ಶಾಂತಿ, ಸಹಬಾಳ್ವೆ, ಸಾಮರಸ್ಯಕ್ಕೆ ಕನ್ನಡನಾಡು ಮುಂಚೂಣಿ

KannadaprabhaNewsNetwork |  
Published : Nov 02, 2025, 04:15 AM IST
ಕಕಕಕಕಕಕಕ | Kannada Prabha

ಸಾರಾಂಶ

ಕನ್ನಡ ನಾಡು ಸಹಬಾಳ್ವೆ, ಸಾಮರಸ್ಯ ಸಾರುವಲ್ಲಿ ಮುಂಚೂಣಿಯಲ್ಲಿದೆ. ಜಾತಿ, ಮತ, ಪ್ರದೇಶ ಮೀರಿ ನಾವೆಲ್ಲರೂ ಕನ್ನಡಿಗರೂ ಎಂಬ ಭಾವನೆ ಪ್ರಬಲವಾಗಬೇಕು ಎಂದು ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಕನ್ನಡ ನಾಡು ಸಹಬಾಳ್ವೆ, ಸಾಮರಸ್ಯ ಸಾರುವಲ್ಲಿ ಮುಂಚೂಣಿಯಲ್ಲಿದೆ. ಜಾತಿ, ಮತ, ಪ್ರದೇಶ ಮೀರಿ ನಾವೆಲ್ಲರೂ ಕನ್ನಡಿಗರೂ ಎಂಬ ಭಾವನೆ ಪ್ರಬಲವಾಗಬೇಕು ಎಂದು ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಕಡೆಗಳಲ್ಲಿ ಶನಿವಾರ 70ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ, ಸಡಗರ ಹಾಗೂ ಅದ್ಧೂರಿಯಾಗಿ ಆಚರಿಸಲಾಯಿತು. ಈ ವೇಳೆ ಇಲ್ಲಿನ ಎಸ್.ಕೆ.ಹೈಸ್ಕೂಲ್ ಆವರಣದಲ್ಲಿ ನಡೆದ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಮಾತನಾಡಿದ ಅವರು, ಕರ್ನಾಟಕ ಏಕೀಕರಣ ಚಳುವಳಿಗೆ ಹಿರಿಯರು ನೀಡಿದ ಕೊಡುಗೆ ಅವಿಸ್ಮರಣೀಯ ಎಂದರು.ತಹಸೀಲ್ದಾರ್‌ ಬಲರಾಮ ಕಟ್ಟಿಮನಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡದ ಬೆಳವಣಿಗೆಗಾಗಿ ಸಾಕಷ್ಟು ಜನರು ಶ್ರಮಿಸಿ ನಾಡಿನ ಧೀಮಂತ ಶಕ್ತಿಯಾಗಿದ್ದಾರೆ. ನಾಡು-ನುಡಿ ಹೋರಾಟಕ್ಕೆ ಮಹಿಳೆಯರ ಕೊಡುಗೆಯೂ ಅಪಾರವಾಗಿದೆ. ಹಿರಿಯರ ಆಶಯದಂತೆ ಸಮಗ್ರ ಕರ್ನಾಟಕವನ್ನು ಪ್ರಗತಿಪರ ರಾಜ್ಯವನ್ನಾಗಿ ರೂಪಿಸಲು ಎಲ್ಲರೂ ಕೈ ಜೋಡಿಸಬೇಕು ಎಂದರು.ತಾಲೂಕು ಪಂಚಾಯತಿ ಇಒ ಟಿ.ಆರ್.ಮಲ್ಲಾಡದ ಮಾತನಾಡಿ, ರಾಜ್ಯೋತ್ಸವದ ಈ ದಿನ ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ ಮತ್ತು ವೈವಿಧ್ಯತೆಯನ್ನು ಮನದುಂಬಿ ಆಚರಿಸಬೇಕು. ಕನ್ನಡ ಭಾಷೆ, ಕಲೆ ಮತ್ತು ನೆಲದ ಬಗ್ಗೆ ಹೆಮ್ಮೆ ಪಡಬೇಕು. ಇದರೊಂದಿಗೆ ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.ಈ ವೇಳೆ ಕ್ಯಾರಗುಡ್ ಅಭಿನವ ಮಂಜುನಾಥ ಸ್ವಾಮೀಜಿ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಪುರಸಭೆ ಅಧ್ಯಕ್ಷ ಇಮ್ರಾನ ಮೋಮಿನ್, ಸಿಪಿಐ ಮಹಾಂತೇಶ ಬಸಾಪೂರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಶಾನೂರ್ ತಹಶೀಲ್ದಾರ, ಕಸಾಪ ತಾಲೂಕು ಘಟಕ ಅಧ್ಯಕ್ಷ ಪ್ರಕಾಶ ಅವಲಕ್ಕಿ, ಗ್ರೇಡ್-2 ತಹಶೀಲ್ದಾರ ಪ್ರಕಾಶ ಕಲ್ಲೋಳಿ, ಶಿರಸ್ತೆದಾರ ಎನ್.ಆರ್.ಪಾಟೀಲ, ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನ ಸಾರಾಪುರಿ, ಕನ್ನಡ ಹೋರಾಟಗಾರರಾದ ಪ್ರಮೋದ ಕೂಗೆ, ಪ್ರದೀಪ ರಿಜಕನವರ, ಸುಭಾಷ ನಾಯಿಕ, ಕಬೀರ ಮಲೀಕ್ ಮತ್ತಿತರರು ಉಪಸ್ಥಿತರಿದ್ದರು.ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು. ಪೊಲೀಸರು, ವಿವಿಧ ಶಾಲೆ, ಕಾಲೇಜು ವಿದ್ಯಾರ್ಥಿಗಳ ತಂಡಗಳ ಆಕರ್ಷಕ ಪಥಸಂಚಲನ ನಡೆಸಿದವು. ಇದಕ್ಕೂ ಮೊದಲು ಅಡವಿಸಿದ್ದೇಶ್ವರ ಮಠದಿಂದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ತಾಯಿ ಭುವನೇಶ್ವರಿ ಭಾವಚಿತ್ರ ಹಾಗೂ ವಿವಿಧ ರೂಪಕಗಳ ಭವ್ಯ ಮೆರವಣಿಗೆ ಕನ್ನಡದ ನೆಲ-ಜಲ, ನಾಡು-ನುಡಿ, ಭಾಷೆಯ ಮಹತ್ವ ಸಾರಿ ಕಣ್ಮನ ಸೆಳೆಯಿತು.

PREV

Recommended Stories

ಪಾಳು ಬಿದ್ದ ರೈತ ಸಭಾ ಭವನ ಕಟ್ಟಡ
ಕೊಂಕಣಿ ನೆಲದಲ್ಲಿ ಕನ್ನಡದಲ್ಲಿ ಸಹಿ ಸಂಗ್ರಹ, ಕದಂಬ ವೃಕ್ಷ ಪೂಜಿಸಿ ರಾಜ್ಯೋತ್ಸವ ಆಚರಣೆ