- ಪಟ್ಟಣ ಹೊಯ್ಸಳ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ
ಕನ್ನಡಪ್ರಭ ವಾರ್ತೆ, ಮೂಡಿಗೆರೆನಿತ್ಯ ಕನ್ನಡ ಭಾಷೆ ಬಳಸುವ ಜತೆಗೆ ಭಾಷೆದ ಬಗ್ಗೆ ಅಭಿಮಾನ ಮೂಡಿಸಿಕೊಂಡಾಗ ಮಾತ್ರ ಕನ್ನಡ ಭಾಷೆ ಉಳಿಸಿ ಬೆಳೆಸಲು ಸಾಧ್ಯ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು. ಶನಿವಾರ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯಿಂದ ಪಟ್ಟಣ ಹೊಯ್ಸಳ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಹಿರಿಯರು ಸರಳ ಹಾಗೂ ಪ್ರೀತಿಯಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿಸಿಕೊಂಡು ಬಂದಿದ್ದಾರೆ. ಇದೇ ಮಾದರಿ ಅನುಸರಿಸಿ ಯುವ ಪೀಳಿಗೆಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಅಲ್ಲದೇ ಯುವ ಜನತೆ ಇಂದಿನ ತಂತ್ರಜ್ಞಾನ ಯುಗಕ್ಕೆ ಮಾರು ಹೋಗಿದ್ದಾರೆ. ಹಾಗಾಗಿ ವಾಟ್ಸ್‌ಆಪ್, ಫೇಸ್‌ಬುಕ್, ಇನ್ಸ್ಟಾಗ್ರಾಮ್‌ಗಳಲ್ಲಿ ಕನ್ನಡ ಭಾಷೆ, ನಾಡು, ನೆಲದ ಬಗ್ಗೆ ಜಾಗೃತಿ ಮೂಡಿಸುವಂತಹ ವಿಷಯವನ್ನು ಹೆಚ್ಚಾಗಿ ಅಳವಡಿಸುವ ಅವಶ್ಯಕತೆ ಇದೆ ಎಂದು ಹೇಳಿದರು.
ಪಟ್ಟಣದಲ್ಲಿ ಪ್ರತಿದಿನ ಕಸ ಸಂಗ್ರಹಿಸುವ ವಾಹನ ಮನೆ ಬಾಗಿಲಿಗೆ ಬಂದರೂ ಜನರು ತಮ್ಮ ಜವಾಬ್ದಾರಿ ಮರೆತು, ರಸ್ತೆ ಬದಿಯಲ್ಲಿ ಕಸ ಹಾಕುವ ಮೂಲಕ ಪಟ್ಟಣದ ಸ್ವಚ್ಛತೆ ಹಾಳು ಮಾಡುತ್ತಿದ್ದಾರೆ. ಜನರೇ ಈಡೇರಿಸಿಕೊಳ್ಳುವಂತಹ ಸಣ್ಣ ಪುಟ್ಟ ಸಮಸ್ಯೆಗಳನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾಡ ಬೇಕೆಂದು ತಮ್ಮ ಜವಾಬ್ದಾರಿ ಮರೆಯುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಮೂಡಿಗೆರೆ ಪಟ್ಟಣವನ್ನು ಪುರಸಭೆ ಮಾಡುವ ಮೂಲಕ ಸ್ಮಾರ್ಟ್ ಸಿಟಿಗೊಳಿಸಲು ಚಿಂತನೆ ನಡೆಸಲಾಗಿದೆ. ಆದರೆ, ಜನರು ಮೊದಲು ಸ್ಮಾರ್ಟ್ ಆಗಬೇಕಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಲೋಕವಳ್ಳಿ ಬಡಾವಣೆ ಜನರಿಗೆ ಇ-ಸ್ವತ್ತು ವಿತರಣೆ ಮಾಡಲಾಯಿತು. ರಾಷ್ಟ್ರಧ್ವಜಾರೋಹಣವನ್ನು ತಹಸೀಲ್ದಾರ್ ಎಸ್.ಅಶ್ವಿನಿ ನೆರವೇರಿಸಿದರು. ಮಾಜಿ ಸಚಿವೆ ಮೋಟಮ್ಮ, ಪ.ಪಂ. ಅಧ್ಯಕ್ಷ ಕೆ.ವೆಂಕಟೇಶ್, ಉಪಾಧ್ಯಕ್ಷ ರಮೇಶ್ ಹೊಸ್ಕೆರೆ, ಸದಸ್ಯರಾದ ಹಂಜಾ, ಮನೋಜ್, ಕಸಾಪ ಅಧ್ಯಕ್ಷ ಡಿ.ಕೆ.ಲಕ್ಷ್ಮಣ್‌ಗೌಡ, ಸಿಪಿಐ ಕೆ.ವಿ.ರಾಜಶೇಖರ್, ಬಿಇಒ ಎನ್.ಎ.ಮೀನಾಕ್ಷಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಸಂಘ ಸಂಸ್ಥೆ ಮುಖಂಡರು ಉಪಸ್ಥಿತರಿದ್ದರು.1ಮೂಡಿಗೆರೆ 1ಎಮೂಡಿಗೆರೆ ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕಿ ನಯನಾ ಮೋಟಮ್ಮ ಮಾತನಾಡಿದರು.