ರಾಮಕೃಷ್ಣ ದಾಸರಿ
ರಾಯಚೂರು : ನಿಜಾಂ ಪ್ರಾಂತದ ಆಳ್ವಿಕೆಗೊಳಪಟ್ಟ ಹಿಂದಿ-ಉರ್ದು, ತೆಲುಗು ಭಾಷೆಯನ್ನಾಡುವ ತೆಲಂಗಾಣ ಹಾಗೂ ಆಂಧ್ರಪ್ರದೇಶದ ನೆಲದಲ್ಲಿ ಜನಿಸಿ ಎಲೆಮರೆಯ ಕಾಯಿಯಂತೆ ಕನ್ನಡ ಕಳಕಳಿಯನ್ನು ತೋರುತ್ತಿರುವ ಗಡಿನಾಡು ಕನ್ನಡ ಸಂಘದಿಂದ ಕನ್ನಡ ಸೇವೆ ಅಮೋಘ ಹಾಗೂ ಅಪರೂಪವೆನಿಸುತ್ತದೆ. ರಾಯಚೂರು ಜಿಲ್ಲೆಗೆ ಹೊಂದಿಕೊಂಡ ತೆಲಂಗಾಣ ರಾಜ್ಯದ ನಾರಾಯಣಪೇಟ್ ಜಿಲ್ಲೆಯ ಕೃಷ್ಣಾ ಮಂಡಲಂನ ಗಡಿನಾಡು ಕನ್ನಡ ಸಂಘವು ಕಳೆದ 57 ವರ್ಷಗಳಿಂದ ನಿರಂತರವಾಗಿ ಕನ್ನಡದ ಕಂಪನ್ನು ಪಸರಿಸುವ ಕಾರ್ಯ ಮಾಡುತ್ತಿದೆ.
ರಾಯಚೂರು ಜಿಲ್ಲೆಗೆ ಹೊಂದಿಕೊಂಡಿರುವ ಸಮಕ್ಯ ಆಂಧ್ರಪ್ರದೇಶದ ಮೆಹಬೂಬನಗರ ಜಿಲ್ಲೆಯ ಮಾಗನೂರು ಮಂಡಲಂನ ಕೃಷ್ಣಾ ಎನ್ನುವ ಪುಟ್ಟ ಗ್ರಾಮದಲ್ಲಿ 1968ರಲ್ಲಿ ಹುಟ್ಟಿಕೊಂಡ ಗಡಿನಾಡು ಕನ್ನಡ ಸಂಘವು ತೆಲುಗು ನೆಲದಲ್ಲಿ ಕನ್ನಡದ ನುಡಿ, ಭಾಷೆ, ಕಲಿಕೆ, ಸಂಸ್ಕೃತಿ, ಸಾಹಿತ್ಯ ಸೇರಿದಂತೆ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳ ಸಮಸ್ಯೆಗಳ ಪರವಾಗಿ ಹತ್ತು ಹಲವು ಚಟುವಟಿಕೆಗಳನ್ನು ಮಾಡುತ್ತಲೇ ಬರುತ್ತಿದೆ.
ಐದಾರು ದಶಕಗಳಿಂದ ತೆಲಂಗಾಣ, ಆಂಧ್ರಪ್ರದೇಶದಲ್ಲಿ ಕನ್ನಡ ನಾಟಕಗಳ ಪ್ರದರ್ಶನ, ಸಮ್ಮೇಳನಗಳು, ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದವರಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡಿದೆ. ಇಷ್ಟೇ ಅಲ್ಲದೇ 2016 ಡಿ.2 ರಿಂದ 4 ವರೆಗೆ ರಾಯಚೂರಿನಲ್ಲಿ ನಡೆದ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಂಘವು ಸಕ್ರಿಯತೆ ಜೊತೆಗೆ ಕರ್ನಾಟಕ ಹಾಗೂ ಇತರೆ ರಾಜ್ಯಗಳಲ್ಲಿ ನಡೆಯುವ ಕನ್ನಡಪರ ಕಾರ್ಯಕ್ರಮಗಳಲ್ಲಿ ಗಡಿನಾಡನ್ನು ಪ್ರತಿನಿಧಿಸುವ ಸಂಘಟನೆಗಳಲ್ಲಿ ಇದು ಕೂಡಾ ಒಂದಾಗಿದೆ.
ಭಾಷಾವಾರು ಪ್ರಾಂತಗಳ ವಿಂಗಡಣೆಯಾದ ಸಮಯದಲ್ಲಿ ಭೌಗೋಳಿಕವಾಗಿ ಕನ್ನಡ ರಾಜ್ಯದಿಂದ ಹೊರಗುಳಿದು ಹೊರನಾಡು ಕನ್ನಡಿಗರ ಹಣೆಪಟ್ಟಿಯನ್ನು ಗಿಟ್ಟಿಸಿಕೊಂಡರೂ ಸಹ ಇಂದಿಗೂ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸೇವೆಯಲ್ಲಿ ಸಂಘವು ತನ್ನನ್ನು ತಾನು ಸಂಪೂರ್ಣ ಅರ್ಪಿಸಿಕೊಂಡಿದೆ.
ಹಲವು ಗಣ್ಯರ ಭೇಟಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಬರಗುರು ರಾಮಚಂದ್ರಪ್ಪ, ಚಂದ್ರಶೇಖರ್ ಪಾಟೀಲ್, ಸಿದ್ದಲಿಂಗಯ್ಯ, ಮುಖ್ಯಮಂತ್ರಿ ಚಂದ್ರು, ಹಾಗೂ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಸೇರಿ ಹಲವಾರು ಗಣ್ಯರು ಗಡಿನಾಡು ಪ್ರಾಂತವಾದ ತೆಲಂಗಾಣ ಕೃಷ್ಣಾ ಗ್ರಾಮಕ್ಕೆ ಭೇಟಿ ನೀಡಿ ಗಡಿನಾಡು ಕನ್ನಡ ಸಂಘದ ಕಾರ್ಯಚಟುವಟಿಕೆಗಳನ್ನು ತಿಳಿದು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಗಡಿನಾಡು ಕನ್ನಡ ಮಕ್ಕಳು ಎದುರಿಸುತ್ತಿರುವ ಹತ್ತಾರು ಸಮಸ್ಯೆಗಳ ವಿರುದ್ಧ ಸಂಘವು ನಿರಂತರ ಹೋರಾಟಗಳನ್ನು ನಡೆಸುತ್ತಾ ಬರುತ್ತಿದೆ. ಕೇರಳದ ಕಾಸರಗೋಡು, ಮಹಾರಾಷ್ಟ್ರದ ಜತ್ತು ಸೋಲಾಪುರ್ ಗಳಲ್ಲಿರುವ ಕನ್ನಡ ಶಾಲೆಗಳನ್ನು ಆ ಪ್ರಾಂತವನ್ನು ಗಡಿನಾಡು ಕನ್ನಡ ಪ್ರಾಂತ ಎಂದು ಕರ್ನಾಟಕ ಸರ್ಕಾರ ರಾಜ್ಯ ಪರಿಪತ್ರದಲ್ಲಿ ಘೋಷಿಸದ ಮಾದರಿಯಲ್ಲಿಯೇ ಇಲ್ಲಿನ ಪ್ರದೇಶವನ್ನು ಘೋಷಿಸದೇ ದೂರವಿಟ್ಟ ಕಾರಣಕ್ಕೆ ಗಡಿನಾಡಿನಲ್ಲಿ 1ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳು ಮುಂದಿನ ವಿದ್ಯಾಭ್ಯಾಸಕ್ಕೆ ಕರ್ನಾಟಕಕ್ಕೆ ಬಂದಾಗ ಪ್ರವೇಶ ದೊರೆಯದೇ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.
ತೆಲಂಗಾಣ ಆಂಧ್ರದ ಪ್ರಾಂತಗಳಾದ ಮೆದಕ್, ಹೈದರಾಬಾದ್, ನಾರಾಯಣ ಪೇಟ್, ಕರ್ನೂಲ್, ಅನಂತಪುರ ಐದು ಜಿಲ್ಲೆಗಳಲ್ಲಿ ಇಂದಿಗೂ ಅಂದಾಜಾಗಿ 20,000 ಮಕ್ಕಳು ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ, ಈ ಪ್ರಾಂತವನ್ನು ಗಡಿನಾಡು ಕನ್ನಡ ಪ್ರಾಂತ ಎಂದು ಕರ್ನಾಟಕ ಸರ್ಕಾರ ಘೋಷಿಸದ ಕಾರಣ ಇವರು ಆನ್‌ಲೈನ್ ಪ್ರವೇಶವಾಗಲಿ, ವಸತಿ ನಿಲಯಗಳ ಪ್ರವೇಶ, ವಿದ್ಯಾರ್ಥಿ ವೇತನ ಸೇರಿ ಇತರೆ ಸವಲತ್ತುಗಳು ಸಿಗುತ್ತಿಲ್ಲ. ಇಷ್ಟೇ ಅಲ್ಲದೇ ಕನ್ನಡ ಮಕ್ಕಳಿಗೆ ಕರ್ನಾಟಕದಲ್ಲಿ ಡಿಪ್ಲೊಮಾ, ಐಟಿಐಗಳಲ್ಲಿ ಪ್ರವೇಶ ಪಡೆಯಲಾಗುತ್ತಿಲ್ಲ. ಎಂಜಿನಿಯರಿಂಗ್, ವೈದ್ಯಕೀಯ ಸೀಟುಗಳು ಪಡೆಯುವುದಂತೂ ಅಸಾಧ್ಯದ ಮಾತಾಗಿದೆ. ಈ ಎಲ್ಲ ಸಮಸ್ಯೆಗಳ ಮೇಲೆ ಸಂಘವು ನಿರಂತರವಾಗಿ ಬೆಳಕು ಚೆಲ್ಲುತ್ತಲಿದ್ದರೂ ಇಷ್ಟು ದಿನ ಆಡಳಿತ ನಡೆಸಿದ ರಾಜ್ಯ ಸರ್ಕಾರಗಳಿಂದ ಸ್ಪಂದನೆ ದೊರೆಯದಕ್ಕೆ ಸಂಘವು ನೊಂದು ಬೆಂದು ಹೋಗಿದೆ.