ಕಾಸರಗೋಡು ಹೆದ್ದಾರಿ ನಾಮಫಲಕಗಳಲ್ಲಿ ಕನ್ನಡ ಕಣ್ಮರೆ!

KannadaprabhaNewsNetwork |  
Published : Jun 12, 2025, 04:55 AM ISTUpdated : Jun 12, 2025, 10:50 AM IST
Kannada

ಸಾರಾಂಶ

ಗಡಿನಾಡು ಕೇರಳದ ಕಾಸರಗೋಡಿನಲ್ಲಿ ಕನ್ನಡ ಭಾಷೆಗೆ ಮತ್ತೆ ಏಟು ಬಿದ್ದಿದೆ. ಕಾಸರಗೋಡು ಜಿಲ್ಲೆಯನ್ನು ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳ ನಾಮಫಲಕಗಳಲ್ಲಿ ಕನ್ನಡ ಮಾಯವಾಗಿದೆ 

 ಮಂಗಳೂರು : ಗಡಿನಾಡು ಕೇರಳದ ಕಾಸರಗೋಡಿನಲ್ಲಿ ಕನ್ನಡ ಭಾಷೆಗೆ ಮತ್ತೆ ಏಟು ಬಿದ್ದಿದೆ. ಕಾಸರಗೋಡು ಜಿಲ್ಲೆಯನ್ನು ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳ ನಾಮಫಲಕಗಳಲ್ಲಿ ಕನ್ನಡ ಮಾಯವಾಗಿದೆ. ಕೇವಲ ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್‌ ಭಾಷೆ ರಾರಾಜಿಸುತ್ತಿದೆ. ಇದು ಕನ್ನಡ ಭಾಷಿಗರ ಸಿಟ್ಟಿಗೆ ಕಾರಣವಾಗಿದೆ. 

ಕೇಂದ್ರೀಯ ಭಾಷಾ ಅಲ್ಪಸಂಖ್ಯಾತ ನೀತಿಗೆ ಅನುಗುಣವಾಗಿ ಗಡಿನಾಡಿನಲ್ಲಿ ನಾಮಫಲಕದಲ್ಲಿ ಕನ್ನಡ ಭಾಷೆಗೆ ಸ್ಥಾನ ನೀಡುವಂತೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಿರುವನಂತಪುರಂ ವಿಭಾಗದ ಅಧಿಕಾರಿಗಳಿಗೆ ಪತ್ರ ಬರೆದು ಸೂಚಿಸಿದೆ. 

ಈಗಾಗಲೇ ಕಾಸರಗೋಡಿನಲ್ಲಿ ಕನ್ನಡ ಹೈಸ್ಕೂಲ್‌ ಹಾಗೂ ಅಂಗನವಾಡಿಗೆ ಮಲಯಾಳಿ ಭಾಷಿಕ ಶಿಕ್ಷಕಿಯ ನೇಮಕ, ಶಾಲಾ ಮುಖ್ಯಶಿಕ್ಷಕರ ನೇಮಕದಲ್ಲೂ ಮಲಯಾಳಿ ಭಾಷಿಕರಿಗೆ ಮಣೆ, ಸರ್ಕಾರಿ ಕಚೇರಿಗಳಲ್ಲಿ ಮಲಯಾಳಂ ಭಾಷೆಯಲ್ಲಿ ಕಡತ ವಿಲೇವಾರಿ, ಊರಿನ ಸ್ಥಳ ನಾಮಫಲಕದಲ್ಲೂ ಮಲಯಾಳಂ ವಿಜೃಂಭಣೆಯ ಬಗ್ಗೆ ಸಾಕಷ್ಟು ಆಕ್ಷೇಪ, ಪ್ರತಿಭಟನೆಗಳು ಕೇಳಿಬಂದಿವೆ. ಈ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಗಡಿ ಪ್ರಾಧಿಕಾರ ಆದೇಶ ನೀಡುವಂತೆಯೇ ಹೆದ್ದಾರಿ ಫಲಕಗಳಲ್ಲಿ ಕನ್ನಡ ಕಣ್ಮರೆಯಾಗಿರುವುದು ಸುದ್ದಿಯಲ್ಲಿದೆ. ಸ್ಥಳ ನಾಮದಲ್ಲಿ ಕನ್ನಡ ಕೊಕ್‌:

ಕಾಸರಗೋಡು ಜಿಲ್ಲೆಯ ಮೂಲಕ ಹಾದುಹೋಗುವ ತಲಪಾಡಿ-ತಿರುವನಂತಪುರಂ ಷಟ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೇ. 90ರಷ್ಟು ಮುಕ್ತಾಯಗೊಂಡು ವಾಹನ ಸಂಚಾರಕ್ಕೆ ತೆರೆದುಕೊಂಡಿದೆ. ಇದೇ ಡಿಸೆಂಬರ್‌ಗೆ ತಲಪಾಡಿ-ಚೆರ್ಕಳ ಮೊದಲ ಹಂತದ ಹೆದ್ದಾರಿ ಕಾಮಗಾರಿಯಲ್ಲಿ ಇಕ್ಕೆಲಗಳಲ್ಲಿ ಬೀದಿದೀಪ, ಸಿಗ್ನಲ್‌, ಸೈನ್‌ಬೋರ್ಡ್‌ಗಳ ಅಳವಡಿಕೆ ನಡೆಯುತ್ತಿದೆ. ಸೈನ್‌ಬೋರ್ಡ್‌ಗಳಲ್ಲಿ ಮೂರು ಭಾಷೆಗಳಲ್ಲಿ ಸ್ಥಳನಾಮ ಬರೆಯಲಾಗಿದೆ. ಆದರೆ ಕನ್ನಡ ಭಾಷೆಗೆ ಕೊಕ್‌ ನೀಡಲಾಗಿದೆ.

ನಾಮಫಲಕಗಳಲ್ಲಿ ಕೇವಲ ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಗೆ ಮಾತ್ರ ಅವಕಾಶ ನೀಡಲಾಗಿದೆ. ಹೆದ್ದಾರಿ ಅಭಿವೃದ್ಧಿಗೆ ಮುನ್ನ ಹಿಂದೆ ನಾಮಫಲಕದಲ್ಲಿ ಕನ್ನಡ ಭಾಷೆಗೂ ಸ್ಥಾನ ಇದ್ದುದನ್ನು ಹೋರಾಟಗಾರರು ನೆನಪಿಸುತ್ತಾರೆ. ಈಗ ನಾಮಫಲಕದಲ್ಲಿ ಕನ್ನಡ ಮರೆಯಾಗಿರುವ ಬಗ್ಗೆ ಪ್ರಾಧಿಕಾರ ಸದಸ್ಯ ಎ.ಆರ್‌.ಸುಬ್ಬಯ್ಯ ಕಟ್ಟೆ ಅವರು ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರ ಗಮನಕ್ಕೆ ತಂದಿದ್ದರು. ಬಳಿಕ ಪ್ರಾಧಿಕಾರ ಈ ಕುರಿತು ಎನ್‌ಎಚ್‌ಎಐಗೆ ಪತ್ರ ಬರೆದಿದೆ. ಅಲ್ಲದೆ ಪತ್ರದ ಪ್ರತಿಯನ್ನು ಭಾರತೀ ಭಾಷಾ ಅಲ್ಪಸಂಖ್ಯಾತ ಸಚಿವಾಲಯಕ್ಕೂ ರವಾನಿಸಿದೆ.

ಎನ್‌ಎಚ್‌ಎಐ ಕಾಸರಗೋಡು ವಿಭಾಗದ ಮುಖ್ಯ ಎಂಜಿನಿಯರ್‌ಗೆ ಪತ್ರ ಬರೆದಿರುವ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್‌ ಮತ್ತಿಹಳ್ಳಿ, ಶೇ.90ರಷ್ಟು ಕನ್ನಡ ಮಾತನಾಡುವ ಭಾಷಾ ಅಲ್ಪಸಂಖ್ಯಾತರಿಗೆ ಅವರ ದೈನಂದಿನ ವ್ಯವಹಾರದಲ್ಲಿ ಮತ್ತು ಸ್ಥಳೀಯ ಅಗತ್ಯಗಳಿಗಾಗಿ ಫಲಕಗಳು ಅನಕೂಲಕರವಾಗಿರಬೇಕು. ಕೇರಳದ ಕಾಸರಗೋಡಿನಲ್ಲಿ ವಾಸಿಸುತ್ತಿದ್ದರೂ ಮಲಯಾಳಂ ಭಾಷೆ ಅರ್ಥ ಮಾಡಿಕೊಳ್ಳಲು, ಓದಲು ಸಾಧ್ಯವಾಗದಿರಬಹುದು. ಆದ್ದರಿಂದ ಮಲಯಾಳಂ, ಹಿಂದಿ, ಇಂಗ್ಲಿಷ್‌ ಜೊತೆ ಕನ್ನಡವನ್ನೂ ನಾಮಫಲಕದಲ್ಲಿ ಸೇರಿಸಬೇಕು. ಸ್ಥಳನಾಮ ಬರೆಯುವಾಗ ಶುದ್ಧ ಕನ್ನಡ ಪದ ಬಳಸುವಂತೆ ಪತ್ರದಲ್ಲಿ ವಿನಂತಿಸಲಾಗಿದೆ.

PREV
Read more Articles on

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ