ಚಿಕ್ಕಾಲಗುಂಡಿ ಮಠ ತೊರೆಯಲು ಕನ್ಹೇರಿ ಶ್ರೀ ನಕಾರ

KannadaprabhaNewsNetwork |  
Published : Oct 18, 2025, 02:02 AM IST
(ಫೋಟೊ 17ಬಿಕೆಟಿ13, ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಚಿಕ್ಕಾಲಗುಂಡಿ ಗ್ರಾಮದ ಮಲ್ಲಿಕಾರ್ಜುನ ಮಠದಲ್ಲಿ ಇರುವ ಕನ್ಹೇರಿ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳಿಗೆ ಜಿಲ್ಲಾಕಾರಿ ಆದೇಶದಂತೆ ಮಠ ತೊರೆಯುವಂತೆ ತಿಳಿಸಲು ತೆರಳಿದ್ದ ಬೀಳಗಿ ತಹಸೀಲ್ದಾರ್ ವಿನೋದ ಹತ್ತಳ್ಳಿ ಹಾಗೂ ಪೊಲೀಸ್ ಅಧಿಕಾರಿಗಳು.) | Kannada Prabha

ಸಾರಾಂಶ

ಕನ್ಹೇರಿಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ವಿಜಯಪುರ ಜಿಲ್ಲಾ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ ಬೆನ್ನಲ್ಲೇ, ಜಿಲ್ಲಾಧಿಕಾರಿ ಸಂಗಪ್ಪ ಅವರು ಶ್ರೀಗಳಿಗೆ ತಕ್ಷಣವೇ ಜಿಲ್ಲೆ ತೊರೆಯುವಂತೆ ಶುಕ್ರವಾರ ಸಂಜೆ ಆದೇಶಿಸಿದ್ದು, ಆದರೆ ಇದಕ್ಕೆ ಒಪ್ಪದ ಶ್ರೀಗಳು ಬೇಕಾದರೆ ಬಂಧಿಸಿ ಜೈಲಿಗೆ ಹಾಕಿ ನಾನು ಮಠ ತೊರೆಯಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕನ್ಹೇರಿಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ವಿಜಯಪುರ ಜಿಲ್ಲಾ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ ಬೆನ್ನಲ್ಲೇ, ಜಿಲ್ಲಾಧಿಕಾರಿ ಸಂಗಪ್ಪ ಅವರು ಶ್ರೀಗಳಿಗೆ ತಕ್ಷಣವೇ ಜಿಲ್ಲೆ ತೊರೆಯುವಂತೆ ಶುಕ್ರವಾರ ಸಂಜೆ ಆದೇಶಿಸಿದ್ದು, ಆದರೆ ಇದಕ್ಕೆ ಒಪ್ಪದ ಶ್ರೀಗಳು ಬೇಕಾದರೆ ಬಂಧಿಸಿ ಜೈಲಿಗೆ ಹಾಕಿ ನಾನು ಮಠ ತೊರೆಯಲ್ಲ ಎಂದು ಪಟ್ಟು ಹಿಡಿದಿದ್ದಾರೆ.ಇದು ಜಿಲ್ಲಾಡಳಿತವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಬಸವ ಸಂಸ್ಕೃತಿ ಅಭಿಯಾನ ಹಾಗೂ ಲಿಂಗಾಯತ ಮಠಾಧೀಶರ ಒಕ್ಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಕನ್ಹೇರಿಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ವಿಜಯಪುರ ಜಿಲ್ಲಾ ಪ್ರವೇಶಕ್ಕೆ ಜಿಲ್ಲಾಡಳಿತ ಗಲಾಟೆ ನಡೆಯಬಹುದೆಂಬ ನೆಪದಲ್ಲಿ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿತ್ತು.

ಕನ್ಹೇರಿ ಶ್ರೀಗಳು ಬೀಳಗಿ ತಾಲೂಕಿನ ಚಿಕ್ಕಾಲಗುಂಡಿ ಗ್ರಾಮದ ಮಲ್ಲಿಕಾರ್ಜುನ ಮಠದಲ್ಲಿ ತಂಗಿದ್ದು ಮಾಹಿತಿ ಹಿನ್ನೆಲೆ ಆದೇಶ ಪ್ರತಿ ದೊರೆತ ಒಂದು ತಾಸಿನೊಳಗೆ ಮಠ ಬಿಟ್ಟು ತೆರಳುವಂತೆ ಜಿಲ್ಲಾಧಿಕಾರಿಗಳ ಆದೇಶದ ಪ್ರತಿಯನ್ನು ಬೀಳಗಿ ತಹಸೀಲ್ದಾರ್ ವಿನೋದ ಹತ್ತಳ್ಳಿ ಹಾಗೂ ಪೊಲೀಸ್ ಅಧಿಕಾರಿಗಳು ಶುಕ್ರವಾರ ಸಂಜೆ 6 ಗಂಟೆ ಹೊತ್ತಿಗೆ ಮಠದಲ್ಲಿದ್ದ ಶ್ರೀಗಳಿಗೆ ತಲುಪಿಸಿ ಜಿಲ್ಲಾ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ್ದು, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಒಂದು ಗಂಟೆಯ ಒಳಗೆ ಚಿಕ್ಕಾಲಗುಂಡಿ ಮಲ್ಲಿಕಾರ್ಜುನ ಮಠದಿಂದ ನಿರ್ಗಮಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿರುವ ಪ್ರತಿ ನೀಡಿದರು.

ಆದರೆ, ಜಿಲ್ಲಾಡಳಿತ ಆದೇಶವನ್ನು ಧಿಕ್ಕರಿಸಿರುವ ಕನ್ಹೇರಿ ಶ್ರೀಗಳು ಚಿಕ್ಕಾಲಗುಂಡಿಯಲ್ಲಿರುವುದು ತಮ್ಮ ಶಾಖಾ ಮಠ. ಇಲ್ಲಿಂದ ತೆರಳುವ ಪ್ರಶ್ನೆಯೇ ಇಲ್ಲ ಎಂದು ಪಟ್ಟು ಹಿಡಿದ್ದು ಜಿಲ್ಲಾಡಳಿತವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಶ್ರೀಗಳು ಚಿಕ್ಕಾಲಗುಂಡಿ ಗ್ರಾಮದಲ್ಲಿರುವ ಮಲ್ಲಿಕಾರ್ಜುನ ಮಠ ತೊರೆಯುವಂತೆ ಶ್ರೀಗಳಿಗೆ ಆದೇಶಿರುವ ಬಗ್ಗೆ ಮಾಹಿತಿ ಪಡೆಯಲು ಜಿಲ್ಲಾಧಿಕಾರಿ ಸಂಗಪ್ಪ ಅವರಿಗೆ ಪತ್ರಕರ್ತರು ಹಲವು ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ.

ಬೇಕಿದ್ದರೆ ಬಂಧಿಸಿ, ಮಠ ಬಿಟ್ಟು ಹೋಗಲ್ಲ: ಚಿಕ್ಕಾಲಗುಂಡಿ ಗ್ರಾಮದ ಮಲ್ಲಿಕಾರ್ಜುನ ಮಠ ನಮ್ಮ ಶಾಖಾ ಮಠ ಮಠದಿಂದ ಹೋಗಲ್ಲ. ಪರ್ಯಾಯ ಕ್ರಮ ತೆಗೆದುಕೊಳ್ಳಿ, ಇಲ್ಲವೇ ಬಂದಿಸುವುದಿದ್ದರೆ ಬಂಧಿಸಿ ಎಂದು ಕಾಡಸಿದ್ದೇಶ್ವರ ಶ್ರೀಗಳು ಹೇಳಿದ್ದಾರೆ.

ಜಿಲ್ಲೆ ತೊರೆಯುವಂತೆ ಜಿಲ್ಲಾಧಿಕಾರಿ ಆದೇಶ ಪ್ರತಿಯನ್ನು ಶುಕ್ರವಾರ ಸಂಜೆ ತಲುಪಿಸಲು ಚಿಕ್ಕಾಲಗುಂಡಿ ಗ್ರಾಮದ ಮಲ್ಲಿಕಾರ್ಜುನ ಮಠಕ್ಕೆ ಹೋದ ಬೀಳಗಿ ತಹಸೀಲ್ದಾರ್‌ ವಿನೋದ ಹತ್ತಳ್ಳಿ ಅವರಿಗೆ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳು ಖಡಕ್ಕಾಗಿ ಹೇಳಿದ್ದಾರೆ. ಇದು ನಮ್ಮ ಮಠ, ಖಾಲಿ ಮಾಡಲು ಹೇಳುತ್ತಿದ್ದೀರಿ ಯಾಕೆ? ಇದು ಯೋಗ್ಯವಲ್ಲ. ಯಾವ ಘಟನೆ? ಬಾಗಲಕೋಟೆ ಜಿಲ್ಲೆಯಲ್ಲಿ ಯಾರು ತಕರಾರು ಮಾಡಿಲ್ಲವಲ್ಲ ಎಂದು ಪ್ರಶ್ನಿಸಿದ್ದಾರೆ.

ಆಗ ತಹಸೀಲ್ದಾರ ವಿನೋದ ಹತ್ತಳ್ಳಿ ಅವರು, ವಿಜಯಪುರ ಜಿಲ್ಲೆಯಲ್ಲಿ ಪ್ರತಿಭಟನೆ ಆಗಿದೆ. ಇಲ್ಲಿಯೂ ದಂಗೆ ಆಗಬಹುದು ಎಂದಾಗ, ಹೌದು, ನೀವು ಹೇಳುತ್ತೀರಿ. ನಾನು ಹೋಗಿದ್ದಕ್ಕೆ ದಂಗೆ ಆಗಲ್ಲವಾ? ನಾನಂತೂ ಹೋಗಲ್ಲ. ನೀವು ಬಂಧಿಸುವುದಿದ್ದರೆ ಬಂಧಿಸಿ, ಅದಕ್ಕೆ ಹೆಚ್ಚಿನ ಪೊಲೀಸರನ್ನು ಕರೆದುಕೊಂಡು ಬನ್ನಿ, ಅಲ್ಲಿವರೆಗೂ ನಾನು ಇಲ್ಲಿಯೇ ಇರುತ್ತೇನೆ. ನಿಮಗೆ ಸಮಾಧಾನ ಆಗುವಷ್ಟು ದಿನ ಜೈಲಿನಲ್ಲಿಡಿ. ನಾನು ಬೇಲ್‌ಗೂ ಅರ್ಜಿ ಹಾಕಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದರಿಂದ ತಹಸೀಲ್ದಾರ್ ಹಾಗೂ ಪೊಲೀಸರು ಬಂದ ದಾರಿಗೆ ಸುಂಕ ವಿಲ್ಲದಂತೆ ಮರಳಿದ್ದಾರೆ.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ