ಕಂಕನಾಡಿ- ಪಂಪ್‌ವೆಲ್‌ ಬೈಪಾಸ್‌ ಕಾಮಗಾರಿಗೆ ತೂಗುಗತ್ತಿ!

KannadaprabhaNewsNetwork |  
Published : Dec 09, 2024, 12:47 AM IST
ನಿಧಾನಗತಿಯಲ್ಲಿರುವ ಜೆಪ್ಪು ಮಾಂಕಾಳಿಪಡ್ಪು ರೈಲ್ವೆ ಕೆಳಸೇತುವೆ ಕಾಮಗಾರಿ | Kannada Prabha

ಸಾರಾಂಶ

ಮಂಗಳೂರು ನಗರದ ಜೆಪ್ಪು ಮಾಂಕಾಳಿಪಡ್ಪುವಿನಲ್ಲಿ ರೈಲ್ವೆ ಕೆಳಸೇತುವೆ ಕಾಮಗಾರಿ ವಿಳಂಬ ಹಿನ್ನೆಲೆಯಲ್ಲಿ ಕಂಕನಾಡಿ-ಪಂಪ್‌ವೆಲ್‌ ನಡುವಿನ ಬೈಪಾಸ್‌ ರಸ್ತೆ ಕಾಮಗಾರಿ ನಿರ್ದಿಷ್ಟ ಸಮಯದಲ್ಲಿ ಆರಂಭಗೊಳ್ಳುವುದು ಅನುಮಾನವಾಗಿದೆ.

ಆತ್ಮಭೂಷಣ್‌ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ನಗರದ ಜೆಪ್ಪು ಮಾಂಕಾಳಿಪಡ್ಪುವಿನಲ್ಲಿ ರೈಲ್ವೆ ಕೆಳಸೇತುವೆ ಕಾಮಗಾರಿ ವಿಳಂಬ ಹಿನ್ನೆಲೆಯಲ್ಲಿ ಕಂಕನಾಡಿ-ಪಂಪ್‌ವೆಲ್‌ ನಡುವಿನ ಬೈಪಾಸ್‌ ರಸ್ತೆ ಕಾಮಗಾರಿ ನಿರ್ದಿಷ್ಟ ಸಮಯದಲ್ಲಿ ಆರಂಭಗೊಳ್ಳುವುದು ಅನುಮಾನವಾಗಿದೆ.

ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯಡಿ 30 ಕೋಟಿ ರು. ವೆಚ್ಚದಲ್ಲಿ ಜೆಪ್ಪು ಮಾಂಕಾಳಿಪಡ್ಪುವಿನಲ್ಲಿ ರೈಲ್ವೆ ಕೆಳಸೇತುವೆ(ಆರ್‌ಯುಬಿ) ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ನಿಗದಿಯಂತೆ 2024 ಜನವರಿಗೆ ಕೊನೆಗೊಳ್ಳಬೇಕಿತ್ತು. ಆದರೆ ನಾನಾ ಕಾರಣದಿಂದ ಒಂದು ವರ್ಷ ವಿಳಂಬವಾಗಿದ್ದು, ಇನ್ನೂ ಕಾಮಗಾರಿ ಪೂರ್ಣವಾಗಿಲ್ಲ. ಜನವರಿಗೆ ಗಡುವು: ಜೆಪ್ಪು ಮಾಂಕಾಳಿಪಡ್ಪುವಿನಲ್ಲಿ ರೈಲ್ವೆ ಕೆಳಸೇತುವೆ ನಿರ್ಮಾಣಕ್ಕೆ ಬಾಕ್ಸ್ ಪುಶ್ಶಿಂಗ್‌ ತಂತ್ರಜ್ಞಾನ ಬಳಸಲಾಗುತ್ತದೆ. ಕಾಂಕ್ರಿಟ್‌ ಬಾಕ್ಸ್‌ಗಳನ್ನು ರಚಿಸಿ, ಅದನ್ನು ರೈಲು ಹಳಿಯ ಕೆಳಭಾಗದಲ್ಲಿ ಅಳವಡಿಸಲಾಗುತ್ತದೆ. ಈಗಾಗಲೇ ಮೂರು ಬಾಕ್ಸ್‌ಗಳನ್ನು ಅಳವಡಿಸಲಾಗಿದ್ದು, ಇನ್ನೂ ಒಂದು ಬಾಕ್ಸ್‌ ಅಳವಡಿಕೆಗೆ ಬಾಕಿ ಇದೆ. ಕಳೆದ ಕೆಲವು ಸಮಯ ಸುರಿದ ಮಳ‍ೆಯ ಕಾರಣದಿಂದ ಕಾಮಗಾರಿ ಮತ್ತೆ ವಿಳಂಬವಾಗಿದೆ. ಇತ್ತೀಚೆಗೆ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದ ಸಂಸದ ಕ್ಯಾ.ಬ್ರಿಜೇಶ್‌ ಚೌಟ ಅವರು 2025ರ ಜನವರಿ ಒಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದಾರೆ.

ರೈಲ್ವೆ ಕೆಳಸೇತುವೆ ಕಾಮಗಾರಿ ಮುಕ್ತಾಯಗೊಂಡ ಬಳಿಕವೇ ಸಂಪರ್ಕ ರಸ್ತೆ ಕಾಮಗಾರಿ ನಡೆಯಬೇಕು. ಸುಮಾರು 19.30 ಕೋಟಿ ರು. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಜೆಪ್ಪಿನಮೊಗರು ಹಾಗೂ ಮಾಂಕಾಳಿಪಡ್ಪು ಕಡೆಗಳಲ್ಲಿ ಸಂಪರ್ಕ ರಸ್ತೆ ನಿರ್ಮಾಣವಾಗಬೇಕಾಗಿದೆ. ಅಲ್ಲದೆ ಮಳೆ ನೀರು ಹರಿಯಲು ನೇತ್ರಾವತಿ ನದಿ ವರೆಗೆ ಒಳಚರಂಡಿ ವ್ಯವಸ್ಥೆಯನ್ನು ಮಾಡಬೇಕಾಗಿದೆ. ನಂತರವಷ್ಟೆ ಇಲ್ಲಿ ವಾಹನ ಸಂಚಾರ ಸಾಧ್ಯವಾಗಲಿದೆ.

ವಿಳಂಬದಿಂದ ಬೈಪಾಸ್‌ ಕಾಮಗಾರಿಗೆ ತೊಂದರೆ:

ಕಂಕನಾಡಿ-ಪಂಪ್‌ವೆಲ್‌ ಸಂಪರ್ಕದ ಬೈಪಾಸ್‌ ರಸ್ತೆಯನ್ನು ನಾಲ್ಕು ಪಥಕ್ಕೆ ಕಾಂಕ್ರಿಟೀಕರಣಗೊಳಿಸಲಾಗುತ್ತದೆ. ಇದಕ್ಕಾಗಿ ಸುಮಾರು 8 ಕೋಟಿ ರು. ಬಿಡುಗಡೆಗೊಂಡಿದೆ. ಮಾರ್ಚ್‌ ಒಳಗೆ ಇದರ ಕಾಮಗಾರಿಯೂ ಮುಕ್ತಾಯಗೊಳ್ಳಬೇಕು. ಆದರೆ ಜೆಪ್ಪು ಮಾಂಕಾಳಿಪಡ್ಪು ರೈಲ್ವೆ ಕೆಳಸೇತುವೆ ಕಾಮಗಾರಿ ಮುಕ್ತಾಯಗೊಳ್ಳದೆ ಈ ಬೈಪಾಸ್‌ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವಂತಿಲ್ಲ ಎಂಬ ಇಕ್ಕಟ್ಟಿನಲ್ಲಿ ಗುತ್ತಿಗೆದಾರರಿದ್ದಾರೆ.

ಈ ರೈಲ್ವೆ ಕೆಳಸೇತುವೆ ಪೂರ್ಣಗೊಂಡರೆ ಮಾತ್ರ ತೊಕ್ಕೊಟ್ಟು ಭಾಗದಿಂದ ಬಂದು ಹೋಗುವ ವಾಹನಗಳನ್ನು ಈ ಬದಲಿ ರಸ್ತೆಯಲ್ಲಿ ಕಳುಹಿಸಲು ಸಾಧ್ಯವಿದೆ. ಆದರೆ ಕೆಳಸೇತುವೆ ಕಾಮಗಾರಿ ಜನವರಿ ಅಂತ್ಯಕ್ಕೆ ಮುಕ್ತಾಯಗೊಂಡರೂ, ಸಂಪರ್ಕ ರಸ್ತೆ ಕಾಮಗಾರಿಗೆ ಮತ್ತೆ ಎರಡು ತಿಂಗಳು ಬೇಕು. ಕಂಕನಾಡಿ-ಪಂಪ್‌ವೆಲ್‌ ರಸ್ತೆ ಕಾಂಕ್ರಿಟ್‌ ಕಾಮಗಾರಿಯನ್ನು ಮಾರ್ಚ್‌ ಒಳಗೆ ಪೂರ್ಣಗೊಳಿಸಬೇಕಾಗಿದೆ. ಇಲ್ಲದಿದ್ದರೆ ಅನುದಾನ ವಾಪಾಸಾಗುವ ಭೀತಿ ಇದೆ ಎನ್ನುತ್ತಾರೆ ಅಧಿಕಾರಿಗಳು. ಹಾಗಾಗಿ ರೈಲ್ವೆ ಕೆಳಸೇತುವೆ ಕಾಮಗಾರಿ ತ್ವರಿತ ಮುಕ್ತಾಯಗೊಳ್ಳುವುದನ್ನೇ ನಿರೀಕ್ಷಿಸಲಾಗಿದೆ.

--------------ವನ್‌ವೇ ಸಂಚಾರದ ಸಂಕಷ್ಟ

ನಿಗದಿತ ಸಮಯದಲ್ಲಿ ಜೆಪ್ಪು ಮಾಂಕಾಳಿಪಡ್ಪು ರೈಲ್ವೆ ಕೆಳಸೇತುವೆ ಕಾಮಗಾರಿ ಮುಕ್ತಾಯಗೊಳ್ಳದಿದ್ದರೆ ಸಂಚಾರ ನಿಬಿಡ ಕಂಕನಾಡಿ-ಪಂಪ್‌ವೆಲ್‌ ಬೈಪಾಸ್‌ ರಸ್ತೆಯನ್ನೇ ವನ್‌ ವೇ ಸಂಚಾರಕ್ಕೆ ಒಳಪಡಿಸಿ ಇನ್ನೊಂದು ಬದಿಯಲ್ಲಿ ಕಾಂಕ್ರಿಟ್‌ ಕಾಮಗಾರಿ ನಡೆಸಲು ಲೋಕೋಪಯೋಗಿ ಇಲಾಖೆ ಮುಂದಾಗಿದೆ.

ಮಾರ್ಚ್‌ ಒಳಗೆ ರಸ್ತೆಯ ಕಾಮಗಾರಿ ಮುಕ್ತಾಯಗೊಳಿಸಲೇ ಬೇಕಾಗಿರುವುದರಿಂದ ವನ್‌ ವೇ ಕಾಮಗಾರಿ ನಡೆಸಿ, ಇನ್ನೊಂದು ಬದಿಯಿಂದ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಹೀಗಾದಲ್ಲಿ ಕೆಲವು ತಿಂಗಳ ಕಾಲ ಮಂಗಳೂರು ಟ್ರಾಫಿಕ್‌ ಜಾಮ್‌ಗೆ ಸಿಲುಕಿ ತತ್ತರಿಸದೆ ವಿಧಿ ಇಲ್ಲ ಎನ್ನುವಂತಾಗಿದೆ.

---------------ಜೆಪ್ಪು ಮಾಂಕಾಳಿಪಡ್ಪುವಿನಲ್ಲಿ ರೈಲ್ವೆ ಕೆಳಸೇತುವೆ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ಈಗ ಮಳೆಯಿಂದಾಗಿ ಮತ್ತೆ ಕಾಮಗಾರಿಗೆ ತೊಡಕಾಗಿದೆ. ಹೀಗಿದ್ದೂ ಜನವರಿ ಅಂತ್ಯದಲ್ಲಿ ಕಾಮಗಾರಿ ಮುಕ್ತಾಯಗೊಂಡರೂ ಸಂಚಾರಕ್ಕೆ ಮುಕ್ತಯಗೊಳಿಸದಿದ್ದರೆ, ಕಂಕನಾಡಿ ಬೈಪಾಸ್‌ ಕಾಮಗಾರಿ ನಡೆಸುವುದು ಕಷ್ಟ.

-ಜಿ.ಕೆ.ಭಟ್‌, ಸಾಮಾಜಿಕ ಕಾರ್ಯಕರ್ತ, ಮಂಗಳೂರು

------------------ಜೆಪ್ಪು ಮಾಂಕಾಳಿಪಡ್ಪು ರೈಲ್ವೆ ಕೆಳಸೇತುವೆ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಜನವರಿ ಅಂತ್ಯದೊಳಗೆ ಕಾಮಗಾರಿ ಮುಕ್ತಾಯಕ್ಕೆ ಉದ್ದೇಶಿಸಲಾಗಿದೆ. ಉಳಿದ ಕಾಮಗಾರಿಗಳೂ ನಿಗದಿಯಂತೆ ಮುಕ್ತಾಯಗೊಳ್ಳಲು ಶ್ರಮಿಸಲಾಗುವುದು.

-ಅರುಣ್‌ ಚತುರ್ವೇದಿ, ವಿಭಾಗೀಯ ಅಧಿಕಾರಿ, ಫಾಲ್ಘಾಟ್‌ ರೈಲ್ವೆ ವಿಭಾಗ, ಕೇರಳ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ