೫ ಕೋಟಿ ರು. ವೆಚ್ಚದಲ್ಲಿ ಕನ್ನಡ ಭವನ ನಿರ್ಮಾಣ: ಚಲುವರಾಯಸ್ವಾಮಿ

KannadaprabhaNewsNetwork |  
Published : Nov 02, 2025, 02:15 AM IST

ಸಾರಾಂಶ

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಾನೂನು, ನ್ಯಾಯಾಂಗ, ರಂಗಭೂಮಿ, ಕಲೆ, ಸಾಹಿತ್ಯ, ಕ್ರೀಡೆ, ಕೃಷಿ, ಸಮಾಜ ಸೇವೆ, ಪತ್ರಿಕೋದ್ಯಮ ಮತ್ತು ಸಹಕಾರ ಕ್ಷೇತ್ರಗಳಲ್ಲಿ ಸಾಧನೆಗೈದ ಜಿಲ್ಲೆಯ ೩೩ ಸಾಧಕರಿಗೆ ೨೦೨೫ನೇ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯದಲ್ಲಿ ಯಶಸ್ವಿಯಾಗಿ ನಡೆದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ೫ ಕೋಟಿ ರು. ವೆಚ್ಚದಲ್ಲಿ ಕನ್ನಡ ಭವನವನ್ನು ನಗರದ ಒಳಾಂಗಣ ಕ್ರೀಡಾಂಗಣದ ಪಕ್ಕದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ೭೦ನೇ ಕನ್ನಡ ರಾಜ್ಯೋತ್ಸವ ಸಂದೇಶ ಭಾಷಣದಲ್ಲಿ ಮಾತನಾಡಿ, ‘ಹೆಸರಾಯಿತು ಕರ್ನಾಟಕ- ಉಸಿರಾಗಲಿ ಕನ್ನಡ’ ಎಂಬ ಹೆಸರಿನಲ್ಲಿ ಇಡೀ ವರ್ಷ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು- ನುಡಿಗೆ ಸಂಬಂಧಿಸಿದಂತೆ ಕನ್ನಡ ಭಾಷೆಯ ಬಗ್ಗೆ ಅರಿವು ಮೂಡಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ಆಡಳಿತದಲ್ಲಿ ಕನ್ನಡವನ್ನು ಅನುಷ್ಠಾನಗೊಳಿಸಲಾಗಿದ್ದು, ಜಿಲ್ಲೆಯ ಎಲ್ಲಾ ಅಂಗಡಿ- ಮುಂಗಟ್ಟುಗಳು ಕಡ್ಡಾಯವಾಗಿ ಕನ್ನಡ ನಾಮಫಲಕಗಳನ್ನು ಅಳವಡಿಸುವಂತೆ ಹಾಗೂ ಕಡ್ಡಾಯವಾಗಿ ಕನ್ನಡದಲ್ಲೇ ವ್ಯವಹರಿಸುವಂತೆ ಸೂಚಿಸಲಾಗಿದೆ ಎಂದರು.

ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ ಯೋಜನೆಯಡಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ರಸ್ತೆ, ನೈರ್ಮಲ್ಯ ಹಾಗೂ ಅಭಿವೃದ್ದಿ ಕಾಮಗಾರಿಗಳನ್ನು ೫೦ ಕೋಟಿ ರು.ಗಳಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ಜಿಲ್ಲೆಯಲ್ಲಿ ಜನರ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ರಾಜ್ಯದಲ್ಲಿಯೇ ಮೊದಲನೇ ಸ್ಥಾನ ಗಳಿಸಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ನಮ್ಮ ಜಿಲ್ಲೆಯಲ್ಲಿ ಒಟ್ಟು ೫,೦೪,೦೧೬ ಕುಟುಂಬಗಳ ಸಮೀಕ್ಷೆ ಕಾರ್ಯದ ಮೂಲಕ ಒಟ್ಟು ೧೮,೬೬,೩೫೦ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆ ಮಾಡುವ ಮುಖಾಂತರ ಸಮಗ್ರ ಅಂಕಿ- ಅಂಶಗಳನ್ನು ಸಂಗ್ರಹಿಸುವ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ ಎಂದು ನುಡಿದರು.

ಮಂಡ್ಯ ಜಿಲ್ಲೆ ಅತಿ ಹೆಚ್ಚು ಪ್ರವಾಸಿ ತಾಣಗಳನ್ನು ಹೊಂದಿದ್ದು, ೧೦೬ ತಾಣಗಳನ್ನು ಗುರುತಿಸಿ ಅಧಿಕೃತವಾಗಿ ಪ್ರವಾಸಿ ತಾಣಗಳೆಂದು ಘೋಷಿಸಿದೆ. ಜಿಲ್ಲೆಯ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸುತ್ತಿರುವುದಾಗಿ ಹೇಳಿದ ಅವರು, ಸರ್ಕಾರ ನೀರಾವರಿ ಹಾಗೂ ಕೃಷಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಮಂಡ್ಯ ತಾಲೂಕಿನ ಹೆಬ್ಬಕವಾಡಿ ನಾಲೆ ಮರುವಿನ್ಯಾಸ ಕಾಮಗಾರಿಗೆ ೨೮೬ ಕೋಟಿ ರು.ಗೆ ಅನುಮೋದನೆ ನೀಡಲಾಗಿದೆ. ಮದ್ದೂರು ತಾಲೂಕಿನ ಸೂಳೆಕೆರೆ ನಾಲೆ ಅಭಿವೃದ್ಧಿ, ಕೆರೆ ಅಭಿವೃದ್ಧಿ, ಕೆರೆ ಸಂರಕ್ಷಣೆ ಮತ್ತು ವೈದ್ಯನಾಥ ನಾಲೆ ಅಭಿವೃದ್ಧಿಗಾಗಿ ಒಟ್ಟು ೧೫೦ ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸಿಡಿಎಸ್ ನಾಲೆ ಅಭಿವೃದ್ಧಿಗಾಗಿ ೫೦ ಕೋಟಿ ರು. ಹಾಗೂ ವಿಶ್ವೇಶ್ವರಯ್ಯ ನಾಲೆ ಅಭಿವೃದ್ಧಿಗೆ ೧೨೦ ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.

ಕೃಷಿ ವಿಶ್ವವಿದ್ಯಾಲಯದ ಆಡಳಿತ ಭವನವನ್ನು ೭೦.೭೦ ಕೋಟಿ ರು. ವೆಚ್ಚದಲ್ಲಿ ಹಾಗೂ ಇತರೆ ಕಟ್ಟಡಗಳ ನಿರ್ಮಾಣವನ್ನು ೨೩.೨೫ ಕೋಟಿ ವೆಚ್ಚದಲ್ಲಿ ನಿರ್ಮಿಸಲು ಅನುಮೋದನೆ ನೀಡಲಾಗಿದೆ. ಒಟ್ಟಾರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಒತ್ತು ನೀಡಿದೆ ಎಂದು ತಿಳಿಸಿದರು.

ಪ್ರಶಸ್ತಿ ಪ್ರದಾನ:

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಾನೂನು, ನ್ಯಾಯಾಂಗ, ರಂಗಭೂಮಿ, ಕಲೆ, ಸಾಹಿತ್ಯ, ಕ್ರೀಡೆ, ಕೃಷಿ, ಸಮಾಜ ಸೇವೆ, ಪತ್ರಿಕೋದ್ಯಮ ಮತ್ತು ಸಹಕಾರ ಕ್ಷೇತ್ರಗಳಲ್ಲಿ ಸಾಧನೆಗೈದ ಜಿಲ್ಲೆಯ ೩೩ ಸಾಧಕರಿಗೆ ೨೦೨೫ನೇ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಾಸಕ ಪಿ.ರವಿಕುಮಾರ್, ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮಾಜಿ ಶಾಸಕರಾದ ಎಂ.ಶ್ರೀನಿವಾಸ್, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ದಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮೀ, ಮುಡಾ ಅಧ್ಯಕ್ಷ ನಯೀಂ ಇತರಿದ್ದರು.

ಪಥಸಂಚಲನದ ವಿಜೇತ ತಂಡಗಳು

ಕನ್ನಡ ರಾಜ್ಯೋತ್ಸವ ಪಥ ಸಂಚಲನದಲ್ಲಿ ಇಲಾಖಾ ತಂಡಗಳ ಪೈಕಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ-ಪ್ರಥಮ, ಅಗ್ನಿ ಶಾಮಕ ದಳ-ದ್ವಿತೀಯ ಹಾಗೂ ಗೃಹರಕ್ಷಕ ದಳ-ತೃತೀಯ ಸ್ಥಾನ ಪಡೆದಿವೆ.

ಎನ್‌ಸಿಸಿ ತಂಡಗಳಲ್ಲಿ ಅನಿಕೇತನ ಪ್ರೌಢಶಾಲೆ ಎನ್‌ಸಿಸಿ ತಂಡ- ಪ್ರಥಮ, ಮಂಡ್ಯ ವಿಶ್ವವಿದ್ಯಾಲಯ ಬಾಲಕರ ಎನ್‌ಸಿಸಿ ತಂಡ-ದ್ವಿತೀಯ ಮತ್ತು ಪಿಇಎಸ್ ಕಾಲೇಜು ಬಾಲಕಿಯರ ಎನ್‌ಸಿಸಿ ತಂಡ ತೃತೀಯ ಸ್ಥಾನ ಪಡೆದಿವೆ.

ಸ್ಕೌಟ್ಸ್ ಆ್ಯಂಡ್ ಗೈಡ್ಸ್ ತಂಡಗಳಲ್ಲಿ ಸೆಂಟ್ ಜೋಸೆಫ್ ಬಾಲಕಿಯರ ಪ್ರೌಢಶಾಲೆ (ಗೈಡ್ಸ್)- ಪ್ರಥಮ ಮತ್ತು ಲಕ್ಷ್ಮೀಜನಾರ್ದನ ಪ್ರೌಢಶಾಲೆ (ಗೈಡ್ಸ್) ದ್ವಿತೀಯ ಸ್ಥಾನ ಪಡೆದಿವೆ.

ಪ್ರೌಢಶಾಲಾ ವಿಭಾಗದಲ್ಲಿ ಸೆಂಟ್ ಜಾನ್ಸ್ ಪ್ರೌಢಶಾಲೆ ಬಾಲಕರ ತಂಡ- ಪ್ರಥಮ, ಕಾರ್ಮೆಲ್ ಕಾನ್ವೆಂಟ್ ಪ್ರೌಢಶಾಲೆ ಬಾಲಕಿಯರ ತಂಡ- ದ್ವಿತೀಯ, ಬಾಲಕಿಯರ ಆದರ್ಶ ಪ್ರೌಢಶಾಲೆ- ತೃತೀಯ ಮತ್ತು ಸೆಂಟ್ ಜೋಸೆಫ್ ಪ್ರೌಢಶಾಲೆಯ ಬಾಲಕಿಯರ ತಂಡ-ಸಮಾಧಾನಕರ ಬಹುಮಾನ ಪಡೆದಿವೆ.

ಪ್ರಾಥಮಿಕ ಶಾಲಾ ತಂಡಗಳಲ್ಲಿ ಅಭಿನವ ಭಾರತಿ ಶಾಲೆಯ ಬಾಲಕರು- ಪ್ರಥಮ, ವಿಮಲ ಶಾಲೆಯ ಬಾಲಕಿಯರು- ದ್ವಿತೀಯ. ಕಾರ್ಮೆಲ್ ಕಾನ್ವೆಂಟ್ ಇಂಗ್ಲಿಷ್ ಮಾಧ್ಯಮದ ಬಾಲಕಿಯರ ತಂಡ ತೃತೀಯ ಸ್ಥಾನ ಪಡೆದಿವೆ.

ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ:

ಎಪ್ಪತ್ತನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕಾರ್ಮೆಲ್ ಕಾನ್ವೆಂಟ್, ಸದ್ವಿದ್ಯಾ ಶಾಲೆ, ಅಭಿನವ ಭಾರತಿ ವಿದ್ಯಾಸಂಸ್ಥೆ ಸೇರಿದಂತೆ ವಿವಿಧ ಶಾಲೆಯ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಕನ್ನಡ ರೋಮಾಂಚನವೀ ಕನ್ನಡ, ಕರುನಾಡೇ ಕೈಚಾಚಿದೆ ನೋಡೆ, ಕನ್ನಡದ ಮಾತು ಚೆನ್ನ, ಕನ್ನಡ ಗಾಳಿಯು ಬೀಸುತ್ತಿದೆ ಇನ್ನಿತರ ಕನ್ನಡ ಗೀತ- ಗಾಯನಗಳಿಗೆ ಆಕರ್ಷಕವಾಗಿ ನೃತ್ಯ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

ನಾಡಗೀತೆ ಗಾಯನ:

ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ ನಾಡಗೀತೆಗೆ ನೂರು ವರ್ಷ ಪೂರೈಸಿರುವ ಸಂಭ್ರಮದಲ್ಲಿ ಜಿಲ್ಲೆಯ ೧೩೦೦ ವಿದ್ಯಾರ್ಥಿಗಳು ನಾಡಗೀತೆಗೆ ಕಂಠವಾದರು. ಜಿಲ್ಲಾಧಿಕಾರಿ ಡಾ.ಕುಮಾರ ಅವರ ಮಾರ್ಗದರ್ಶನದಲ್ಲಿ ಪ್ರತಿಭಾಂಜಲಿ ಡೇವಿಡ್ ಹಾಗೂ ಗಾಯಕ ಶ್ರೀಧರ್ ನೇತೃತ್ವದಲ್ಲಿ ನಾಡಗೀತೆ ಅದ್ಧೂರಿಯಾಗಿ ಮೂಡಿಬಂದು ಎಲ್ಲರನ್ನೂ ರಂಜಿಸಿತು.

PREV

Recommended Stories

ಪಾಳು ಬಿದ್ದ ರೈತ ಸಭಾ ಭವನ ಕಟ್ಟಡ
ಕೊಂಕಣಿ ನೆಲದಲ್ಲಿ ಕನ್ನಡದಲ್ಲಿ ಸಹಿ ಸಂಗ್ರಹ, ಕದಂಬ ವೃಕ್ಷ ಪೂಜಿಸಿ ರಾಜ್ಯೋತ್ಸವ ಆಚರಣೆ