ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡ ಭವನ ಸಜ್ಜು: ವಿಜಯಕುಮಾರ ಪಾಟೀಲ ತೇಗಲತಿಪ್ಪಿ

KannadaprabhaNewsNetwork | Published : Jan 18, 2025 12:50 AM

ಸಾರಾಂಶ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದೇ 19 ರಂದು ನಗರದ ಕನ್ನಡ ಭವನದ ಆವರಣದಲ್ಲಿರುವ ಸಾಹಿತ್ಯ ಮಂಟಪದಲ್ಲಿ ಒಂದು ದಿನದ ಜಿಲ್ಲಾ ಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದರು. ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಜ.19ರಂದು ಜಿಲ್ಲಾ ಮಟ್ಟದ ಒಂದು ದಿನದ ಸಮ್ಮೇಳನ

ಕನ್ನಡಪ್ರಭ ವಾರ್ತೆ ಕಲಬುರಗಿ

ಮಹಿಳಾ ಸಾಹಿತಿಗಳ ಅಂತರಾಳದಿಂದ ಹೊರ ಹೊಮ್ಮುವ ಸಾಹಿತ್ಯಕ್ಕೆ ಪ್ರೋತ್ಸಾಹ ಕೊಟ್ಟು ಬೆಳೆಸಬೇಕೆಂಬ ಆಶಯದಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದೇ 19 ರಂದು ನಗರದ ಕನ್ನಡ ಭವನದ ಆವರಣದಲ್ಲಿರುವ ಸಾಹಿತ್ಯ ಮಂಟಪದಲ್ಲಿ ಒಂದು ದಿನದ ಜಿಲ್ಲಾ ಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಸಮ್ಮೇಳನದ ವಿವರ ನೀಡಿದ ತೇಗಲತಿಪ್ಪಿ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಜಿಲ್ಲೆಯ ಲೇಖಕಿಯರು ಮಹತ್ವದ ಕೊಡುಗೆ ನೀಡಿದ್ದು, ಜಿಲ್ಲೆಯ ಮಹಿಳಾ ಲೇಖಕರಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದರೆ ಒಂದು ಮಹಿಳಾ ಸಾಹಿತ್ಯ ಪ್ರಪಂಚ ಸೃಷ್ಠಿಸಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.

ಕನ್ನಡ ಸಾಹಿತ್ಯಕ್ಕೆ ಉತ್ತಮ ಕೃತಿಗಳನ್ನು ಕೊಟ್ಟಿರುವ ಸರ್ಕಾರಿ ಮಹಾವಿದ್ಯಾಲಯದ ಪ್ರಾಧ್ಯಾಪಕಿ-ಹಿರಿಯ ಲೇಖಕಿ ಡಾ.ಶಾರದಾದೇವಿ ಜಾಧವ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಡಾ.ಜಾಧವ ಅವರ ಸಾರಥ್ಯವಹಿಸಲಿದ್ದಾರೆ. ಅಂದು ಬೆಳಿಗ್ಗೆ 9.15 ಕ್ಕೆ ನಗರದ ಮಿನಿ ವಿಧಾನ ಸೌಧದಿಂದ ಕನ್ನಡ ಭವನದ ವರೆಗೆ ವಿವಿಧ ಕಲಾ ಮೇಳಗಳೊಂದಿಗೆ ಸಮ್ಮೇಳನಾಧ್ಯಕ್ಷರ ಸಾಂಸ್ಕೃತಿಕ ಮೆರವಣಿಗೆ ಜರುಗಲಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ ಚಾಲನೆ ನೀಡಲಿದ್ದು, ಪರಿಷತ್ತಿನ ಮಹಿಳಾ ಪ್ರತಿನಿಧಿಗಳಾದ ಶಕುಂತಲಾ ಪಾಟೀಲ ಜಾವಳಿ, ಜ್ಯೋತಿ ಕೋಟನೂರ, ಶಿಲ್ಪಾ ಜೋಶಿ, ವಿಶಾಲಾಕ್ಷಿ ಮಾಯಣ್ಣವರ್ ನೇತೃತ್ವ ವಹಿಸಲಿದ್ದಾರೆ ಎಂದು ಹೇಳಿದರು.

ಲಿಂಗೈಕ್ಯ ಶರಣೆ ಶಕುಂತಲಾ ಬಸವರಾಜ ಭೀಮಳ್ಳಿ ವೇದಿಕೆಯಡಿಯಲ್ಲಿ ಬೆಳಿಗ್ಗೆ 10.45 ಕ್ಕೆ ನಡೆಯುವ ಉದ್ಘಾಟನಾ ಸಮಾರಂಭಕ್ಕೆ ನಾಡಿನ ಹಿರಿಯ ಸಾಹಿತಿ ಡಾ. ಸರಸ್ವತಿ ಚಿಮ್ಮಲಗಿ ಚಾಲನೆ ಕೊಡಲಿದ್ದು, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಸಮ್ಮೇಳನದ ಸ್ಮರಣ ಸಂಚಿಕೆಯ ಮುಖಪುಟ ಅನಾವರಣಗೊಳಿಸಲಿದ್ದಾರೆ ಎಂದು ತಿಳಿಸಿದರು.

ಮಧ್ಯಾಹ್ನ 12.30ಕ್ಕೆ ನಡೆಯುವ ವರ್ತಮಾನದೊಂದಿಗೆ ಮುಖಾಮುಖಿ ಗೋಷ್ಠಿಯಲ್ಲಿ ಜಿಲ್ಲೆಯ ಮಹಿಳಾ ಸಾಹಿತ್ಯದ ಕುರಿತು ಡಾ.ಶೈಲಜಾ ಕೊಪ್ಪರ, ಮಹಿಳಾ ಅಸ್ಮಿತೆ ಯ ಕುರಿತು ಡಾ.ಇಂದುಮತಿ ಪಾಟೀಲ, ಸಮ್ಮೇಳನಾಧ್ಯಕ್ಷರ ಬದುಕು ಬರಹದ ಕುರಿತು ಡಾ. ಶಾಮಲಾ ಎಸ್ ಸ್ವಾಮಿ ಮಾತನಾಡಲಿದ್ದು, ಡಾ.ಅಮೃತಾ ಕಟಕೆ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಸವಿತಾ ಸಿರಗೋಜಿ ಆಶಯ ನುಡಿಗಳನ್ನಾಡುವರು. ಡಾ.ನೀಲಾಂಬಿಕಾ ಪೊಲೀಸ್ ಪಾಟೀಲ, ಸೇವಂತಾ ಚವ್ಹಾಣ, ಆರತಿ ಕಡಗಂಚಿ ಸೇಡಮ್, ಪೂರ್ಣಿಮಾ ಜಾನೆ ಉಪಸ್ಥಿತರಿರುವರು. ಮಧ್ಯಾಹ್ನ 2.15 ಕ್ಕೆ ಮಹಿಳಾ ಕವಿಗೋಷ್ಠಿ ನಡೆಯಲಿದ್ದು, ಡಾ. ಶ್ರೀಶೈಲ್ ನಾಗರಾಳ ಅಧ್ಯಕ್ಷತೆ ವಹಿಸಲಿದ್ದು, ಉಷಾ ಗೊಬ್ಬೂರ ಆಶಯ ನುಡಿಗಳನ್ನಾಡಲಿದ್ದಾರೆ ಎಂದರು.

ಕವಿಗಳಾದ ಶಾಂತಾ ಪಸ್ತಾಪೂರ, ಡಾ. ರೇಣುಕಾ ಹಾಗರಗುಂಡಗಿ, ಕವಿತಾ ಹಳ್ಳಿ, ಶಿವಲೀಲಾ ಕಲಗುರ್ಕಿ, ಡಾ. ಸಂಗೀತಾ ಹಿರೇಮಠ, ಗಂಗಮ್ಮಾ ನಾಲವಾರ, ಜಯಶ್ರೀ ಚೌದ್ರಿ, ಲಕ್ಷ್ಮೀದೇವಿ ರತ್ನಾಗಿರಿ, ಶಿವಲೀಲಾ ಧನ್ನಾ, ಜ್ಯೋತಿಬೊಮ್ಮಾ, ಸುರೇಖಾ ಜೇವರ್ಗಿ, ರೇಣುಕಾ ಎನ್., ಜ್ಯೋತಿ ಲಿಂಗಂಪಲ್ಲಿ, ಮಂಜುಳಾ ಪಾಟೀಲ, ತ್ರಿವೇಣಿ ಎಸ್.ಕೆ., ಸುನಂದಾ ಕಲ್ಲಾ ಸೇರಿ ಅನೇಕರು ಕವನ ವಾಚಿಸಲಿದ್ದಾರೆ.

ಸಂಜೆ 4.15 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ರಂಗಾಯಣದ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ ಸಮಾರೋಪ ನುಡಿಗಳನ್ನಾಡಲಿದ್ದು, ಹಿರಿಯ ಸಾಹಿತಿ ಡಾ. ನಾಗೇಂದ್ರ ಮಸೂತಿ ಅವರು ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ. ರಾವೂರಿನ ಸಚ್ಚಿದಾನಂದ ಪ್ರೌಢಶಾಲೆ, ಎಕೆಆರ್ ದೇವಿ ಪದವಿಪೂರ್ವ ಕಾಲೇಜು, ಉಪಳಾಂವದ ಶ್ರೀರಾಮ ಕನ್ನಡ ಕಾನ್ವೆಂಟ್ ಶಾಲೆ, ದೀನದಯಾಳ ಬಾಲಕಿಯರ ವಸತಿ ನಿಲಯ, ಮಹಾತ್ಮಾ ಕಾನ್ವೆಂಟ್‌ ಹಿರಿಯ ಪ್ರಾಥಮಿಕ ಶಾಲೆ, ಅಕ್ಕಮಹಾದೇವಿ ಶಾಲೆ, ಮಹಾತ್ಮಾ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಅನೇಕ ಶಾಲಾ ಮಕ್ಕಳಿಂದ ಗೀತೆ, ನೃತ್ಯ, ಕಿರು ರೂಪಕಗಳು ನಡೆಯಲಿವೆ ಎಂದು ಹೇಳಿದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ಶಿಲ್ಪಾ ಜೋಶಿ, ಜ್ಯೋತಿ ಕೋಟನೂರ, ರಾಜೇಂದ್ರ ಮಾಡಬೂಳ, ರವಿಕುಮಾರ ಶಹಾಪುರಕರ್, ಡಾ. ರೆಹಮಾನ್ ಪಟೇಲ್, ಹಣಮಂತಪ್ರಭು, ಗಣೇಶ ಚಿನ್ನಾಕಾರ ಇತರರು ಇದ್ದರು.

Share this article