23ಕ್ಕೆ ಕನ್ನಡ ಭವನ ಉದ್ಘಾಟನೆ, ಸಾಹಿತ್ಯ ಸಮ್ಮೇಳನ

KannadaprabhaNewsNetwork | Published : Apr 17, 2025 12:12 AM

ಸಾರಾಂಶ

ಚಿಕ್ಕಬಳ್ಳಾಪುರ ನಗರದ ಕನ್ನಡ ಭವನವನ್ನು 17.83 ಕೋಟಿ ರು.ಗಳ ವೆಚ್ಚದಲ್ಲಿ ಕರ್ನಾಟಕ ಗೃಹಮಂಡಳಿ ವತಿಯಿಂದ ನಿರ್ಮಾಣ ಮಾಡಲಾಗಿದೆ. ಭವನ ನಿರ್ಮಣ ಮಾಡುವ ಸಂದರ್ಭದಲ್ಲಿ ಹಣದ ಕೊರತೆ ಎದುರಾದಾಗ ಜಿಲ್ಲಾ ಉಸ್ತುವಾರಿ ಸಚಿವರು ಹೆಚ್ಚುವರಿ ಅನುದಾನ ತರಲು ಶ್ರಮಿಸಿದ ಫಲವಾಗಿ ಪ್ರಸ್ತುತ ಉದ್ಘಾಟನೆ ಮಾಡಲು ಸಾಧ್ಯವಾಗಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಕನ್ನಡ ಭವನವನ್ನು ಏ. 23 ರಂದು ಲೋಕಾರ್ಪಣೆ ಮಾಡಲಾಗುವುದು. ಜೊತೆಗೆ ಏ. 23 ಮತ್ತು 24 ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕನ್ನಡ ಭವನದಲ್ಲೇ ಸಂಭ್ರಮದಿಂದ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಪಿ.ಎನ್‌. ರವೀಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದರು. ಬುಧವಾರ ಜಿಲ್ಲಾಡಳಿತ ಭವನದ, ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಕನ್ನಡ ಭವನ ಉದ್ಘಾಟನಾ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ₹ 17.83 ಕೋಟಿ ವೆಚ್ಚದಲ್ಲಿ ನಿರ್ಮಾಣ

ನಗರದ ಕನ್ನಡ ಭವನವನ್ನು 17.83 ಕೋಟಿ ರು.ಗಳ ವೆಚ್ಚದಲ್ಲಿ ಕರ್ನಾಟಕ ಗೃಹಮಂಡಳಿ ವತಿಯಿಂದ ನಿರ್ಮಾಣ ಮಾಡಲಾಗಿದೆ. ಭವನ ನಿರ್ಮಣ ಮಾಡುವ ಸಂದರ್ಭದಲ್ಲಿ ಹಣದ ಕೊರತೆ ಎದುರಾದಾಗ ಜಿಲ್ಲಾ ಉಸ್ತುವಾರಿ ಸಚಿವರು ಹೆಚ್ಚುವರಿ ಅನುದಾನ ತರಲು ಶ್ರಮಿಸಿದ ಫಲವಾಗಿ ಪ್ರಸ್ತುತ ಉದ್ಘಾಟನೆ ಮಾಡಲು ಸಾಧ್ಯವಾಗಿದೆ ಎಂದರು.

ಸಮ್ಮೇಳನವನ್ನು ಶಿಷ್ಟಾಚಾರದಂತೆ ಜಿಲ್ಲೆಯ ಜನಪ್ರತಿನಿಧಿಗಳಿಗೆ, ಗಣ್ಯ ವ್ಯಕ್ತಿಗಳಿಗೆ, ಹಿರಿಯ ಅಧಿಕಾರಿಗಳಿಗೆ, ಕನ್ನಡ ಪರ ಸಂಘಗಳು ಹಾಗೂ ಇತರೆ ಸರ್ಕಾರೇತರ ಸಂಘ, ಸಂಸ್ಥೆ ಗಳ ಸದಸ್ಯರು, ಪದಾಧಿಕಾರಿಗಳಿಗೆ, ಸಾರ್ವಜನಿಕರಿಗೆ ಆಹ್ವಾನ ನೀಡಬೇಕು ಆ ನಿಟ್ಟಿನಲ್ಲಿ ಅಧಿಕಾರಿಗಳು ನಿಗಾ ವಹಿಸಬೇಕು.ಎಲ್ಲಾ ಕನ್ನಡಪರ ಸಂಘಟನೆಗಳು, ಸಾರ್ವಜನಿಕ ರು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಈ ವೇಳೆ ಮನವಿ ಮಾಡಿದರು.

ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ

ಕಾರ್ಯಕ್ರಮದಂದು ಬೆಳಿಗ್ಗೆ 8.30 ಕ್ಕೆ ಕನ್ನಡ ಭವನ ಮುಂಭಾಗದಲ್ಲಿ ರಾಷ್ಟ್ರಧ್ವಜ, ನಾಡ ಧ್ವಜ, ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಗಳ ಧ್ವಜಾರೋಹಣ ಮಾಡಲು ತೀರ್ಮಾನಿಸಲಾಗಿದೆ. ರಾಷ್ಟ್ರಧ್ವಜವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಎಂ.ಸಿ ಸುಧಾಕರ್ ರವರು ಧ್ವಜಾರೋಹಣ ಮಾಡಲಿದ್ದಾರೆ, ನಾಡ ಧ್ವಜವನ್ನು ಶಾಸಕರಾದ ಪಿ.ಇ. ಪ್ರದೀಪ್ ಈಶ್ವರ್ ನೆರವೇರಿಸಲಿದ್ದಾರೆ ಹಾಗೂ ಪರಿಷತ್ತಿನ ಧ್ವಜವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ನೆರವೇರಿಸುತ್ತಾರೆ. ಮೆರವಣಿಗೆಯು 9.15 ಕ್ಕೆ ನಗರದ ಅಂಬೇಡ್ಕರ್ ಭವನದಿಂದ ಚಾಲನೆಗೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಕನ್ನಡದ ಜೈಕಾರ ಹಾಗೂ ಕಲಾತಂಡಗಳೊಂದಿಗೆ ಅದ್ದೂರಿ ಮೆರವಣಿಗೆ ನಡೆಯಲಿದೆ ,ಶಿಡ್ಲಘಟ್ಟ ವೃತ್ತದ ಮುಖಾಂತರ ಕನ್ನಡ ಭವನದ ವರೆಗೆ ಮೆರವಣಿಗೆ ನಡೆಸಲಾಗುವುದು, ನಗರದ ಎಲ್ಲಾ ಚಿತ್ರಮಂದಿರಗಳಲ್ಲಿ ಕಡ್ಡಾಯವಾಗಿ ಕನ್ನಡ ಸಿನಿಮಾ ಪ್ರದರ್ಶಿಸಲು ಸೂಚನೆ ನೀಡಲಾಗಿದೆ ಎಂದರು.

ಸರ್ಕಾರಿ ಕಟ್ಟಡಗಳಿಗೆ ದೀಪಾಲಂಕಾರ

ಸರ್ಕಾರಿ ಭವನಗಳಿಗೆ ಹಾಗೂ ಕಟ್ಟಡಗಳಿಗೆ ದೀಪಾಲಂಕಾರ ಮಾಡಬೇಕು. ಆರೋಗ್ಯ ಇಲಾಖೆ ವತಿಯಿಂದ ಆಂಬುಲೆನ್ಸ್ ಸೌಲಭ್ಯ, ಎಲ್ಲಾ ಅಂಗಡಿ ಮಳಿಗೆಗಳ ಮೇಲೆ ಕನ್ನಡ ಧ್ವಜರೋಹಣೆ ಆಗಬೇಕು. ನಗರವನ್ನು ಸ್ವಚ್ಛಗೊಳಿಸಲು ಹಾಗೂ ಫ್ಲೆಕ್ಸ್, ಬ್ಯಾನರ್ ಹಾಕಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಕುಡಿಯುವ ನೀರು ವಿತರಿಸಲು ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಲು ಅಧಿಕಾರಿಗಳಿಗೆ ತಿಳಿಸಿದರು. ಈ ಸಭೆಯಲ್ಲಿ ಜಿಪಂ ಸಿಇಒ ಪ್ರಕಾಶ್ ಜಿ.ಟಿ ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಕನ್ನಡ ಮತ್ತು ಸಂಸ್ಕೃತಿಯ ಸಹಾಯಕ ನಿರ್ದೇಶಕ ಡಿ.ಎಂ ರವಿಕುಮಾರ್, ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾ ಅಧ್ಯಕ್ಷ ಪ್ರೊ.ಕೊಡಿರಂಗಪ್ಪ, ಜಿಲ್ಲಾ ಕಾರ್ಯದರ್ಶಿ ಅಮೃತ್ ಕುಮಾರ್, ಕೋಶಾಧ್ಯಕ್ಷ ಮಲ್ಲಿಕಾರ್ಜುನ್, ಕಸಾಪ ತಾಲೂಕು ಅಧ್ಯಕ್ಷ ಯಲುವಳ್ಳಿ ಸೊಣ್ಣೆಗೌಡ, ಜಿಲ್ಲಾ ಜಂಟಿ ಕಾರ್ಯದರ್ಶಿ ಮಂಚನಬೆಲೆ ಶ್ರೀನಿವಾಸ್, ಕಾಸಪ ಸದಸ್ಯರು, ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Share this article