ದಾಬಸ್‍ಪೇಟೆ: ಸೋಂಪುರ ಹೋಬಳಿಯ ಬೆಣ್ಣೆಗೆರೆ ಡೇರಿ ಆಡಳಿತ ಮಂಡಳಿ ರದ್ದಾಗಿದ್ದರೂ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿ ಅವ್ಯವಹಾರ ನಡೆದಿದ್ದು, ಸೂಕ್ತ ತನಿಖೆಯಾಗಬೇಕೆಂದು ರೈತರು ಹಾಗೂ ಡೇರಿ ಮಾಜಿ ಆಡಳಿತ ಮಂಡಳಿ ನಿರ್ದೇಶಕರ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತ ತಲುಪಿದ ಘಟನೆ ನಡೆದಿದೆ
ದಾಬಸ್‍ಪೇಟೆ: ಸೋಂಪುರ ಹೋಬಳಿಯ ಬೆಣ್ಣೆಗೆರೆ ಡೇರಿ ಆಡಳಿತ ಮಂಡಳಿ ರದ್ದಾಗಿದ್ದರೂ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿ ಅವ್ಯವಹಾರ ನಡೆದಿದ್ದು, ಸೂಕ್ತ ತನಿಖೆಯಾಗಬೇಕೆಂದು ರೈತರು ಹಾಗೂ ಡೇರಿ ಮಾಜಿ ಆಡಳಿತ ಮಂಡಳಿ ನಿರ್ದೇಶಕರ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತ ತಲುಪಿದ ಘಟನೆ ನಡೆದಿದೆ.
ಕೋರ್ಟ್ ಮೆಟ್ಟಿಲೇರಿದ್ದೇವೆ: ಡೇರಿ ಸೂಪರ್ ಸೀಡ್ ಆಗಿದ್ದರೂ ಹಾಲಿನ ಹಣ ಡೇರಿ ಕಟ್ಟಡ ಕಾಮಗಾರಿಗೆ ಬಳಸಿ ಬಿಲ್ ಪಾವತಿಸದೆ ರೈತರಿಗೆ ಮೋಸ ಮಾಡಿದ್ದಾರೆ. ಅಧಿಕಾರವಿಲ್ಲದಿದ್ದರೂ ಡೇರಿ ಮಾಜಿ ಕಾರ್ಯದರ್ಶಿ ಉಮಾದೇವಿ ಮತ್ತು ಮಾಜಿ ಅಧ್ಯಕ್ಷೆ ಪ್ರೇಮಲತಾ ಸಹಿ ಹಾಕಿ ಚೆಕ್ ಮೂಲಕ ಲಕ್ಷಾಂತರ ರುಪಾಯಿ ಹಣ ಡ್ರಾ ಮಾಡಿದ್ದಾರೆ. 10.93 ಲಕ್ಷ ರುಪಾಯಿ ಹಾಲಿನ ಹಣ ಗುತ್ತಿಗೆದಾರನಿಗೆ ನೀಡಿ ನಮಗೆ ಮೋಸ ಮಾಡಿದ್ದಾರೆಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯದರ್ಶಿಯ ಲೋಪ:
ಸಂಘಕ್ಕೆ ವಿಶೇಷ ಅಧಿಕಾರಿ ನೇಮಕವಾದ ಬಳಿಕ ಸಂಘದ ನಡಾವಳಿ ಜೊತೆಗೆ ವಿಶೇಷ ಅಧಿಕಾರಿಯ ಸೈಸಿಮನ್ ಸಿಗ್ನೇಚರ್ ಪ್ರತಿಯನ್ನು ಬ್ಯಾಂಕಿಗೆ ಕೊಡುವಂತೆ ಸಂಘದ ಕಾರ್ಯದರ್ಶಿಗೆ ನೀಡಲಾಗಿತ್ತು. ಸಂಘದ ಕಾರ್ಯದರ್ಶಿ ಹಣ ಡ್ರಾ ಮಾಡಿಕೊಳ್ಳುವವರೆಗೂ ಬ್ಯಾಂಕಿಗೆ ಮಾಹಿತಿ ನೀಡದ ಕಾರಣ ಉಳಿತಾಯ ಖಾತೆಯಲ್ಲಿ ಅವ್ಯವಹಾರವಾಗಿದೆ. ಸಂಘದ ರೈತ ಸದಸ್ಯರಿಗೆ ಹಾಲಿನ ಬಿಲ್ ಪಾವತಿಸಲು ಹಣ ಇಲ್ಲದಂತಾಗಿದೆ ಎಂದು ಸದಸ್ಯರು ಆರೋಪಿಸಿದರು.
ಮಾಹಿತಿ ಇಲ್ಲದೆ ಡೇರಿ ಕಟ್ಟಡ ಉದ್ಘಾಟನೆ:
ಫೆ.25ರಂದು ಗ್ರಾಮಸ್ಥರಿಗಾಗಲಿ, ರೈತರಿಗಾಗಲಿ ಮಾಹಿತಿ ನೀಡದೆ ಪೊಲೀಸ್ ಬಂದೋಬಸ್ತ್ ನಲ್ಲಿ ಡೇರಿ ಕಟ್ಟಡವನ್ನು ಉದ್ಘಾಟಿಸಿರುವುದು ನಮಗೆ ಬೇಸರವಾಗಿದೆ. ನಾವು ಕಷ್ಟಪಟ್ಟು ಹಸು ಸಾಕಿ ಹಾಲು ತಂದು ಹಾಕಿದರೆ ಇವರು ಮಾಹಿತಿ ನೀಡದೆ ಈ ರೀತಿ ಕಟ್ಟಡ ಉದ್ಘಾಟಿಸುವುದು ಸರಿಯೇ ಎಂದು ಪ್ರಶ್ನಿಸಿದರು.
ಅಧಿಕಾರಿಗಳ ವಿರುದ್ಧ ಆಕ್ರೋಶ:
ಡೇರಿ ಅವ್ಯವಹಾರ ವಿಚಾರದಲ್ಲಿ ಹಲವು ಬಾರಿ ಬಮೂಲ್ ಅಧಿಕಾರಿಗಳ ಗಮನಕ್ಕೆ ತಂದು ಮನವಿ ಪತ್ರ ನೀಡಿದರೂ ಕ್ರಮ ವಹಿಸದೇ ಆಡಳಿತ ಮಂಡಳಿ ಪರವೇ ಮಾತನಾಡುತ್ತಿದ್ದಾರೆಂದು ಬಮೂಲ್ ಅಧಿಕಾರಿ ವರ್ಗದ ವಿರುದ್ಧವೂ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ದೂರು ಸ್ವೀಕರಿಸಲ್ಲ:
ಡೇರಿ ಸೂಪರ್ ಸೀಡ್ ಆಗಿದೆ ಹಾಗೂ ಅನಧಿಕೃತವಾಗಿ ಮಾಹಿತಿ ಇಲ್ಲದೇ ಡೇರಿ ಉದ್ಘಾಟನೆಯಾಗಿದೆ. ಡೇರಿಯಲ್ಲಿ ಅವ್ಯವಹಾರ ಆಗಿದೆ, ರೈತರಿಗೆ ಹಾಲಿನ ಬಿಲ್ ನೀಡದೆ ಮೋಸ ಮಾಡುತ್ತಿದ್ದಾರೆಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಪೊಲೀಸರು ಗ್ರಾಮಸ್ಥರ ದೂರು ಸ್ವೀಕರಿಸದೇ ವಾಪಸ್ಸು ಕಳಿಸಿದರು ಎಂದು ರೈತರು ಅಸಮಾಧಾನ ಹೊರಹಾಕಿದರು.
ರೈತರು ಹಾಗೂ ನಿರ್ದೇಶಕರ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸಿದರು. ತಕ್ಷಣ ದಾಬಸ್‍ಪೇಟೆ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಪೋಟೋ 4 :
ಬೆಣ್ಣೆಗೆರೆ ಗ್ರಾಮದಲ್ಲಿ ಡೇರಿ ವಿಷಯದಲ್ಲಿ ರೈತರು ಹಾಗೂ ನಿರ್ದೇಶಕರ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುತ್ತಿರುವುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.