ಮಡಿಕೇರಿಯಲ್ಲಿ ಸಮರ್ಥ ಕನ್ನಡಿಗರು, ಚಂದ್ರಶೇಖರರಾವ್ ಸ್ಮಾರಕ ಟ್ರಸ್ಟ್ ನಿಂದ ಕನ್ನಡ ಹಬ್ಬ

KannadaprabhaNewsNetwork |  
Published : May 08, 2025, 12:39 AM IST
ಚಿತ್ರ : 5ಎಂಡಿಕೆ1 : ಎರಡು ಕೃತಿಗಳನ್ನು ಲೋಕಾರ್ಪಣೆ ಮಾಡಿದ ಸಂದರ್ಭ.  | Kannada Prabha

ಸಾರಾಂಶ

ಸಾಹಿತ್ಯ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳು. ಒಂದರ ಅಂತಃ ಸ್ವರೂಪ ಇನ್ನೊಂದರಲ್ಲಿ ವ್ತಕ್ಯವಾಗುವುದರಿಂದ ಒಂದು ಇನ್ನೊಂದಕ್ಕೆ ಪೂರಕವಾಗಿರುತ್ತದೆ ಎಂದು ಟಿ. ರಮೇಶ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸಾಹಿತ್ಯ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳು. ಒಂದರ ಅಂತಃಸ್ವರೂಪ ಇನ್ನೊಂದರಲ್ಲಿ ವ್ಯಕ್ತವಾಗುವುದರಿಂದ ಒಂದು ಇನ್ನೊಂದಕ್ಕೆ ಪೂರಕ ವಾಗಿರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಟಿ ಪಿ ರಮೇಶ್ ಹೇಳಿದ್ದಾರೆ.

ನಗರದ ರೆಡ್ ಬ್ರಿಕ್ಸ್ ಸಭಾಂಗಣದಲ್ಲಿ ನಡೆದ ಸಮರ್ಥ ಕನ್ನಡಿಗರು ಕೊಡಗು ಮತ್ತು ದಿ.ಚಂದ್ರಶೇಖರ ರಾವ್ ಮೆಮೋರಿಯಲ್ ಟ್ರಸ್ಟ್ ಜಂಟಿಯಾಗಿ ಆಯೋಜಿಸಿದ ಕನ್ನಡ ಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವದ ನಾನಾ ದೇಶಗಳಲ್ಲಿ ಭಾರತ ಇಂದು ವಿಜೃಂಭಿಸಲು ಪ್ರಮುಖ ಕಾರಣವೇ ನಮ್ಮ ಸಂಸ್ಕೃತಿಯಾಗಿದೆ. ಲಿಪಿಯ ಮೂಲಕ ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವ ಕಲೆಯನ್ನು ಮನುಷ್ಯ ರೂಢಿಸಿಕೊಂಡದ್ದು ಸಂಸ್ಕೃತಿಯ ವಿಕಾಸದಲ್ಲಿ ಬಹು ದೊಡ್ಡ ಹೆಜ್ಜೆಯಾಗಿದೆ. ನಮ್ಮ ಭಾಷೆ ಸಂಸ್ಕೃತಿ ಬೆಳೆಯಲು ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದೂ ಅವರು ಹೇಳಿದರು. ಈ ನಿಟ್ಟಿನಲ್ಲಿ ಕೊಡಗಿನ ಸಮರ್ಥ ಕನ್ನಡಿಗರು ಸಂಸ್ಥೆಯ ಮಹಿಳಾ ಮಣಿಗಳ ಕಾರ್ಯವನ್ನು ರಮೇಶ್ ಶ್ಲಾಘಿಸಿದರು.

ಬಾಂಧವ್ಯದ ಬೆಸುಗೆಗೊಂದು ಸಂಕೇತ: ಎರಡು ಕೃತಿಗಳನ್ನು ಲೋಕಾರ್ಪಣೆ ಮಾಡಿದ ಮಡಿಕೇರಿ ಆಕಾಶವಾಣಿಯ ಹಿರಿಯ ಉದ್ಘೋಷಕ ಸುಬ್ರಾಯ ಸಂಪಾಜೆ ಮಾತನಾಡಿ, ಕೊಡಗು ಮತ್ತು ಮುಂಬಯಿ ನಡುವಿನ ಬಾಂಧವ್ಯ ಬಹಳ ಹಳೆಯದು. ಅದಕ್ಕೆ ಕನ್ನಡದ ಮೊದಲ ಗ್ರಂಥ ಕವಿರಾಜಮಾರ್ಗದಲ್ಲೆ ಆಧಾರ ಇದೆ. ಈ ಕಾರ್ಯಕ್ರಮ ಬಾಂಧವ್ಯದ ಬೆಸುಗೆಗೊಂದು ಸಂಕೇತವಾಗಿದೆ ಎಂದರಲ್ಲದೇ, ದೇಶಸೇವೆ, ಸೈನಿಕ ಸೇವೆಯ ಜೊತೆಗೆ ಸಾಹಿತ್ಯ ರಂಗದಲ್ಲೂ ಕೊಡಗು ಉತ್ತಮ ಸಾಧನೆ ತೋರುತ್ತಿದೆ ಎಂದೂ ಶ್ಲಾಘಿಸಿದರು. ಹಿರಿಯ ಲೇಖಕ ಕಿಗ್ಗಾಲು ಗಿರೀಶ್ ಅವರ ಕೆಲವು ರಚನೆಗಳನ್ನು ಸುಬ್ರಾಯ ಸಂಪಾಜೆ ಗಮಕ ರೂಪದಲ್ಲಿ ಹಾಡಿದರು.

ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ,, ಕನ್ನಡಿಗರು ದೇಶದ ಯಾವುದೇ ಭಾಗದಲ್ಲಿದ್ದರೂ ಕನ್ನಡ ಭಾಷೆಗೆ ಅವರೆಲ್ಲರ ಬಾಂಧವ್ಯ ಬೆಸೆಯುವ ಶಕ್ತಿಯಿದೆ. ಭಾಷೆ ಎಂಬುದು ಭಾವನೆಗಳನ್ನು ಬೆಸೆಯುವ ಕೊಂಡಿಯಂತಿದೆ ಎಂದರಲ್ಲದೇ, ಮುಂಬೈನ ಕನ್ನಡ ಪರ ಸಂಸ್ಥೆಯೊಂದು ದೂರದ ಮಡಿಕೇರಿಯಲ್ಲಿ ಕನ್ನಡ ಹಬ್ಬಕ್ಕೆ ಸಹಯೋಗ ನೀಡಿರುವುದೇ ಈ ಬೆಸುಗೆಗೆ ಸಾಕ್ಷಿಯಾಗಿದೆ ಎಂದು ಶ್ಲಾಘಿಸಿದರು.

ಕೊಡಗಿಗೇ ಹೆಮ್ಮೆಯಾಗಿದೆ: ಮೂಲತ ಮಡಿಕೇರಿಯವರಾದ ಶ್ರೀದೇವಿ ಸಿ. ರಾವ್ ಅವರು ತನ್ನ ದಿ. ಪತಿ ಚಂದ್ರಶೇಖರ ರಾವ್ ಹೆಸರಲ್ಲಿ ಟ್ರಸ್ಟ್ ಪ್ರಾರಂಭಿಸಿ ಆ ಮೂಲಕ ಮುಂಬೈನಲ್ಲಿ ಸಾಹಿತ್ಯಾಸಕ್ತರೊಂದಿಗೆ ನಾನಾ ಕನ್ನಡ ಪರ ಕಾಯ೯ಕ್ರಮಗಳನ್ನು ಆಯೋಜಿಸುತ್ತಿರುವುದು ಕೊಡಗಿಗೇ ಹೆಮ್ಮೆಯಾಗಿದೆ ಎಂದೂ ಅನಿಲ್ ಹೇಳಿದರು.

ಎಲ್ಲಾದರೂ ಇರು, ಎಂಥಾದರು ಇರು, ಸದಾ ನೀ ಕನ್ನಡಿಗನಾಗಿರು ಎಂಬ ಕವಿವಾಣಿಯಂತೆ ಮುಂಬೈನಲ್ಲಿದ್ದುಕೊಂಡು ಕನ್ನಡ ಪರವಾದ ಚಿಂತನೆಗಳನ್ನು ಹೊಂದಿರುವ ಸಾಹಿತ್ಯಾಸಕ್ತರು ಮಾದರಿಯಾಗಿದ್ದಾರೆ ಎಂದೂ ಅನಿಲ್ ಹೆಚ್.ಟಿ ಹೇಳಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಮುಂಬೈಯ ಸಾಹಿತಿ ಗೋಪಾಲ ತ್ರಾಸಿ ಶ್ರೀದೇವಿ ಸಿ ರಾವ್ ರವರ ಚಿಂತನೆ ಮತ್ತು ಅವರ ಸಮಾಜ ಮುಖೀ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತಮ್ಮ ‘ನುಡಿ ತೇರು’ ಕೃತಿ ಕೊಡಗಿನ ನೆಲದಲ್ಲಿ ಲೋಕಾರ್ಪಣೆಗೊಳ್ಳುತ್ತಿರುವ ಬಗ್ಗೆ ಸಂತೋಷವಾಗುತ್ತಿದೆ ಎಂದರು.

ಮುಂಬೈನ ದಿ. ಚಂದ್ರಶೇಖರ ರಾವ್ ಮೆಮೋರಿಯಲ್ ಟ್ರಸ್ಟ್ ನ ಮುಖ್ಯಸ್ಥೆ ಶ್ರೀದೇವಿ ಸಿ ರಾವ್ ಮಾತನಾಡಿ, ಕನ್ನಡ ಸಾಹಿತ್ಯ ಸೇವೆಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ತಮ್ಮ ಕೈಲಾದ ಸೇವೆಯನ್ನು ತನ್ನ ದಿವಂಗತ ಪತಿ ಚಂದ್ರಶೇಖರ ರಾವ್ ಸ್ಮರಣಾಥ೯ ಕೈಗೊಳ್ಳುವುದಾಗಿ ಹೇಳಿದರು.

ಹರಟೆ ಕೃತಿಯ ಬಗ್ಗೆ ಮುಂಬೈ ಯ ಲೇಖಕಿ ಡಾ. ಕುಸುಮ ಮಾತನಾಡಿದರೆ ನುಡಿ ತೇರು ಕೃತಿಯ ಬಗ್ಗೆ ಮಂಡ್ಯದ ಲೇಖಕಿ ಶ್ವೇತಾ ಮಾತನಾಡಿದರು. ವೇದಿಕೆಯಲ್ಲಿ ಚಂದ್ರಶೇಖರ ರಾವ್ ಮೆಮೋರಿಯಲ್ ಟ್ರಸ್ಟ್ ನ ಉಪಾಧ್ಯಕ್ಷ ಪ್ರತಾಪ್ ಉಪಸ್ಥಿತರಿದ್ದರು. ಕೊಡಗಿನ ಸಮರ್ಥ ಕನ್ನಡಿಗರು ಸಂಸ್ಥೆಯ ಪ್ರಧಾನ ಸಂಚಾಲಕಿ ಜಯಲಕ್ಷ್ಮಿ ಸ್ವಾಗತಿಸಿದರು

ಸನ್ಮಾನದ ಗೌರವ-

ಈ ಸಂದರ್ಭದಲ್ಲಿ ಕನ್ನಡ ಸೇವೆ ಹಾಗೂ ನಿರೂಪಣಾ ಕೌಶಲ್ಯಕ್ಕಾಗಿ ಮಡಿಕೇರಿಯ ಮುನೀರ್ ಅಹಮ್ಮದ್ ಅವರಿಗೆ ಸಮರ್ಥ ಕನ್ನಡಿಗರು ಸಂಸ್ಥೆ ‘ವಾಗ್ಭೂಷಣ’ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಮಾಜ ಸೇವೆಗಾಗಿ ಪುಷ್ಪಾ ಕೃಷ್ಣಾನಂದ ಶೇಟ್ ಅವರಿಗೆ ‘ಸಮಾಜ ಸೇವಾ ರತ್ನ’, ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಗೋಪಾಲ ತ್ರಾಸಿಯವರಿಗೆ ‘ಕನ್ನಡ ಕಲಾ ರತ್ನ ’, ಶಿಕ್ಷಣ ಮತ್ತು ಸಮಾಜಸೇವೆಗಾಗಿ ಶ್ರೀದೇವಿ ಸಿ ರಾವ್ ಅವರಿಗೆ ಸಮಾಜ ಸೇವಾ ರತ್ನ, ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಡಾ. ಕುಸುಮಾ ಅವರಿಗೆ ಕನ್ನಡ ರತ್ನ” ಎಂದು ಗೌರವಿಸಿ ಸಮರ್ಥ ಕನ್ನಡಿಗರು ಸಂಸ್ಥೆ ವತಿಯಿಂದ ಪುರಸ್ಕಾರ ನೀಡಲಾಯಿತು. ಚಿತ್ರಕಲೆಯಲ್ಲಿ ರಾಜ್ಯ ಮಟ್ಟದ ಸಾಧನೆಗೈದ ಶಿಕ್ಷಣ, ಕಲೆ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಸಮಾನ ಆಸಕ್ತಿ ಬೆಳೆಸಿಕೊಂಡ ಬಹುಮುಖ ಪ್ರತಿಭೆ ಸಾತ್ವಿಕ್ ಅಣ್ವೇಕರ್ ನನ್ನು “ಉದಯ ರವಿ” ಎಂದು ಗೌರವಿಸಿ ಪುರಸ್ಕಾರ ನೀಡಲಾಯಿತು. ಚಂದ್ರಶೇಖರ ರಾವ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಬಡಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಸಮರ್ಥ ಕನ್ನಡಿಗರು ಸಂಸ್ಥೆಯ ಸಂಚಾಲಕಿಯರಾದ ಚಿತ್ರಾ ಆರ್ಯನ್, ಅರ್ಪಿತಾ ಸಂದೀಪ್ ಮತ್ತು ಶಾಂತಿ ಅಚ್ಚಯ್ಯ ಪ್ರಾರ್ಥಿಸಿದರು. ಸವಿತಾ ರಾಕೇಶ್ ವಂದಿಸಿದ ಕಾರ್ಯಕ್ರಮದ ನಿರೂಪಣೆಯನ್ನು ಕಡ್ಲೇರ ತುಳಸಿ ಮೋಹನ್ ನೆರೇರಿಸಿದರು. ಸಾಂಸ್ಕೃತಿಕ ವೇದಿಕೆಯಲ್ಲಿ ಮೂರ್ನಾಡಿನ ಸೌಮ್ಯ ಭಟ್ ಮಾರ್ಗದರ್ಶನದಲ್ಲಿ “ಶಿವ ತಾಂಡವ” ನೃತ್ಯ ಪ್ರದರ್ಶಿತವಾಯಿತು. ಜನನಿ ಮತ್ತು ತಂಡದ ಆಕರ್ಷಕ ಕೋಲಾಟ ಪ್ರದರ್ಶನ ಜನಮನ ಮನಸೂರೆಗೊಂಡಿತು. ಶ್ರೀರಕ್ಷಾ ಪ್ರಬಾಕರ್ ಗಾಯನ ಪ್ರೇಕ್ಷಕರನ್ನು ಮನರಂಜಿಸಿತು.

ಅವನಿಕಾ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.

ಗೋಪಾಲ ತ್ರಾಸಿಯವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಲೇಖಕಿ ಸ್ಮಿತಾ ಅಮೃತರಾಜ್ ಕಾವ್ಯ ರಚನೆಯ ಬಗ್ಗೆ ಮಾತನಾಡಿ ಕವಿತೆ ವಾಚಿಸಿದರು. ಹತ್ತು ಕವಿಗಳು ಭಾಗವಹಿಸಿದ್ದ ಕವಿಗೋಷ್ಠಿಯನ್ನು ಕೃಪಾ ದೇವರಾಜ್ ನಿರ್ವಹಿಸಿದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ