ಸರ್ಕಾರದ ನೀತಿಯಿಂದ ಬೀದಿ ಭಾಷೆಯಾಗುವ ಭಯದಲ್ಲಿ ಕನ್ನಡ

KannadaprabhaNewsNetwork |  
Published : Nov 19, 2026, 02:00 AM IST
ಧಾರವಾಡದ ಆಲೂರು ವೆಂಕಟರಾವ್‌ ಭವನದಲ್ಲಿ ಬುಧವಾರ ನಡೆದ ಧಾರವಾಡ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯ ಸಾಹಿತಿ ಪ್ರೊ.ಎಸ್‌.ಜಿ. ಸಿದ್ದರಾಮಯ್ಯನವರು ಆಶಯ ಭಾಷಣ ಮಾಡಿದರು.  | Kannada Prabha

ಸಾರಾಂಶ

ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಕಳೆದು ಹೋದರೆ, ಸರ್ಕಾರಿ ಶಾಲೆಗಳು ಮುಚ್ಚಿದರೆ ನಮ್ಮ ಮಾತೃ ಭಾಷೆ ಬೀದಿ ಭಾಷೆಯಾಗುತ್ತದೆ. ರಾಜ್ಯ ಸರ್ಕಾರದ ಕೆಟ್ಟ ಶಿಕ್ಷಣ ನೀತಿಯಿಂದಾಗಿ ಕನ್ನಡ ಭಾಷೆ ಆಡಳಿತ ಭಾಷೆಯಾಗಿ ಹಾಗೂ ಶೈಕ್ಷಣಿಕ ಭಾಷೆಯಾಗಿ ಉಳಿಯುತ್ತಿಲ್ಲ.

ಧಾರವಾಡ:

ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಕಳೆದು ಹೋದರೆ, ಸರ್ಕಾರಿ ಶಾಲೆಗಳು ಮುಚ್ಚಿದರೆ ನಮ್ಮ ಮಾತೃ ಭಾಷೆ ಬೀದಿ ಭಾಷೆಯಾಗುತ್ತದೆ. ರಾಜ್ಯ ಸರ್ಕಾರದ ಕೆಟ್ಟ ಶಿಕ್ಷಣ ನೀತಿಯಿಂದಾಗಿ ಕನ್ನಡ ಭಾಷೆ ಆಡಳಿತ ಭಾಷೆಯಾಗಿ ಹಾಗೂ ಶೈಕ್ಷಣಿಕ ಭಾಷೆಯಾಗಿ ಉಳಿಯುತ್ತಿಲ್ಲ ಎಂದು ಹಿರಿಯ ಸಾಹಿತಿ ಪ್ರೊ. ಎಸ್‌.ಜಿ. ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.

ಇಲ್ಲಿಯ ಆಲೂರು ವೆಂಕಟರಾವ್‌ ಭವನದಲ್ಲಿ ಬುಧವಾರ ನಡೆದ ಧಾರವಾಡ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಶಯ ಭಾಷಣ ಮಾಡಿದ ಅವರು, ಕನ್ನಡ ಭಾಷೆಗೆ ಸಾವಿಲ್ಲ ಎನ್ನುವುದನ್ನು ಒಪ್ಪೋಣ. ಆದರೆ, ರಾಜ್ಯ ಸರ್ಕಾರದ ಕೆಲವು ನಿರ್ಧಾರಗಳಿಂದಾಗಿ ಕನ್ನಡ ರಾಜ್ಯ ಭಾಷೆ ಎಂಬ ಸ್ಥಾನ ಹಾಗೂ ಅಧಿಕೃತತ್ವ ಕಳೆದುಕೊಳ್ಳುತ್ತೇವೆ ಎಂಬ ಭಯ ಶುರುವಾಗಿದೆ. ಈಗಲಾದರೂ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಅನುಷ್ಠಾನಗೊಳಿಸುವ ನೈತಿಕ ಹೊಣೆಗಾರಿಕೆ ರಾಜ್ಯ ಸರ್ಕಾರ ತೋರಬೇಕು ಎಂದು ಆಗ್ರಹಿಸಿದರು.

ಶಿಕ್ಷಣವನ್ನು ಖಾಸಗಿಗೆ ಈಡು ಮಾಡಿದ ರೀತಿಯಲ್ಲಿ ಇಡೀ ಸರ್ಕಾರಿ ಶಾಲೆಗಳನ್ನು ಮಾರುವ ಮರ್ಯಾದೆಗೆಟ್ಟ ಸ್ಥಿತಿಯಲ್ಲಿ ಸರ್ಕಾರಿ ಶಾಲೆಗಳನ್ನು ದತ್ತು ಹೆಸರಿನಲ್ಲಿ ಸರ್ಕಾರ ಮಾರಾಟಕ್ಕಿಟ್ಟಿರುವುದು ಖಂಡನೀಯ. ಇದು ಜನತ್ವದ ವಿರೋಧಿ ಕೃತ್ಯ. ಸಾವಿರಾರು ವರ್ಷಗಳಿಂದ ಅಕ್ಷರ ವಂಚಿತ ಸಮುದಾಯಕ್ಕೆ ಬಗೆಯುತ್ತಿರುವ ದ್ರೋಹ. ಕನ್ನಡ ಸಾಹಿತ್ಯ ಓದುವ, ಬರೆಯುವ ಮುಂದಿನ ಪೀಳಿಗೆ ಕನ್ನಡ ಭಾಷೆ ಹಕ್ಕುದಾರರಾಬೇಕು ಹೊರತು ಭಾಷೆಯ ಹಕ್ಕು ಕಳೆದುಕೊಳ್ಳುವ ಸ್ಥಿತಿ ಬಂದಿದೆ. ಸರ್ಕಾರ ಈಗಿನ ತುರ್ತು ನೋಡುವುದಲ್ಲದೇ ಹಿಂದಣ ಹೆಜ್ಜೆ ನೋಡಿ ಕಂಡಂತೆ, ಇಂದಿನ ಹೆಜ್ಜೆ ಅರ್ಥ ಮಾಡಿಕೊಳ್ಳಬೇಕು. ಮುಂದಿನ ಹೆಜ್ಜೆ ಇಡಬೇಕು. ಕೂಡಲೇ ಕೆಪಿಎಸ್‌ ಮ್ಯಾಗ್ನೇಟ್‌ ಶಾಲೆಗಳನ್ನು ತೆರೆಯುವುದನ್ನು ಕೈ ಬಿಡಬೇಕೆಂದು ಒತ್ತಾಯಿಸಿದರು.

ಹಾಗೆಯೇ, ಸರ್ಕಾರಗಳಿಗೆ ಮಾನ-ಮರ್ಯಾದೆ ಇದ್ದರೆ ಜಗತ್ತು ಒಪ್ಪಿರುವ ಮಹಾತ್ಮ ಗಾಂಧೀಜಿ ಹಾಗೂ ಬಸವಣ್ಣನವರ ಬಗ್ಗೆ ಇತ್ತೀಚೆಗೆ ತಿರುಚಿದ ಚರಿತ್ರೆ ಮೂಲಕ ದುರಹಂಕರಾದ ಮಾತುಗಳನ್ನು ಹೇಳುತ್ತಿರುವ ವ್ಯಕ್ತಿಗಳಿಗೆ ಕಡಿವಾಣ ಹಾಕಬೇಕು. ದೇಶಕ್ಕೆ ಸ್ವಾತಂತ್ರ್ಯ ನೀಡಿದ ಮಹಾತ್ಮನ ಬಗ್ಗೆ ಮತ್ತು ವಚನ ಸಾಹಿತ್ಯ ನೀಡಿದ ಬಸವಣ್ಣನವರ ಕುರಿತು ಏನೆಲ್ಲಾ ಅಪಸ್ವರ ಎತ್ತುತ್ತಿರುವುದು ಖಂಡನೀಯ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿ: ಕಿಶೋರ ಯಕ್ಷಗಾನ ಸಂಭ್ರಮಕ್ಕೆ ಚಾಲನೆ
ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಿ