವೀರಣ್ಣ ಹಳೆಗೌಡರ, ರಾಹುಲ ಔರಂಗಾಬಾದ, ಕಾಶಿನಾಥ ಚನವೀರ, ರಾಜು ಬಿರಾದಾರ ಮುಂತಾದವರು ಹಾಜರಿದ್ದರು.
ಕೋಟ್
- ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ