ರೈಲ್ವೆ ಬಡ್ತಿ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್‌

KannadaprabhaNewsNetwork |  
Published : Jun 16, 2026, 01:45 AM IST
ರೈಲು | Kannada Prabha

ಸಾರಾಂಶ

ನೈಋತ್ಯ ರೈಲ್ವೆ ಮೈಸೂರು ವಿಭಾಗದ ಗೂಡ್ಸ್‌ ಟ್ರೇನ್‌ ಮ್ಯಾನೇಜರ್‌ ಹುದ್ದೆಯ ಪದೋನ್ನತಿ ಪರೀಕ್ಷೆಯಲ್ಲಿ ಮತ್ತೊಮ್ಮೆ ಕನ್ನಡವನ್ನು ಕಡೆಗಣಿಸಲಾಗಿದೆ. ಇದನ್ನು ಖಂಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆಯು ಜೂ.25ರಂದು ನಿಗದಿಯಾಗಿರುವ ಪರೀಕ್ಷೆಯನ್ನು ಯಾವುದೇ ಕಾರಣಕ್ಕೂ ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ನೈಋತ್ಯ ರೈಲ್ವೆ ಮೈಸೂರು ವಿಭಾಗದ ಗೂಡ್ಸ್‌ ಟ್ರೇನ್‌ ಮ್ಯಾನೇಜರ್‌ ಹುದ್ದೆಯ ಪದೋನ್ನತಿ ಪರೀಕ್ಷೆಯಲ್ಲಿ ಮತ್ತೊಮ್ಮೆ ಕನ್ನಡವನ್ನು ಕಡೆಗಣಿಸಲಾಗಿದೆ. ಇದನ್ನು ಖಂಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆಯು ಜೂ.25ರಂದು ನಿಗದಿಯಾಗಿರುವ ಪರೀಕ್ಷೆಯನ್ನು ಯಾವುದೇ ಕಾರಣಕ್ಕೂ ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

ಸೋಮವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು, ಕನ್ನಡಿಗರ ಹಕ್ಕುಗಳನ್ನು ಹೊಸಕಿ ಹಾಕುವ ರೈಲ್ವೆ ಇಲಾಖೆಯ ಈ ನಿರ್ಧಾರದ ವಿರುದ್ಧ ಕರವೇ ಉಗ್ರ ಹೋರಾಟ ನಡೆಸಲಿದೆ. ಜೂ. 25ರಂದು ಬೆಂಗಳೂರು, ಮೈಸೂರು, ಹುಬ್ಬಳ್ಳಿ ಸೇರಿದಂತೆ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಂಘಟನೆ ಕಾರ್ಯಕರ್ತರು ಉಗ್ರ ಹೋರಾಟ ನಡೆಸಲಿದ್ದಾರೆ. ಅಲ್ಲಿ ಆಗುವ ಅನಾಹುತಗಳಿಗೆ ಕರವೇ ಜವಾಬ್ದಾರಿಯಲ್ಲ. ರೈಲ್ವೆ ಆಡಳಿತವು ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಪರಿಣಾಮಗಳು ತೀವ್ರವಾಗಿರುತ್ತವೆ ಎಂದು ಎಚ್ಚರಿಸಿದ್ದಾರೆ.

ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಜೂ.4ರಂದು ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಗೂಡ್ಸ್ ಟ್ರೇನ್ ಮ್ಯಾನೇಜರ್ ಹುದ್ದೆಯನ್ನು ಲೆವೆಲ್-5ರಲ್ಲಿ ಶೇ.15 ಎಲ್‌ಡಿಸಿಇ ಕೋಟಾ ಅಡಿಯಲ್ಲಿ ಭರ್ತಿ ಮಾಡಲಾಗುತ್ತಿದೆ. ಅದಕ್ಕಾಗಿ ಜೂ.25ರಂದು ಕಂಪ್ಯೂಟರ್ ಬೇಸ್ಡ್ ಟೆಸ್ಟ್ (ಸಿಬಿಟಿ) ಪದೋನ್ನತಿ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಸಿದ್ಧಪಡಿಸಲಾಗುತ್ತಿದ್ದು, ಕನ್ನಡ ಭಾಷೆಗೆ ಅವಕಾಶ ನೀಡಿಲ್ಲ. ಇದು ಕರ್ನಾಟಕದ ಕನ್ನಡಿಗರ ಮೇಲೆ ನಡೆಸುತ್ತಿರುವ ಘೋರ ಅನ್ಯಾಯ ಮತ್ತು ಭಾಷಾ ಹಕ್ಕುಗಳನ್ನು ಕಿತ್ತುಕೊಳ್ಳುವ ದೊಡ್ಡ ಸಂಚಾಗಿದೆ ಎಂದು ನಾರಾಯಣಗೌಡ ಕಿಡಿಕಾರಿದ್ದಾರೆ.

ಅವರು, ನೈಋತ್ಯ ರೈಲ್ವೆ ಮತ್ತೆ ಕನ್ನಡವಿಲ್ಲದೆ ಪದೋನ್ನತಿ ಪರೀಕ್ಷೆ ನಡೆಸಲು ಮುಂದಾಗಿದೆ. ಇದು ಕನ್ನಡಿಗರ ಮೇಲೆ ಹೂಡಲಾಗಿರುವ ಮೋಸದ ಯುದ್ಧ. ಇದಕ್ಕೆ ತಕ್ಕ ಉತ್ತರವನ್ನು ನೀಡುತ್ತೇವೆ. ಕನ್ನಡಿಗರ ಹಕ್ಕುಗಳನ್ನು ಹೊಸಕಿ ಹಾಕುವ ಇಂತಹ ದ್ರೋಹದ ವಿರುದ್ಧ ನಿರಂತರ ಹೋರಾಟ ಮಾಡುತ್ತೇವೆ. ರೈಲ್ವೆ ಇಲಾಖೆ ತಪ್ಪು ತಿದ್ದಿಕೊಳ್ಳಬೇಕು, ಇಲ್ಲವಾದಲ್ಲಿ ಆಗುವ ಎಲ್ಲ ಅನಾಹುತಗಳಿಗೆ ತಾನೇ ಜವಾಬ್ದಾರಿ ಹೊರಬೇಕು. ಕನ್ನಡವಿಲ್ಲದ ಪರೀಕ್ಷೆ ನಡೆಸಲು ಮುಂದಾದರೆ ರೈಲ್ವೆ ಇಲಾಖೆ ಹಿಂದೆಂದೂ ಕಾಣದ ಉಗ್ರ ಸ್ವರೂಪದ ಹೋರಾಟ ಎದುರಿಸಬೇಕಾಗುತ್ತದೆ ಎಂದಿದ್ದಾರೆ.

ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ದು, ಸಂವಿಧಾನದ ಪ್ರಕಾರ ಪ್ರಾದೇಶಿಕ ಭಾಷೆಗಳಿಗೆ ಗೌರವ ನೀಡಬೇಕು ಎಂಬುದು ಸ್ಪಷ್ಟವಾಗಿದೆ. ಆದರೆ ರೈಲ್ವೆ ಇಲಾಖೆಯು ಇತರ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗಳನ್ನು ಗೌರವಿಸುತ್ತಿದ್ದರೂ, ಕರ್ನಾಟಕದಲ್ಲಿ ಮಾತ್ರ ಕನ್ನಡವನ್ನು ನಿರಾಕರಿಸುವುದು ಉದ್ದೇಶಪೂರ್ವಕವಾದ ತಾರತಮ್ಯವಾಗಿದೆ. ರೈಲ್ವೆ ಮಂಡಳಿ ಮತ್ತು ನೈಋತ್ಯ ರೈಲ್ವೆ ಆಡಳಿತವು ತಕ್ಷಣವೇ ಈ ಪರೀಕ್ಷೆಯನ್ನು ರದ್ದುಗೊಳಿಸಬೇಕು. ರೈಲ್ವೆ ನೇಮಕಾತಿ ಮತ್ತು ಪದೋನ್ನತಿ ಪರೀಕ್ಷೆಗಳು ಕನ್ನಡದಲ್ಲೇ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಬರಗಾಲ ಎದುರಿಸಲು ಸಜ್ಜಾಗಿ: ಸಿಎಂ
ರಾಜ್ಯಾದ್ಯಂತ ಮುಂಗಾರು ಮಳೆ 21% ಕೊರತೆ