ಕನ್ನಡಪ್ರಭ ವಾರ್ತೆ ಮಂಗಳೂರು ಪಿಲಿನಲಿಕೆ ಪ್ರತಿಷ್ಠಾನ ಹಾಗೂ ನಮ್ಮ ಟಿ.ವಿ.ಯ ಜಂಟಿ ಆಶ್ರಯದಲ್ಲಿ ಜಿಲ್ಲೆಯ ಆಯ್ದ 10 ಪ್ರಸಿದ್ಧ ಹುಲಿವೇಷ ತಂಡಗಳ ಮಧ್ಯೆ ‘ಪಿಲಿ ನಲಿಕೆ-2023’ 8ನೇ ಆವೃತ್ತಿ ಸ್ಪರ್ಧೆಯು ಅ. 23ರಂದು ಮಂಗಳೂರಿನ ಉರ್ವ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ ಎಂದು ಪಿಲಿನಲಿಕೆ ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ ತಿಳಿಸಿದ್ದಾರೆ. ಪ್ರತಿಷ್ಠಿತ 10 ತಂಡಗಳು ಭಾಗವಹಿಸಲಿರುವ ಪಿಲಿನಲಿಕೆ ಸ್ಪರ್ಧೆಯನ್ನು ಬೆಳಗ್ಗೆ 11 ಗಂಟೆಗೆ ಕಟಪಾಡಿಯ ಶ್ರೀಮದ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಮಹಾಸರಸ್ವತಿ ಪೀಠದ ಶ್ರೀಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಉದ್ಘಾಟಿಸಲಿರುವರು. ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಾಗೂ ಹಾಗೂ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ಭಾಗವಹಿಸುವರು ಎಂದರು. ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಪ್ರಥಮ 5 ಲಕ್ಷ ರು. ಹಾಗೂ ಟ್ರೋಫಿ, ದ್ವಿತೀಯ 3 ಲಕ್ಷ ರು., ಟ್ರೋಫಿ, ತೃತೀಯ 2 ಲಕ್ಷ ರು., ಟ್ರೋಫಿ ನೀಡಲಾಗುವುದು. ಭಾಗವಹಿಸುವ ಎಲ್ಲ ತಂಡಗಳಿಗೆ ತಲಾ 50 ಸಾವಿರ ರು. ಪ್ರೋತ್ಸಾಹಕಧನ ನೀಡಲಾಗುವುದು ಎಂದರು. ಜಿಲ್ಲೆಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಪರ್ಧಾ ಕಾರ್ಯಕ್ರಮವೊಂದಕ್ಕೆ ಜರ್ಮನ್ ಸ್ಟ್ರಕ್ಟರ್ ಅಳವಡಿಸಲಾಗುತ್ತಿದ್ದು, 10 ಸಾವಿರ ಮಂದಿ ಕುಳಿತು ನೋಡುವ ಅವಕಾಶ ಕಲ್ಪಿಸಲಾಗಿದೆ ಎಂದರು. ಹಿಂದಿ, ಕನ್ನಡ, ತುಳು ಚಿತ್ರ ರಂಗದ ತಾರೆಯರು, ವಿಶೇಷವಾಗಿ ಸುನಿಲ್ ಶೆಟ್ಟಿ, ರಿಷಭ್ ಶೆಟ್ಟಿ, ರಾಜ್ ಶೆಟ್ಟಿ ಹಾಗೂ ಕ್ರಿಕೆಟ್ ಲೋಕದ ಸಾಧಕರಾದ ಹರ್ಭಜನ್ ಸಿಂಗ್, ಜಾಂಟಿ ರೋಡ್ಸ್ ಪಿಲಿನಲಿಕೆಗೆ ತಾರಾ ಮೆರುಗು ನೀಡಲಿದ್ದಾರೆ. ರಾಜಕೀಯ ನಾಯಕರು ಸೇರಿದಂತೆ ಹಲವು ಕ್ಷೇತ್ರದ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವರು ಎಂದರು. ಪ್ರಮುಖರಾದ ಡಾ.ಶಿವಶರಣ್ ಶೆಟ್ಟಿ, ಅವಿನಾಶ್, ವಿಕಾಸ್, ನವೀನ್ ಶೆಟ್ಟಿ ಎಡ್ಮೆಮಾರ್ ಮತ್ತಿತರರು ಇದ್ದರು.