ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್, ಯಕ್ಷಗಾನ ಕಲಾರಂಗ, ಶ್ರೀಕೃಷ್ಣ ಮಠ, ಪ್ರದರ್ಶನ ಸಂಘಟನಾ ಸಮಿತಿ ಹಾಗು ಉಡುಪಿ, ಕಾಪು, ಕುಂದಾಪುರ, ಬೈಂದೂರು ಶಾಸಕರ ಪೂರ್ಣ ಸಹಕಾರದೊಂದಿಗೆ ಈ ಬಾರಿ ಜಿಲ್ಲೆಯ 99 ಶಾಲೆಗಳಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ - ಕಿಶೋರ ಯಕ್ಷಗಾನ ಸಂಭ್ರಮ ಆಯೋಜಿಸಲಾಗಿದೆ.
ಬ್ರಹ್ಮಾವರ: ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್, ಯಕ್ಷಗಾನ ಕಲಾರಂಗ, ಶ್ರೀಕೃಷ್ಣ ಮಠ, ಪ್ರದರ್ಶನ ಸಂಘಟನಾ ಸಮಿತಿ ಹಾಗು ಉಡುಪಿ, ಕಾಪು, ಕುಂದಾಪುರ, ಬೈಂದೂರು ಶಾಸಕರ ಪೂರ್ಣ ಸಹಕಾರದೊಂದಿಗೆ ಈ ಬಾರಿ ಜಿಲ್ಲೆಯ 99 ಶಾಲೆಗಳಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ - ಕಿಶೋರ ಯಕ್ಷಗಾನ ಸಂಭ್ರಮ ಆಯೋಜಿಸಲಾಗಿದೆ.
ಇಲ್ಲಿನ ಬ್ರಹ್ಮಾವರದ ಬಂಟರ ಭವನದ ಮುಂಭಾಗದಲ್ಲಿ ನಿರ್ಮಿಸಿದ ಕೃಷ್ಣಸ್ವಾಮಿ ಜೋಯಿಸ್ ವೇದಿಕೆಯಲ್ಲಿ ಈ ಸಲದ ಕಿಶೋರ ಯಕ್ಷಗಾನ ಸಂಭ್ರಮಕ್ಕೆ ಚಾಲನೆ ನೀಡಲಾಯಿತು.ಟ್ರಸ್ಟ್ನ ಅಧ್ಯಕ್ಷರೂ ಆಗಿರುವ ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಅವರು ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಯಕ್ಷಗಾನ ನಮ್ಮ ಮಣ್ಣಿನ ಕಲೆ. ಇದನ್ನು ಮಕ್ಕಳಿಗೆ ಕಲಿಸಿ ಅವರನ್ನು ಸಂಸ್ಕೃತೀ ಸಂಪನ್ನರನ್ನಾಗಿಸಲು ಕಳೆದ 19 ವರ್ಷಗಳಿಂದ ಟ್ರಸ್ಟ್ ಕಾರ್ಯನಿರತವಾಗಿದೆ. ಟ್ರಸ್ಟ್ನ ಯಶಸ್ಸಿನಲ್ಲಿ ಯಕ್ಷಗಾನ ಕಲಾರಂಗದ ಪಾತ್ರ ಬಹಳ ಮಹತ್ವದ್ದು ಎಂದು ಹೇಳಿದರು.
ಗೋಡಂಬಿ ಉದ್ಯಮಿ ಸಂಪತ್ ಕುಮಾರ್, ನ್ಯಾಯವಾದಿ ಬೈಕಾಡಿ ಸುಪ್ರಸಾದ ಶೆಟ್ಟಿ, ಬಂಟರ ಭವನದ ಸಂಚಾಲಕ ಸಿ. ಭುಜಂಗ ಶೆಟ್ಟಿ ಮಾತನಾಡಿ, ಯಕ್ಷಶಿಕ್ಷಣದ ಮಹತ್ವ ತಿಳಿಸಿ ಯಕ್ಷಶಿಕ್ಷಣ ಟ್ರಸ್ಟ್ ನಮ್ಮ ಜಿಲ್ಲೆಯ ಪ್ರೌಢಶಾಲಾ ಮಕ್ಕಳಿಗೆ ದೊರೆತ ಮಹಾಭಾಗ್ಯ, ಕಲಾರಂಗವು ಮಾಡುತ್ತಿರುವ ಕೆಲಸ ನೋಡಿ ಬೆರಗಾಗಿದ್ದೇವೆ ಎಂದು ಹೇಳಿದರು.ಅಭ್ಯಾಗತರಾಗಿ ಕೊಕ್ಕರ್ಣೆಯ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮೈರ್ವಾಡಿ ಅಶೋಕ ಕುಮಾರ ಶೆಟ್ಟಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಮಾಜಿ ಜಿಪಂ ಅಧ್ಯಕ್ಷ ಬಿ.ಎನ್. ಶಂಕರ್ ಪೂಜಾರಿ, ಮಾಜಿ ಲಯನ್ಸ್ ಗವರ್ನರ್ ಜ್ಞಾನವಸಂತ, ಉಡುಪಿ ಗ್ರಾಮಾಂತರ ಬಿ.ಜೆ.ಪಿ ಅಧ್ಯಕ್ಷ ರಾಜೀವ ಕುಲಾಲ್ ಆಗಮಿಸಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಉಪಸ್ಥಿತರಿದ್ದರು.
ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬ್ರಹ್ಮಾವರ ಸಂಘಟನಾ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಮನೋಜ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ದೇವಾನಂದ ನಾಯಕ್ ಧನ್ಯವಾದ ಸಲ್ಲಿಸಿದರು.ನಂತರ ಸರಕಾರಿ ಪ್ರೌಢಶಾಲೆ ನಾಲ್ಕೂರು ಇಲ್ಲಿಯ ವಿದ್ಯಾರ್ಥಿಗಳಿಂದ ಮಹೇಶ್ ಮಂದಾರ್ತಿ ನಿರ್ದೇಶನದಲ್ಲಿ ದ್ರುವ ಚರಿತ್ರೆ ಮತ್ತು ಹೆಗ್ಗುಂಜೆ ರಾಜೀವ ಶೆಟ್ಟಿ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಂದ ನರಸಿಂಹ ತುಂಗರ ನಿರ್ದೇಶನದಲ್ಲಿ ಶ್ರೀಕೃಷ್ಣ ಪಾರಿಜಾತ ಪ್ರಸ್ತುತಗೊಂಡಿತು.