ಕನ್ನಡಪ್ರಭ ವಾರ್ತೆ ಮಂಡ್ಯ

ಕಾವೇರಿ ಹೋರಾಟಕ್ಕೆ ಮೊದಲಿಗೆ ಕಿಚ್ಚು ಹಚ್ಚುತ್ತಿದ್ದ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಈ ಬಾರಿ ತಡವಾಗಿ ಹೋರಾಟಕ್ಕಿಳಿದಿದೆ. ಇದು ಸಮಿತಿಯ ದೌರ್ಬಲ್ಯವೋ, ಸಂಘಟಕರ ನಿರಾಸಕ್ತಿಯೋ ಗೊತ್ತಿಲ್ಲ. ತಮಿಳುನಾಡಿಗೆ ನೀರು ಬಿಡುವ ನಿರ್ಧಾರ ಹೊರಬೀಳುತ್ತಿದ್ದಂತೆ ತಕ್ಷಣವೇ ಸಭೆ ಕರೆದು ಹೋರಾಟಕ್ಕೆ ಜನರಿಗೆ ಕರೆ ಕೊಡುತ್ತಿದ್ದ ಒಂದು ಕಾಲವಿತ್ತು. ಈಗ ರೈತ ಹಿತರಕ್ಷಣಾ ಸಮಿತಿ ಅಷ್ಟೊಂದು ತೀವ್ರವಾಗಿ ಹೋರಾಟಕ್ಕಿಳಿಯದೆ ಪ್ರತಿಭಟನೆಗೆ ಸೀಮಿತವಾಗಿರುವಂತೆ ಕಂಡುಬರುತ್ತಿದೆ.

ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕೆಂದ ನೀರು ನಿರ್ವಹಣಾ ಸಮಿತಿಯ ಆದೇಶವನ್ನು ವಿರೋಧಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸೇರಿದಂತೆ ರೈತಸಂಘ, ಕನ್ನಡಪರ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳ ನೇತೃತ್ವದಲ್ಲಿ ಹೆದ್ದಾರಿ ತಡೆ, ಪ್ರತಿಭಟನೆ ನಡೆಸಲಾಯಿತು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರೈತ ಹಿತರಕ್ಷಣಾ ಸಮಿತಿಯ ಸಮಿತಿ ಪ್ರಧಾನ ಕಾರ್ಯದರ್ಶಿ ಸುನಂದಾ ಜಯರಾಂ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆಯಿತು. ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಭಾಗಿಯಾಗಿದ್ದರು. ಪ್ರತಿಮೆ ಎದುರು ಕುಳಿತು ಹೋರಾಟ ನಡೆಸುತ್ತಿದ್ದವರು ಸ್ವಲ್ಪ ಸಮಯದ ಬಳಿಕ ಹೆದ್ದಾರಿಯಲ್ಲಿ ಕುಳಿತು ಹೋರಾಟ ನಡೆಸಿ ಹೆದ್ದಾರಿ ತಡೆ ಚಳವಳಿ ನಡೆಸಿದರು.

ಹೆದ್ದಾರಿ ತಡೆಯಿಂದ ವಾಹನಗಳು ಹಾಗೂ ಜನರ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದನ್ನು ಗಮನಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಹೆದ್ದಾರಿ ತಡೆ ತೆರವುಗೊಳಿಸುವಂತೆ ಮನವಿ ಮಾಡಿದರು. ಇದಕ್ಕೆ ಕೆಲವರು ಮಣಿಯದಿದ್ದಾಗ ಅವರನ್ನು ಬಲವಂತವಾಗಿ ಪೊಲೀಸರು ತೆರವುಗೊಳಿಸಿದರು. ರಸ್ತೆ ತಡೆ ಮಾಡದೆ, ಶಾಂತಿಯುತ ಪ್ರತಿಭಟನೆ ಮಾಡುವುದಕ್ಕೆ ಅಡ್ಡಿಪಡಿಸುವುದಿಲ್ಲ. ಆದರೆ, ಹೆದ್ದಾರಿ ತಡೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡದಂತೆ ಪೊಲೀಸರ ಸಲಹೆ ನೀಡಿದರು.


ನಂತರ ಹೋರಾಟಗಾರರು ಸ್ಥಳದಿಂದ ತೆರವುಗೊಂಡರು. ಮಧ್ಯಾಹ್ನ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಲಿದೆ. ಸಭೆಯಲ್ಲಿ ಯಾವ ತೀರ್ಮಾನ ಹೊರಬೀಳಲಿದೆ ಎಂಬುದರ ಆಧಾರದ ಮೇಲೆ ಮುಂದಿನ ಹೋರಾಟ ಕೈಗೊಳ್ಳುವುದಾಗಿ ಸುನಂದಾ ಜಯರಾಂ ತಿಳಿಸಿದರು. ನಂತರ ಎಲ್ಲರೂ ಹೊರನಡೆದರು.

ಪ್ರತಿಭಟನೆಯಲ್ಲಿ ರೈತ ಹಿತರಕ್ಷಣಾ ಸಮಿತಿಯ ಕೆ.ಬೋರಯ್ಯ, ಮುದ್ದೇಗೌಡ, ರೈತ ಮುಖಂಡ ಇಂಡುವಾಳು ಚಂದ್ರಶೇಖರ್ ದಸಂಸ ಮುಖಂಡ ಕೃಷ್ಣ, ಮೈಷುಗರ್ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಸಬ್ಬನಹಳ್ಳಿ ಕೃಷ್ಣ, ಬಿಜೆಪಿ ವಕ್ತಾರ ಸಿ.ಟಿ.ಮಂಜುನಾಥ, ಕರುನಾಡ ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣಗೌಡ, ಜಯ ಕರ್ನಾಟಕ ಸಂಘಟನೆಯ ಯೋಗಣ್ಣ, ಕರವೇ ಎಚ್.ಡಿ.ಜಯರಾಂ, ಜೈ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಎಸ್.ನಾರಾಯಣ್ ಸೇರಿದಂತೆ ಇತರರಿದ್ದರು.