ಯಲ್ಲಾಪುರ: ಕನ್ನಡವನ್ನು ಹೃದಯದ ಭಾಷೆಯಾಗಿ ಪ್ರೀತಿಸಬೇಕು, ಬೆಳೆಸಬೇಕು. ಆದರೆ ಉಳಿದ ಭಾಷೆಯನ್ನು ದ್ವೇಷಿಸಬಾರದು ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.ನ. ೧೪ರಂದು ತಾಲೂಕಿನ ಕಿರವತ್ತಿಯ ಗ್ರಾಪಂ ಸಭಾಭವನದಲ್ಲಿ ಜಯಭಾರತ ಸಂಘಟನೆಯ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕನ್ನಡ ಬಗೆಗಿನ ಅಭಿಮಾನ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೇ, ನಿರಂತರವಾಗಿ ಕನ್ನಡ, ನೆಲ, ಪ್ರೀತಿಸುವ, ಅವುಗಳಿಗೆ ಧಕ್ಕೆಯಾದರೆ ಸಿಡಿದೇಳುವ ಪ್ರವೃತ್ತಿ ನಮ್ಮದಾಗಬೇಕು ಎಂದರು.ಕೆಡಿಸಿಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಜಫ್ರುಲ್ಲಾಖಾನ್ ಪಠಾಣ ಮಾತನಾಡಿ, ಸಂಘಟನೆಯಲ್ಲಿ ಏಕತೆ ಇರಬೇಕು. ಎಲ್ಲರೂ ಕೂಡಿ ನಾಡು, ನುಡಿ ಕಟ್ಟಬೇಕು. ರಾಜಕೀಯದಲ್ಲಿ ಧರ್ಮ ರಾಜಕೀಯ ಬೆರೆಸಬಾರದು. ಜಯಭಾರತ ಸಂಘಟನೆ ಎಲ್ಲ ಧರ್ಮದವರನ್ನೂ ಒಗ್ಗೂಡಿಸುವ ಪ್ರಯತ್ನ ಮಾಡುತ್ತಿರುವುದು ಮಾದರಿಯಾಗಿದೆ ಎಂದರು.
ಅಂಕೋಲಾ: ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಪಿಎಂ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಗೋಖಲೆ ಸೆಂಟಿನರಿ(ಜಿಸಿ) ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಪ್ರಥಮ ಪಿಯು ವಿಭಾಗದಲ್ಲಿ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಸಮಯಾ ನಾಯಕ ಪ್ರಥಮ, ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ನಾಗವೇಣಿ ಕುರ್ಲೆ ಪ್ರಥಮ, ಚಿತ್ರಕಲೆಯಲ್ಲಿ ಪ್ರೀತಮ್ ನಾಯ್ಕ ಪ್ರಥಮ, ಜಾನಪದ ಗೀತೆಯಲ್ಲಿ ಸೌಂದರ್ಯ ರಾಯ್ಕರ್ ಪ್ರಥಮ, ಭಾವಗೀತೆಯಲ್ಲಿ ವಿನಂತಿ ನಾಯ್ಕ ಪ್ರಥಮ, ಏಕಪಾತ್ರಾಭಿನಯದಲ್ವಿ ಜಾಹ್ನವಿ ಮೋರೆ ಪ್ರಥಮ, ವಿಜ್ಞಾನ ಉಪನ್ಯಾಸದಲ್ಲಿ ಮಣಿಕಂಠ ರೇವಣಕರ್ ದ್ವಿತೀಯ, ರಸಪ್ರಶ್ನೆ ಸ್ಪರ್ಧೆಯಲ್ಲಿ ರಕ್ಷಿತಾ ನಾಯರ್ ಮತ್ತು ಸಂಜನಾ ನಾಯಕ ದ್ವಿತೀಯ ಸ್ಥಾನ ಪಡೆದಿದ್ದಾರೆ.ಪಿಯು ದ್ವಿತೀಯ ವಿಭಾಗದಲ್ಲಿ ಇಂಗ್ಲಿಷ್ ವಿಜ್ಞಾನ ಉಪನ್ಯಾಸದಲ್ಲಿ ನೇಸರ ಕವರಿ ಪ್ರಥಮ, ಭಾವಗೀತೆಯಲ್ಲಿ ಯತೀಶ ನಾಯಕ ಪ್ರಥಮ, ಕನ್ನಡ ವಿಜ್ಞಾನ ಉಪನ್ಯಾಸದಲ್ಲಿ ದೀಕ್ಷಾ ಹರಿಕಂತ್ರ ಪ್ರಥಮ, ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ರಕ್ಷಾ ಹಾರವಾಡೇಕರ್ ದ್ವಿತೀಯ, ಚಿತ್ರಕಲೆಯಲ್ಲಿ ಪವಿತ್ರಾ ಗೌಡ ದ್ವಿತೀಯ, ಇಂಗ್ಲಿಷ್ ಪ್ರಬಂಧ ಸ್ಪರ್ಧೆಯಲ್ಲಿ ವೇದಾ ಬೆಳಸೆ ದ್ವಿತೀಯ, ರಸಪ್ರಶ್ನೆ ಸ್ಪರ್ಧೆಯಲ್ಲಿ ಅಭಿಲಾಷ ನಾಯ್ಕ ಮತ್ತು ಲಿಯಾಖತ್ ದ್ವಿತೀಯ ಹಾಗೂ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ದರ್ಶನ ನಾಯ್ಕ ತೃತೀಯ ಸ್ಥಾನ ಪಡೆದಿದ್ದಾರೆ.