ಕಣ್ಕಟ್ಟು ವಿದ್ಯೆ ಕಲ್ತು ಸುಳ್ಳಿನ ಪುಂಗಿ ಊದುವ ಸಿದ್ದು: ಆರ್‌.ಅಶೋಕ್‌

KannadaprabhaNewsNetwork |  
Published : Apr 04, 2026, 01:30 AM IST
3ಕೆಡಿವಿಜಿ1-ದಾವಣಗೆರೆಯಲ್ಲಿ ಶುಕ್ರವಾರ ವಿಪಕ್ಷ ನಾಯರ ಆರ್.ಅಶೋಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಇತರರು ಇದ್ದರು. | Kannada Prabha

ಸಾರಾಂಶ

ದಾಖಲೆಯ 16 ಬಜೆಟ್ ಮಂಡಿಸಿದ್ದಾಗಿ ಬೀಗುವ ಸಿಎಂ ಸಿದ್ದರಾಮಯ್ಯ ಈಗ ಕಣ್ಕಟ್ಟು ವಿದ್ಯೆ ಕಲಿತು, ಅಭಿವೃದ್ಧಿಗೆ ಹಣ ಕೊಡದೆ, ಗ್ಯಾರಂಟಿಗಳನ್ನೂ ಸರಿಯಾಗಿ ಅನುಷ್ಟಾನಗೊಳಿಸದೇ, ಆರ್ಥಿಕ ಶಿಸ್ತು ಪಾಲನೆ ಮಾಡುತ್ತಿರುವುದಾಗಿ ಸುಳ್ಳು ಹೇಳಿ, ಅದೇ ಸುಳ್ಳಿನ ಪುಂಗಿ ಊದುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ ಟೀಕಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾಖಲೆಯ 16 ಬಜೆಟ್ ಮಂಡಿಸಿದ್ದಾಗಿ ಬೀಗುವ ಸಿಎಂ ಸಿದ್ದರಾಮಯ್ಯ ಈಗ ಕಣ್ಕಟ್ಟು ವಿದ್ಯೆ ಕಲಿತು, ಅಭಿವೃದ್ಧಿಗೆ ಹಣ ಕೊಡದೆ, ಗ್ಯಾರಂಟಿಗಳನ್ನೂ ಸರಿಯಾಗಿ ಅನುಷ್ಟಾನಗೊಳಿಸದೇ, ಆರ್ಥಿಕ ಶಿಸ್ತು ಪಾಲನೆ ಮಾಡುತ್ತಿರುವುದಾಗಿ ಸುಳ್ಳು ಹೇಳಿ, ಅದೇ ಸುಳ್ಳಿನ ಪುಂಗಿ ಊದುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ ಟೀಕಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದೇ ಒಂದು ಅಭಿವೃದ್ಧಿ ಕಾರ್ಯವನ್ನೂ ಕೈಗೊಳ್ಳದ ಸಿದ್ದರಾಮಯ್ಯ ಸರ್ಕಾರಕ್ಕೆ ಶಿಸ್ತೇ ಇಲ್ಲ. ಸುಳ್ಳು ಹೇಳಿಕೊಂಡೇ ಮೂರು ವರ್ಷ ಕಳೆದಿದ್ದು, ಸಿದ್ದರಾಮಯ್ಯನವರಿಗೆ ಸುಳ್ಳು ರಾಮಯ್ಯನೆಂಬ ಬಿರುದು ಕೊಡಬೇಕಷ್ಟೇ ಎಂದರು.

ಗ್ಯಾರಂಟಿಗಳ ವಿಚಾರದಲ್ಲೂ ಸಿದ್ದರಾಮಯ್ಯ ಸುಳ್ಳಿನ ಪುಂಗಿ ಊದುತ್ತಲೇ ಇದ್ದಾರೆ. ಸಾಲದ ರಾಮಯ್ಯ ಅಲ್ಲ, ಅನ್ನದ ರಾಮಯ್ಯ ಅಂತಾ ತಮ್ಮನ್ನು ತಾವೇ ಸಿಎಂ ಹೊಗಳಿಕೊಂಡಿದ್ದಾರೆ. ಇಂದಿರಾ ಕಿಟ್ ಕೊಡುತ್ತೇವೆಂದರು? ಕಿಟ್ ಎಲ್ಲಿ ಕೊಟ್ಟಿದ್ದಾರೆ? ಸಿದ್ದರಾಮಯ್ಯ ಸರ್ಕಾರದ ಅನ್ನ ಭಾಗ್ಯ ಯೋಜನೆಗೆ ಅಕ್ಕಿ ಕೊಡುತ್ತಿರುವುದೇ ಕೇಂದ್ರ ಸರ್ಕಾರ. ಅನ್ನ ಭಾಗ್ಯದ ಅಕ್ಕಿ ತುಂಬಿದ ಚೀಲ ಮಾತ್ರ ಸಿದ್ದರಾಮಯ್ಯನವರದ್ದು ಎಂದು ವ್ಯಂಗ್ಯವಾಡಿದರು.

ನಾವು ಗ್ಯಾರಂಟಿ ವಿರೋಧಿಗಳಲ್ಲ. ಆದರೆ, ಗ್ಯಾರಂಟಿಗಳನ್ನು ಸರಿಯಾಗಿ ಅನುಷ್ಟಾನಗೊಳಿಸುತ್ತಿಲ್ಲ ಅಂತಷ್ಟೇ ಹೇಳುತ್ತಿದ್ದೇವೆ. ಗ್ಯಾರಂಟಿಗಳಿಗೆ ಮೋಸ ಮಾಡುತ್ತಿರುವುದು ಕಾಂಗ್ರೆಸ್ ಸರ್ಕಾರ. ಇನ್ನೂ 25 ಗ್ಯಾರಂಟಿ ಯೋಜನೆಗಳನ್ನು ಕೊಡಿ ನಾವು ಬೇಡ ಅನ್ನುವುದಿಲ್ಲ. ಆದರೆ, ನೀಡುವ ಗ್ಯಾರಂಟಿಗಳನ್ನು ಸರಿಯಾಗಿ ಕೊಡಿ ಅಂತಾ ನಾವು ಹೇಳುತ್ತೇವೆ. ಹಿಂದುಳಿದ ವರ್ಗಕ್ಕೆ ಮೋಸ ಮಾಡಿದ ಸಿದ್ದರಾಮಯ್ಯ ಈಗ ಅದೇ ಸಮುದಾಯಗಳ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಮೂರು ವರ್ಷವಾದರೂ ಹಿಂದುಳಿದ ವರ್ಗಗಳ 8 ನಿಗಮಗಳಿಗೆ ಅಧ್ಯಕ್ಷರನ್ನೇ ನೇಮಕ ಮಾಡಿಲ್ಲ. ಅನುದಾನ ಕೊಟ್ಟಿಲ್ಲ, ನಿಗಮಗಳ ಹಣವನ್ನೇ ಕಾಂಗ್ರೆಸ್ ಸರ್ಕಾರ ನುಂಗಿ ಹಾಕಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನೇ ಲೂಟಿ ಮಾಡಿದ್ದಾರೆ. ಇಷ್ಟೆಲ್ಲಾ ಮಾಡಿದರೂ ಸಿದ್ದರಾಮಯ್ಯ ಯಾವ ಮುಖ ಇಟ್ಟುಕೊಂಡು, ದಾವಣಗೆರ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜನರ ಮುಂದೆ ಹೋಗಿ ಮತ ಕೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಹುಬ್ಬಳ್ಳಿಯಲ್ಲಿ ಸಾವಿರಾರು ಯುವಕರು ಬೀದಿಗಿಳಿದು, ಉದ್ಯೋಗಕ್ಕಾಗಿ ಪ್ರತಿಭಟಿಸಿದರು. ಆಗ 56 ಸಾವಿರ ಹುದ್ದೆ ಭರ್ತಿ ಮಾಡುತ್ತೇವೆಂದ ಸರ್ಕಾರ ಈವರೆಗೆ ನೇಮಕಾತಿ ಪ್ರಕ್ರಿಯೆ ಕೈಗೊಂಡಿಲ್ಲ. ನೇಮಕಾತಿಗೆ ಹಣವೇ ಇಲ್ಲ. ಹೀಗೆಯೇ 2-3 ವರ್ಷ ಕಣ್ಣೊರೆಸಿ, ಒಂದು ದಿನ ಅಧಿಕಾರ ಮುಗಿಸುತ್ತಾರೆ. ಸಿದ್ದರಾಮಯ್ಯ ಅಧಿಕಾರದಲ್ಲಿ ಅಭಿವೃದ್ಧಿಗೆ ಹಣವೇ ಇಲ್ಲ. ಆದರೆ, ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್ ಮುಖಂಡರಿಗೆ ಗಂಜಿ ಕೇಂದ್ರ ಮಾಡಿದ್ದಾರೆ. ಗ್ಯಾರಂಟಿ ಯೋಜನೆಯ ಐವರಿಗೆ ಸಂಪುಟ ದರ್ಜೆ ಸೌಲಭ್ಯ ನೀಡುತ್ತಿದ್ದಾರೆ. ರಾಜ್ಯದ ಜನರ ತೆರಿಗೆ ಹಣ ಹೀಗೆಲ್ಲಾ ಬಳಸಬಹುದೇ ಎಂದು ಕಿಡಿಕಾರಿದರು.

ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಭಾರತಿ ಶೆಟ್ಟಿ ಇತರರು ಇದ್ದರು.

ಸಾಲ ತೀರಿಸಲು ಸಾಲ ಮಾಡುವ ಸ್ಥಿತಿಗೆ ತಂದ ಸಿದ್ದು

ರಾಜ್ಯದ ಆದಾಯ ಕುಸಿದಿದ್ದು, ತೆರಿಗೆ ಸಂಗ್ರಹ ಕಡಿಮೆಯಾಗಿದ್ದರೂ ಬಜೆಟ್ ಗಾತ್ರ ಮಾತ್ರ ಬಹು ದೊಡ್ಡದಾಗಿದ್ದು, ಹಣವನ್ನು ಎಲ್ಲಿಂದ ತರುತ್ತೀರಿ? ಸಾಲ ತೀರಿಸಲು ಮತ್ತೆ ಸಾಲ ಮಾಡುವ ಸ್ಥಿತಿಗೆ ರಾಜ್ಯವನ್ನು ತಂದು ನಿಲ್ಲಿಸಿದ್ದೀರಿ ಎಂದು ಆರ್.ಅಶೋಕ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಸಾಲದ ರಾಮಯ್ಯ ಅಂತಾ ನಾನು ಹೇಳಿದ್ದಕ್ಕೆ ಅಭಿವೃದ್ಧಿಗಾಗಿ ಸಾಲ ಮಾಡಿದ್ದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಅದು ಹಸಿ ಹಸಿ ಸುಳ್ಳು. ರಾಜ್ಯ ಸರ್ಕಾರದ್ದು ಕೊರತೆಯ ಬಜೆಟ್ ಆಗಿದ್ದು, ಬಿಜೆಪಿ ಕಾಲದ್ದು ಮಿಗತೆ ಬಜೆಟ್ ಆಗಿತ್ತು ಎಂದರು.

ಕಾಂಗ್ರೆಸ್ಸಿನವರೇ ಅಧಿಕಾರದಲ್ಲಿದ್ದರೂ ಸರ್ಕಾರಿ ವೈದ್ಯಕೀಯ ಕಾಲೇಜನ್ನು ದಾವಣಗೆರೆಗೆ ಯಾಕೆ ತರಲಿಲ್ಲ? ಒಂದೇ ಕುಟುಂಬ ಪ್ರತಿನಿಧಿಸುತ್ತಿದ್ದು, ಇಲ್ಲಿಗೆ ಅನ್ಯಾಯ ಮಾಡಿದ್ದಾರೆ. ಇಲ್ಲಿಗೆ ವೈದ್ಯಕೀಯ ಕಾಲೇಜು ತಪ್ಪಲು ಕಾಂಗ್ರೆಸ್ ಕಾರಣ. ಈಗ ಬಂದು ಮತ ಕೇಳುತ್ತಿದ್ದಾರೆ. ಜಿಲ್ಲಾಧಿಕಾರಿ, ಆರ್‌ಟಿಓ ಕಚೇರಿ ಬಂದಿದ್ದೇ ಸಿದ್ದೇಶ್ವರ ಕಾಲದಲ್ಲಿ. ಸ್ಮಾರ್ಟ್ ಸಿಟಿಗೆ ಹಣ ಬಂದಿದ್ದು ಬಿಜೆಪಿ ಆಳ್ವಿಕೆಯಲ್ಲಿ. 108 ಪಾರ್ಕ್ ಅಭಿವೃದ್ಧಿ ಕಂಡವು. ಕಾಂಗ್ರೆಸ್ ಬಂದ ಮೇಲೆ ದೇವಸ್ಥಾನದ ದೀಪ ಹಚ್ಚಬಾರದೆಂಬ ಪತ್ರಕ್ಕೆ ಸಹಿ ಮಾಡಿದ್ದಾರೆ. ಕಾಂಗ್ರೆಸ್ ಗೆದ್ದರೆ ಏನಾಗುತ್ತದೆಂಬುದನ್ನು ಮತದಾರರು ಅರಿಯಲಿ. ಈ ಸಲ ಬಿಜೆಪಿ ಗೆಲ್ಲಿಸಿ.

ಆರ್.ಅಶೋಕ ವಿಪಕ್ಷ ನಾಯಕ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚರ್ಚ್‌ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಸಮರ್ಥ್ ಶಾಮನೂರು
ಜನಪರ ಯೋಜನೆ ಜಾರಿಗೆ ತರುವಲ್ಲಿ ಕಾಂಗ್ರೆಸ್‌ ಸರ್ಕಾರ ಯಶಸ್ವಿ: ಡಾ.ಪ್ರಭಾ