ಕನ್ನಡಪ್ರಭ ವಾರ್ತೆ ಹಿರಿಯೂರು
ಪಟ್ಟಣದ ಬಿ.ಎಲ್ ಗೌಡ ನಗರದ ಉಪನ್ಯಾಸಕ, ಸಾಹಿತಿ ಹಾಗೂ ಸಂಘಟಕ ಡಾ.ಎಸ್.ಎಚ್. ಶಫಿವುಲ್ಲಾ ಅವರ ನಿವಾಸದಲ್ಲಿ ಕಾವ್ಯ ಕರ್ನಾಟಕ ವೇದಿಕೆಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕನ್ನಡ ಮಾತೆ ಭುವನೇಶ್ವರಿ ಪಟಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ರಾಜ್ಯೋತ್ಸವದ ಆಚರಣೆಯನ್ನು ಯಾವುದೋ ಶಾಲೆ ಕಾಲೇಜು ಅಥವಾ ಯಾವುದೋ ದೊಡ್ಡ ಸಭಾಂಗಣದಲ್ಲಿ ಮಾಡಬೇಕೆಂದಿಲ್ಲ. ನಿಜವಾಗಿಯೂ ಕರ್ನಾಟಕದ ಪ್ರತಿ ಕನ್ನಡಿಗರ ಮನೆಮನೆಗಳಲ್ಲೂ ಕನ್ನಡದ ದೀಪವನ್ನು ಬೆಳಗುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಆಚರಿಸಬೇಕು. ಇಂದು ಕನ್ನಡಿಗ ಎಸ್.ಎಚ್.ಶಫಿವುಲ್ಲಾ ಅವರ ಸಾರಥ್ಯದಲ್ಲಿ ಕಾವ್ಯ ಕರ್ನಾಟಕ ವೇದಿಕೆಯಿಂದ ಅವರ ಮನೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಹಮ್ಮಿಕೊಂಡಿರುವುದು ಪ್ರತಿ ಕನ್ನಡಿಗರಿಗೆ ಅದರಲ್ಲೂ ಭಾಷಾ ಹಾಗೂ ಧರ್ಮೀಯ ಅಲ್ಪಸಂಖ್ಯಾತರಿಗಂತು ಒಂದು ಮಾದರಿ. ಈ ಕಾವ್ಯ ಕರ್ನಾಟಕ ವೇದಿಕೆಯ ಇಂದಿನ ರಾಜ್ಯೋತ್ಸವ ಕಾರ್ಯಕ್ರಮ ಕನ್ನಡಿಗರ ಪ್ರತಿ ಮನೆಮನೆಗಳಲ್ಲೂ ಕನ್ನಡದ ದೀಪ ಬೆಳಗಲು ಸ್ಪೂರ್ತಿಯಾಗುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ ಎಸ್.ಎಚ್ ಶಫಿವುಲ್ಲಾ ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡಿ ಕನ್ನಡಿಗರಾದ ನಾವು ನಮ್ಮ ಭಾಷೆಯ ಬಗ್ಗೆ ಕಾಳಜಿ ಹೊಂದದೆ ಅನ್ಯ ಭಾಷೆಯ ಜನರು ಕಾಳಜಿ ಹೊಂದಲು ಸಾಧ್ಯವಿಲ್ಲ. ಹೊರ ರಾಜ್ಯದಿಂದ ವಲಸೆ ಬಂದ ಅನ್ಯ ಭಾಷಿಗರಿಗೆ ಕನ್ನಡ ಕಲಿಯುವುದು ಅನಿವಾರ್ಯವಾಗಬೇಕು. ಅಂತಹ ವಾತಾವರಣವನ್ನು ಕನ್ನಡಿಗರಾದ ನಾವು ಸೃಷ್ಟಿ ಮಾಡಬೇಕು. ದುರಂತವೆಂದರೆ ನಾವು ಹಾಗೆ ಮಾಡುತ್ತಿಲ್ಲ. ಬದಲಾಗಿ ಅವರ ಭಾಷೆಯನ್ನು ಕಲಿಯುವುದು ನಮಗೆ ಅನಿವಾರ್ಯ ಎಂಬಂತೆ ನಡೆದುಕೊಳ್ಳುತ್ತಿದ್ದೇವೆ. ಈ ನಮ್ಮ ಅತಿಯಾದ ಸಹಿಸುವಿಕೆಯ ಗುಣದಿಂದಾಗಿ ಹೊರ ರಾಜ್ಯದವರು ನಮ್ಮಗಳ ಮೇಲೆ ಅವರ ಭಾಷೆಯನ್ನು ಹೇರುತ್ತಿದ್ದಾರೆ. ಅವರ ಭಾಷೆಯನ್ನು ನಮ್ಮ ಮೇಲೆ ನಾವೇ ಹೇರಿಕೊಳ್ಳುತ್ತಿದ್ದೇವೆ ಎನ್ನುವುದು ಸೂಕ್ತವಾಗುತ್ತದೆ. ನಾವು ಅವರ ಭಾಷೆಯನ್ನು ಹೇರಿಕೊಳ್ಳುವ ಬದಲು ನಮ್ಮ ಭಾಷೆಯನ್ನು ಅವರ ಮೇಲೆ ಹೇರಬೇಕು. ಇದನ್ನು ಪ್ರತಿಯೊಬ್ಬ ಕನ್ನಡಿಗನೂ ಮಾಡಬೇಕಾದ ಪ್ರಮುಖ ಕರ್ತವ್ಯವಾಗಿದೆ. ಸಾಧ್ಯವಾದಷ್ಟು ನಮ್ಮ ಕಾವ್ಯ ಕರ್ನಾಟಕ ವೇದಿಕೆ ಇಂತಹ ವಾತಾವರಣವನ್ನು ಬದಲಿಸುವ ನಿಟ್ಟಿನಲ್ಲಿ ಮುಂಬರುವ ದಿನಮಾನಗಳಲ್ಲಿ ಹಲವು ವಿನೂತನ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವುಗಳ ಮೂಲಕ ಕನ್ನಡಿಗರಲ್ಲಿ ಜಾಗೃತಿ ಉಂಟು ಮಾಡುವ ಗುರಿ ಉದ್ದೇಶಗಳನ್ನು ಒಳಗೊಂಡಿದೆ ಎಂದರು.