11 ವರ್ಷಗಳ ಬಳಿಕ ‘ಕನ್ನಡ ಭವನಕ್ಕೆ’ ಉದ್ಘಾಟನೆ ಭಾಗ್ಯ

KannadaprabhaNewsNetwork | Published : May 22, 2025 12:52 AM
ಕನ್ನಡ ಭವನವು ಮಾಜಿ ಸಂಸದ ಡಾ.ಎಂ.ವೀರಪ್ಪ ಮೊಯ್ಲಿ ಅವರ ಕನಸು. ಮೊಯ್ಲಿ ಮತ್ತು ಈಗಿನ ಸಂಸದ ಹಾಗೂ ಅಂದಿನ ಶಾಸಕ ಡಾ.ಕೆ.ಸುಧಾಕರ್ ಅವರ ಅಧಿಕಾರಾವಧಿಯಲ್ಲಿ ನಗರದ ಬಿಬಿ ರಸ್ತೆಯ ಬಸಪ್ಪ ಚತ್ರ ಹಾಗೂ ಗರಡಿ ಮನೆ ಇದ್ದ ಜಾಗದ 2.4 ಎಕರೆ ವಿಸ್ತೀರ್ಣದಲ್ಲಿ ರಂಗಮಂದಿರ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಲಾಗಿತ್ತು
Follow Us

ದಯಾಸಾಗರ್‌ ಎನ್‌.

ಕನ್ನಡಪ್ರಭ ಚಿಕ್ಕಬಳ್ಳಾಪುರ

ಅಂತು ಇಂತೂ ಗಜ ಗರ್ಭ ಪ್ರಸವದಂತೆ 11 ವರ್ಷಗಳ ನಂತರ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ನಗರದಲ್ಲಿ ನಿರ್ಮಾಣಗೊಂಡ ಕನ್ನಡ ಭವನ ಉದ್ಘಾಟನೆಗೆ ಸಿದ್ಧವಾಗಿದ್ದು, ಮೇ 27 ರಂದು ಕನ್ನಡ ಸಾಹಿತ್ಯ ಸಮ್ಮೇಳನದ ಮೂಲಕ ಭವನ ಲೋಕಾರ್ಪಣೆಯಾಗಲಿದೆ.

ಈ ವರ್ಷ ಭವನದ ಕಾಮಗಾರಿ ಪೂರ್ಣವಾಗಿದ್ದು ಕಳೆದ ಏಪ್ರಿಲ್ 23 ರ ಅಮಾವಾಸ್ಯೆಯಂದು ಅಂತಿಮವಾಗಿ ಸುಸಜ್ಜಿತ ಭವನ ಉದ್ಘಾಟನೆಗೆ ಸಜ್ಜುಗೊಂಡಿತ್ತು. ಆದರೆ ಕ್ರೈಸ್ತ ಧರ್ಮಗುರು ಪೋಪ್ ಪ್ರಾನ್ಸಿಸ್ ನಿಧನ ಹೊಂದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶೋಕಾಚರಣೆ ಘೋಷಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಕನ್ನಡ ಭವನ ಲೋಕಾರ್ಪಣೆ ಕಾರ್ಯಕ್ರಮ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮಗಳನ್ನು ಮುಂದೂಡಲಾಗಿತ್ತು.

ಮೊಯ್ಲಿ, ಡಾ.ಕೆ.ಸುಧಾಕರ್‌ ಕನಸು

ಈಗ ಭವನದ ಉದ್ಘಾಟನೆ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮೇ 27 ರ ಅಮಾವಾಸ್ಯೆಯಂದೇ ಮತ್ತೆ ಲೋಕಾರ್ಪಣೆಗೆ ನಿರ್ಧರಿಸಲಾಗಿದೆ. ಆದರೆ ಆಸ್ತಿಕರು ಮತ್ತೆ ಏನಾದರೂ ಅಡೆ ತಡೆ ಬರಬಹುದೆಂಬ ಆತಂಕ ವ್ಯಕ್ತಪಡಿಸಿದ್ದಾರೆ. ಕನ್ನಡ ಭವನವು ಮಾಜಿ ಸಂಸದ ಡಾ.ಎಂ.ವೀರಪ್ಪ ಮೊಯ್ಲಿ ಅವರ ಕನಸು. ಮೊಯ್ಲಿ ಮತ್ತು ಈಗಿನ ಸಂಸದ ಹಾಗೂ ಅಂದಿನ ಶಾಸಕ ಡಾ.ಕೆ.ಸುಧಾಕರ್ ಅವರ ಅಧಿಕಾರಾವಧಿಯಲ್ಲಿ ನಗರದ ಬಿಬಿ ರಸ್ತೆಯ ಬಸಪ್ಪ ಚತ್ರ ಹಾಗೂ ಗರಡಿ ಮನೆ ಇದ್ದ ಜಾಗದ 2.4 ಎಕರೆ ವಿಸ್ತೀರ್ಣದಲ್ಲಿ ರಂಗಮಂದಿರ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಲಾಗಿತ್ತು.

2014ರಲ್ಲಿ ಆರಂಭಗೊಂಡ ಕಾಮಗಾರಿರಂಗಮಂದಿರ ಕಾಮಗಾರಿ 2014ರಲ್ಲಿ ಆರಂಭವಾಯಿತು. ಬಳಿಕ ಈ ಹೆಸರನ್ನು ಹದಲಾಯಿಸಿ ಕಲಾಭವನ ಹೆಸರಿಲ್ಲಿ ಒಂದು ಸಾವಿರ ಆಸನಗಳ ಸುಸಜ್ಜಿತ ಭವನ ನಿರ್ಮಿಸಲು ಚಾಲನೆ ನೀಡಲಾಯಿತು. ಒಟ್ಟು 12.5 ಕೋಟಿ ರು.ಗಳ ಕಾಮಗಾರಿಗೆ ಮಂಜೂರಾಯಿತು. ಮೊದಲ ಹಂತದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 1 ಕೋಟಿ ರು. ಮತ್ತು ಜಿಲ್ಲಾ ವಿಶೇಷ ಅಭಿವೃದ್ಧಿ ಯೋಜನೆಯಿಂದ 5 ಕೋಟಿ ರು.ಗಳನ್ನು ಬಿಡುಗಡೆ ಮಾಡಲಾಗಿತ್ತು. 2021ರ ಮಾರ್ಚ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮತ್ತೆ 1 ಕೋಟಿ ರು. ಬಿಡುಗಡೆ ಆಯಿತು.ಮೊದಲ ಹಂತದಲ್ಲಿ ಕಟ್ಟಡ ಕಾಮಗಾರಿಗಳು ಪೂರ್ಣವಾದವು. ಹವಾನಿಯಂತ್ರಿತ ವ್ಯವಸ್ಥೆ, ವಿದ್ಯುತ್, ಧ್ವನಿ ಮತ್ತು ಬೆಳಕು, ವೇದಿಕೆ ಇತ್ಯಾದಿ ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿತ್ತು. ಕರ್ನಾಟಕ ಗೃಹಮಂಡಳಿಗೆ ಕಾಮಗಾರಿಯ ಜವಾಬ್ದಾರಿವಹಿಸಲಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಳಿಸಲು ಜಿಲ್ಲಾ ವಿಶೇಷ ಅಭಿವೃದ್ಧಿ ಯೋಜನೆಯಿಂದ ಹಣ ಪೂರ್ಣವಾಗಿ ಬಿಡುಗಡೆ ಆಗಲಿಲ್ಲ. ಈ ಕಾರಣದಿಂದ ಕಲಾಭವನದ ಕಾಮಗಾರಿ ಕೆಲವು ದಿನಗಳ ಕಾಲ ಸ್ಥಗಿತವಾಯಿತು. ಹೆಚ್ಚುವರಿ ₹6 ಕೋಟಿಗೆ ಬೇಡಿಕೆ

ಮತ್ತೆ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು ರೂ 6.5 ಕೋಟಿ ಅಗತ್ಯವಿದೆ. 2ನೇ ಹಂತದ ಕಾಮಗಾರಿಯಲ್ಲಿ ಕಲ್ಯಾಣಿ ಅಭಿವೃದ್ಧಿ, ಕಾಂಪೌಂಡ್ ಕಾಮಗಾರಿಗೆ ರೂ 3.05 ಕೋಟಿ ಸೇರಿದಂತೆ ಒಟ್ಟು ರೂ 9.55 ಕೋಟಿ ಅನುದಾನ ಅವಶ್ಯವಾಗಿದೆ ಎಂದು ಷರಾ ಬರೆಯಲಾಯಿತು. ಆದರೆ ಹಣ ಬಿಡುಗಡೆ ಆಗಲಿಲ್ಲ. ಹೀಗಾಗಿ ಕಾಮಗಾರಿ ಸ್ಥಗಿತಗೊಂಡಿತ್ತು. ಬಳಿಕ ಸರ್ಕಾರದ ಸೂಚನೆಯಂತೆ ಕನ್ನಡಭವನ ಎಂದು ನಾಮಕರಣ ಮಾಡಿ ಅನುದಾನ ಬಿಡುಗಡೆ ಮಾಡಲಾಯಿತು.

27ರಂದು ಭವನ ಉದ್ಘಾಟನೆ

ನಂತರ 2023 ರಲ್ಲಿ ಇಂದಿನ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಕನ್ನಡ ಭವನ ಉದ್ಘಾಟನೆ ಮಾಡಲೇಬೇಕು ಎಂದು ಪಣತೊಟ್ಟು, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಿಯವರಿಂದ ಅನುದಾನ ತಂದು ಕಾಮಗಾರಿಗೆ ವೇಗ ನೀಡಿದರು. ಅಲ್ಲದೆ ಕನ್ನಡ ಭವನದಲ್ಲೆ 2024ರ ನವೆಂಬರ್ ಒಂದರಂದು ಅಲ್ಲಿಯೇ ಕನ್ನಡ ರಾಜ್ಯೋತ್ಸವ ಆಚರಿಸಬೇಕೆಂದು ಸದಾಶಯ ಹೊಂದಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಈಗ ಮೇ 27 ಕ್ಕೆ ಸರ್ವ ರೀತಿಯಲ್ಲಿಯೂ ಉ‌ದ್ಘಾಟನೆಗೆ ಸಜ್ಜಾಗಿದೆ.