ಸಾಗರ: ತಾಲೂಕಿನ ತಾಳಗುಪ್ಪ ಹೋಬಳಿಯ ಮರಹಾನ್ಕುಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಏಪ್ರಿಲ್ ೪ರಂದು ನಡೆಯಲಿದೆ. ಶಾಲಾಭಿವೃದ್ಧಿ ಸಮಿತಿ ಮತ್ತು ಶಾಲಾ ಶತಮಾನೋತ್ಸವ ಆಚರಣಾ ಸಮಿತಿ ಜಂಟಿಯಾಗಿ ಕಾರ್ಯಕ್ರಮದ ಯಶಸ್ಸಿಗೆ ಅಗತ್ಯ ಸಿದ್ಧತೆ ನಡೆಸಿದೆ.
ಮರಹಾನ್ಕುಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ೧೯೫೨ರಲ್ಲಿ ಹೊಸಳ್ಳಿ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಆರಂಭಗೊಂಡು ನಂತರ ಸರ್ಕಾರಿ ಕಟ್ಟಡಕ್ಕೆ ವರ್ಗಾವಣೆಯಾಗಿದೆ. ಇದೇ ಶಾಲೆಯ ಹಳೆಯ ವಿದ್ಯಾರ್ಥಿ ಹಾಲಿ ಅಮೇರಿಕಾ ವಾಸಿ ಗಿರಿ ಹೆಗಡೆ ಎಂಬುವವರು ಶಾಲೆಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದಾರೆ. ಅರುಣ್ ಗೋಟಗಾರ್ ಹಾಗೂ ಸ್ಥಳೀಯ ದಾನಿಗಳು, ಪೋಷಕರ ಸಹಕಾರದಿಂದ ಶಾಲೆಗೆ ಹೊಸ ಕಟ್ಟಡ ನಿರ್ಮಾಣವಾಗಿದೆ. ಗಿರಿ ಹೆಗಡೆ ಅವರು ಪ್ರತಿವರ್ಷ ಅತಿಥಿ ಶಿಕ್ಷಕರ ವ್ಯವಸ್ಥೆ, ಮಕ್ಕಳಿಗೆ ಪುಸ್ತಕ, ಬ್ಯಾಗ್ ಸಮವಸ್ತ್ರ ನೀಡುವ ಮೂಲಕ ಶೈಕ್ಷಣಿಕ ಮೂಲಭೂತ ಅವಶ್ಯಕತೆ ಈಡೇರಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದಾರೆ. ಶಾಲೆಯ ಹಿಂಭಾಗದಲ್ಲಿ ಅರಣ್ಯ ಬೆಳೆಸಿ ಪರಿಸರ ಪ್ರೇಮವನ್ನು ಮೆರೆಯಲಾಗಿದೆ. ಶಾಲಾ ಶತಮಾನೋತ್ಸವ ಕಾರ್ಯಕ್ರಮಕ್ಕೆ ಸರ್ವರೂ ಪಾಲ್ಗೊಳ್ಳಲು ಮುಖ್ಯ ಶಿಕ್ಷಕ ಮುಕುಂದ ಸಿ. ನಾಯ್ಕ್, ಸಹ ಶಿಕ್ಷಕ ಮೂರ್ತಿ ಎಂ.ವೈ. ಮನವಿ ಮಾಡಿದ್ದಾರೆ.