ಕನ್ನಡಪ್ರಭ ವಾರ್ತೆ ಮಂಡ್ಯ
ಕನ್ನಡನಾಡಿನಲ್ಲಿ ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಮ್ಮ ಮಂಡ್ಯ ಜಿಲ್ಲೆಯಲ್ಲಿ ‘ಸರ್ಕಾರದ ಆದೇಶದಂತೆ ನಾಮಫಲಕಗಳು ಶೇ.೬೦ರಷ್ಟು ಕನ್ನಡ ಭಾಷೆ ಒಳಗೊಂಡಿರಬೇಕು. ಶೇ ೪೦ರಷ್ಟು ಉಳಿದ ಭಾಷೆಗಳನ್ನು ಬಳಸಲು ಅವಕಾಶವಿದ್ದು, ಜಿಲ್ಲೆಯ ಎಲ್ಲ ನಾಮಫಲಕಗಳು ಕನ್ನಡ ಭಾಷೆಯನ್ನು ಒಳಗೊಂಡಿರಬೇಕು. ಕನ್ನಡವನ್ನಷ್ಟೇ ಬಲ್ಲ ಶ್ರೀಸಾಮಾನ್ಯರಿಗೆ ನೆರವಾಗಬೇಕೆಂಬ ಸದಾಶಯದೊಂದಿಗೆ ಮಂಡ್ಯದಲ್ಲಿ ಕನ್ನಡ ಮೊದಲು ಆಟೋ ರ್‍ಯಾಲಿ ಮತ್ತು ಜಾಗೃತಿ ಜಾಥಾ ಆಯೋಜಿಸಲಾಗಿದೆ ಎಂದು ಕನ್ನಡಪರ ಹೋರಾಟಗಾರ ಎಂ.ಬಿ.ನಾಗಣ್ಣಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಮಂಡ್ಯ ನಗರದಲ್ಲಿರುವ ಅನೇಕ ಹೋಟೆಲ್, ಬ್ಯಾಂಕ್, ಸರ್ಕಾರಿ ಕಚೇರಿಗಳು, ಅಂಗಡಿ ಮುಂಗಟ್ಟು ಮತ್ತು ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಕನ್ನಡ ಕಡ್ಡಾಯ ಮತ್ತು ಗ್ರಾಹಕರೊಂದಿಗೆ ಕನ್ನಡದಲ್ಲೇ ವ್ಯವಹರಿಸುವುದನ್ನು ಕಲಿಸುವ ನಿಟ್ಟಿನಲ್ಲಿ ಇಡೀ ರಾಜ್ಯದಲ್ಲೇ ಮೊದಲ ಬಾರಿಗೆ ‘ಕನ್ನಡ ಮೊದಲು’ ಎಂಬ ಪ್ರೀತಿಯ ಚಳಿವಳಿಯನ್ನು ಮಂಡ್ಯದಲ್ಲಿ ಆರಂಭಿಸಲಾಗುತ್ತಿದೆ. ಗುಲಾಬಿಯ ನೀಡಿ ಕನ್ನಡ ಬಳಕೆ ಹೆಚ್ಚಿಸುವಂತೆ ಕರಪತ್ರಗಳನ್ನು ಇಡೀ ನಗರದ ಅಂಗಡಿ ಮುಂಗಟ್ಟುಗಳಿಗೆ ಕೊಟ್ಟು ಕನ್ನಡ ಭಾಷೆಯ ಸಾರ್ವಭೌಮತ್ವವನ್ನು ಎತ್ತಿಹಿಡಿಯುವ ಸಂಕಲ್ಪವನ್ನು ಕನ್ನಡಪರ ಸಂಘಟನೆಗಳು ಹಮ್ಮಿಕೊಂಡಿವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಚ್.ಡಿ. ಜಯರಾಂ ಹೇಳಿದರು.
ಮಂಡ್ಯ ನಗರದ ಕಾಳಮ್ಮನ ಗುಡಿಯಿಂದ ೧೦ ಗಂಟೆಗೆ ಆರಂಭವಾಗಲಿರುವ ಕನ್ನಡ ಮೊದಲು ಆಟೋ ರ್‍ಯಾಲಿ ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ, ಜಯಚಾಮರಾಜೇಂದ್ರ ವೃತ್ತದಲ್ಲಿ ಬಹಿರಂಗ ಕಾರ್ಯಕ್ರಮದ ಮೂಲಕ ಕೊನೆಯಾಗಲಿದೆ. ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ರ್‍ಯಾಲಿಗೆ ಹಸಿರು ನಿಶಾನೆ ತೋರಲಿದ್ದು, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್‌ಕುಮಾರ್, ಕನ್ನಡ ಪರಿಚಾರಕರಾದ ಕೆ.ಟಿ.ಹನುಮಂತು, ಕನ್ನಡ ಕುಲ ಧರ್ಮ ಸ್ಥಾಪಕ ಜ್ಞಾನ್ ಮಧು ಕಲ್ಲಹಳ್ಳಿ, ನಮ್ಮ ನಾಡು ನಮ್ಮ ಆಳ್ವಿಕೆಯ ಶ್ಯಾಮಸುಂದರ್ ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.ಗೋಷ್ಠಿಯಲ್ಲಿ ಧನುಷ್‌ಗೌಡ, ವೆಂಕಟೇಶ್, ಸೋಮಶೇಖರ್, ಸಂಜು ಆಲಕೆರೆ, ರಾಜೇಂದ್ರ ಇತರರಿದ್ದರು.