ಬಳ್ಳಾರಿ : ರಾಜ್ಯದಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಸರ್ಕಾರ ಇನ್ನು ಬರ ಘೋಷಿಸದೇ ರೈತರನ್ನು ಸಂಕಷ್ಟಕ್ಕೆ ದೂಡಿದೆ. ರಾಜ್ಯದ ಜನರ ಸಂಕಷ್ಟ ಆಲಿಸಬೇಕಾದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟ ರಚನೆಗೆ ದೆಹಲಿಯ ಫೈವ್‌ಸ್ಟಾರ್‌ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್ ಟೀಕಿಸಿದರು.

ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಿಡಗಿನಮೊಳ, ಕಾರೇಕಲ್ಲು ಗ್ರಾಮಗಳಿಗೆ ಭೇಟಿ ನೀಡಿ ಮಳೆ ಕೊರತೆಯಿಂದ ಒಣಗಿರುವ ಬೆಳೆಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದ ಖಜಾನೆ ಸಂಪೂರ್ಣ ಖಾಲಿಯಾಗಿದೆ. ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ರೈತರ ಕಣ್ಣೀರನ್ನು ಒರೆಸುವ ಬದಲು ಆಡಳಿತ ಪಕ್ಷದ ನಾಯಕರು ರಾಜಕೀಯ ಲೆಕ್ಕಾಚಾರದಲ್ಲೇ ನಿರತರಾಗಿದ್ದಾರೆ. ಬೆಳೆ ಬಿತ್ತನೆ ಮಾಡಿ 50 ದಿನಗಳಾದರೂ ಮಳೆಯಾಗದೇ ಬೆಳೆ ಸಂಪೂರ್ಣ ಒಣಗಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿಯೂ ಜಿಲ್ಲಾಧಿಕಾರಿ, ತಹಸೀಲ್ದಾರರು ಅಥವಾ ಜಿಲ್ಲಾ ಉಸ್ತುವಾರಿ ಸಚಿವರು ಹೊಲಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲಿಸಿಲ್ಲ. ರೈತರ ಸಮಸ್ಯೆ ಅರಿಯುವ ಮನಸ್ಸೇ ಸರ್ಕಾರಕ್ಕೆ ಇಲ್ಲ ಎಂದು ಆಪಾದಿಸಿದರು.

ಆ.3ರೊಳಗೆ ಬರ ಘೋಷಣೆ ಆಗದಿದ್ದರೆ : ಅಶೋಕ್ ಎಚ್ಚರಿಕೆ

ಬಳ್ಳಾರಿ: ರಾಜ್ಯ ಸರ್ಕಾರ ಕೂಡಲೇ ಬರ ಘೋಷಣೆ ಮಾಡಿ ರೈತರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಪ್ರಕಟಿಸಬೇಕು. ಇಲ್ಲದಿದ್ದರೆ ಮುಂದಿನ ವಿಧಾನಮಂಡಲ ಅಧಿವೇಶನ ನಡೆಯಲು ಬಿಡುವುದಿಲ್ಲ. ಆ.3ರೊಳಗೆ ಬರ ಘೋಷಿಸದಿದ್ದರೆ ರಾಜ್ಯದ ಎಲ್ಲ ತಾಲೂಕುಗಳಲ್ಲಿ ರೈತರ ಜಮೀನಿನಲ್ಲೇ ಧರಣಿ ನಡೆಸಲಾಗುವುದು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಎಚ್ಚರಿಸಿದರು 


ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ

 ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಡಿ.ಕೆ. ಶಿವಕುಮಾರ್ ಅಧಿಕಾರಕ್ಕೆ ಬಂದು 2 ತಿಂಗಳು ಕಳೆದರೂ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿದರು. ಡಿ.ಕೆ. ಶಿವಕುಮಾರ್ ಅಧಿಕಾರಕ್ಕೆ ಬಂದ ನಂತರ ಜಲಾಶಯಗಳು, ಖಜಾನೆ, ಜಮೀನುಗಳು ಖಾಲಿಯಾಗಿವೆ. ಅವರ ಆಡಳಿತದ ಅಜೆಂಡಾ ಏನು ಎಂಬುದನ್ನು ಜನರಿಗೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.