ರಟ್ಟೀಹಳ್ಳಿ: ಕನ್ನಡ ನೆಲ-ಜಲ, ಭಾಷೆ, ಸಂಸ್ಕೃತಿಯನ್ನು ಪೂಜಿಸಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಇತ್ತೀಚಿನ ದಿನಗಳಲ್ಲಿ ಕನ್ನಡಿಗರೇ ಕನ್ನಡವನ್ನು ನಿರ್ಲಕ್ಷಿಸುತ್ತಿರುವುದು ಅತ್ಯಂತ ಶೋಚನೀಯವಾಗಿದೆ ಎಂದು ಶಾಸಕ ಯು.ಬಿ. ಬಣಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲಾ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಹಾಗೂ ಪಟ್ಟಣ ಪಂಚಾಯತ್ ಸಹಯೋಗದಲ್ಲಿ ನಡೆದ 70ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಕನ್ನಡ ಹಬ್ಬ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡಿಗರು ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಅನೇಕ ಹಿರಿಯರ ಹೋರಾಟದ ಫಲವಾಗಿ ಇಂದು 70ರ ಸಂಭ್ರಮದ ಏಕೀಕರಣದ ರಾಜ್ಯದಲ್ಲಿ ನಾವಿದ್ದೇವೆ, ಕಾರಣ ಕನ್ನಡಕ್ಕಾಗಿ ತಮ್ಮ ಪ್ರಾಣವನ್ನೆ ಪಣವಾಗಿಟ್ಟ ಮಹಾನ್ ವ್ಯಕ್ತಿಗಳ ಹೋರಾಟಗಾರರ ಮಧ್ಯ ಇಂದಿನ ಯುವಪೀಳಿಗೆ ಕನ್ನಡಕ್ಕೆ ತಮ್ಮ ಕೊಡುಗೆ ಏನು? ಎಂಬ ಪ್ರಶ್ನೆ ಮೂಡುತ್ತಿದೆ. ಕೇವಲ ಕನ್ನಡ, ಕನ್ನಡ ಎಂದರೆ ಸಾಲದು, ಕನ್ನಡವು ನಮ್ಮ ಉಸಿರಾಗಬೇಕು. ಕನ್ನಡಿಗರು ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ನೀಡಿದರೆ ಮಾತ್ರ ಕನ್ನಡ ಹಬ್ಬ ಹಾಗೂ ನುಡಿ ಸಂಭ್ರಮದ ಸಾರ್ಥಕತೆ ಪಡೆಯುವುದು ಎಂದರು.ನಮ್ಮ ತಾಲೂಕಿನಲ್ಲೇ ಇರುವಂತ ಹೆಮ್ಮೆಯ ತ್ರಿಪದಿ ಕವಿ ಸರ್ವಜ್ಞರು 16ನೇ ಶತಮಾನದಲ್ಲಿ ತಮ್ಮ ಕಟು ಸಾಹಿತ್ಯದ ಮೂಲಕ ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದುವ ಮೂಲಕ ಕನ್ನಡಕ್ಕೆ ನೀಡಿದ ಕೊಡುಗೆ ಅಪಾರ, ಆ ನಿಟ್ಟಿನಲ್ಲಿ ಸರ್ವಜ್ಞರ ಹುಟ್ಟೂರು ಅಭಿವೃದ್ಧಿಗಾಗಿ ಸರಕಾರ ಬದ್ಧವಾಗಿದೆ ಎಂದರು.
ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಕುವೆಂಪು, ದ.ರಾ. ಬೇಂದ್ರೆಯಂತಹ ಮಹಾನ್ ಕವಿಗಳು ಕಂಡಂತ ನಮ್ಮ ಕನ್ನಡ ನಾಡು ಇತ್ತೀಚಿನ ದಿನಗಳಲ್ಲಿನ ಶಿಕ್ಷಕರ ಉದಾಸೀನ ಹಾಗೂ ಶಿಕ್ಷಣ ಪದ್ದತಿಯಿಂದಾಗಿ ಕನ್ನಡದ ಸಂಸ್ಕೃತಿ, ಭಾಷಾಭಿಮಾನದ ಕೊರತೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಉತ್ಕೃಷ್ಟವಾದ ಕವಿಗಳಾಗಿ ಹೊರ ಹೊಮ್ಮಲು ಸಾಧ್ಯವಾಗುತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದರು.ಶಿಕ್ಷಣ ಇಲಾಖೆಯಲ್ಲಿ ಕನ್ನಡ ಮಾಧ್ಯಮವನ್ನೆ ಅಧ್ಯಯನ ಮಾಡಬೇಕೆಂಬ ವಿಚಾರ ಒಂದು ಕಾಲದಲ್ಲಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಸೇರಿಸುವ ಮೂಲಕ ಕನ್ನಡಕ್ಕೆ ಕುತ್ತು ತರುವಂತ ಕಾರ್ಯವಾಗುತ್ತಿದೆ, ಒಂದು ಕಡೆ ಕನ್ನಡ ನೆಲ, ಜಲ ಭಾಷೆಗಾಗಿ ಹೋರಾಟವನ್ನು ಮಾಡುತ್ತೇವೆ, ಇನ್ನೊಂದು ಕಡೆ ನಮ್ಮ ಮಾತೃ ಭಾಷೆ ಕನ್ನಡವನ್ನು ಕಗ್ಗೊಲೆ ಮಾಡಲಾಗುತ್ತಿದೆ ಎಂದರು. ಇಂದಿನ ಆಧುನಿಕ ಯುಗದಲ್ಲಿ ಇಂಗ್ಲಿಷ್ ಮಾಧ್ಯಮ ನಮ್ಮ ಮಕ್ಕಳಿಗೆ ಬೇಕು ಆದರೆ ನಮ್ಮ ಮಕ್ಕಳು ಕನ್ನಡ ಮಾಧ್ಯಮದಲ್ಲೆ ಅಧ್ಯಯನ ಮಾಡುವ ಮೂಲಕ ಇಂಗ್ಲಿಷ್ ಕಲಿಯಬಹುದು. ಆ ಮೂಲಕ ಕನ್ನಡ ನೆಲ, ಜಲ, ಭಾಷೆ ಉಳಿಸಿ ಬೆಳೆಸುವ ಗುರುತರ ಜಬಾಬ್ದಾರಿ ನಮ್ಮ ಮೇಲಿದೆ ಎಂದರು.ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಮತಾನಾಡಿ, ಕಳೆದೆರಡು ದಶಕಗಳಿಂದ ಪಾಲಕರ ಮತ್ತು ಮಕ್ಕಳ ಇಂಗ್ಲಿಷ್ ವ್ಯಾಮೋಹದಿಂದಾಗಿ ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿರುವುದು ಅತ್ಯಂತ ನೋವಿನ ಸಂಗತಿ, ಸರಕಾರಗಳು ಪ್ರಾಥಮಿಕ ಹಂತದಲ್ಲಿ ಕನ್ನಡವನ್ನು ಕಡ್ಡಾಯ ಮಾಡಲು ಕಾನೂನಿನ ಅಡೆತಡೆಗಳಿಂದಾಗಿ ಕನ್ನಡವನ್ನು ಕಡ್ಡಾಯ ಮಾಡಲು ಸಾಧ್ಯವಾಗುತ್ತಿಲ್ಲ, ಆದರೆ ಪಾಲಕರು ಮತ್ತು ಮಕ್ಕಳು ಕಾನೂನಿನ ಯಾವುದೇ ಅಡೆತಡೆಗಳಿದ್ದರೂ ಅದನ್ನು ಬದಿಗೊತ್ತಿ ಪ್ರಾಥಮಿಕ ಹಂತವನ್ನು ಕನ್ನಡದಲ್ಲೇ ಅಧ್ಯಯನ ಮಾಡಿದರೆ ಮಾತ್ರ ಕನ್ನಡ ಭಾಷೆ ಉಳಿಸಿ ಬೆಳೆಸಲು ಸಾಧ್ಯವಾಗುವುದು ಎಂದರು. ಮೆರವಣಿಗೆ: 70ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಕನ್ನಡ ಹಬ್ಬದ ಅಂಗವಾಗಿ ನಡೆದ ತಾಯಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಗೆ ಮಾಜಿ ಸಚಿವ ಚಾಲನೆ ನೀಡಿದರು. ಮಹಾಲಕ್ಷ್ಮೀ ವೃತ್ತದಿಂದ ಪ್ರಾರಂಭವಾದ ಮೆರವಣಿಗೆ, ಸಂಗೋಳ್ಳಿ ರಾಯಣ್ಣ ವೃತ್ತ, ಹಳೇ ಬಸ್ಸ್ಯಾಂಡ್ ಸರ್ಕಲ್ ಮುಖಾಂತರ ಸರಕಾರಿ ಶಾಲಾ ಮೈದಾನದ ವೇದಿಕೆ ಕಾರ್ಯಕ್ರಮದಲ್ಲಿ ಸಂಪನ್ನಗೊಂಡಿತು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಸಿ. ತುಮ್ಮಿನಕಟ್ಟಿ, ನಗರ ಘಟಕದ ಅಧ್ಯಕ್ಷ ಗಣೇಶ ವೇರ್ಣೇಕರ, ನಿಕಟ ಪೂರ್ವ ಅಧ್ಯಕ್ಷ ಎ.ಜಿ. ರಾಘವೇಂದ್ರ, ಪಟ್ಟಣ ಪಂಚಾಯತ್ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ, ಉಪಾಧ್ಯಕ್ಷ ಶಿವಕುಮಾರ ಉಪ್ಪಾರ, ರವಿ ಹದಡೇರ, ಬಸವರಾಜ ಆಡಿನವರ, ವೀರನಗೌಡ ಪ್ಯಾಟಿಗೌಡ್ರ, ಸರ್ಫರಾಜ ಮಾಸೂರ, ಮಕ್ಬೂಲ್ ಮುಲ್ಲಾ, ಶ್ರೀದೇವಿ ಬೈರೋಜಿಯವರ, ಲಕ್ಷ್ಮೀ ಚಿಕ್ಕಮೊರಬ, ಬಸವರಾಜ ಕಟ್ಟಿಮನಿ, ಮಲ್ಲಮ್ಮ ಕಟ್ಟೆಕಾರ್, ಲಲಿತಾ ಚನ್ನಗೌಡ್ರ, ಜಿಲ್ಲಾ ಸಾಹಿತ್ಯ ಪರಿಷತ್ ಸದಸ್ಯ ಮಲ್ಲಿಕಾರ್ಜುನ ಹೇರಕಾರ, ಮಂಜು ಅಸ್ವಾಲಿ, ರಮೇಶ ತಳವಾರ, ಬಾಬುಸಾಬ್ ಜಡದಿ, ಕರಿಯಪ್ಪ ಕೊರವರ, ಇರ್ಫಾನ್ ಜಡದಿ, ಶಿವಾನಂದ ಪೂಜಾರ, ಅಣ್ಣಪ್ಪ ಕುಡುಪಲಿ, ಹೇಮಪ್ಪ ನಿಂಬೇಗೊಂದಿ, ಗುಡ್ಡಾಚಾರಿ ಕಮ್ಮಾರ, ಬೀರೇಶ ಕರಡೆಣ್ಣನವರ, ಎಸ್.ಬಿ ಪಾಟೀಲ್, ಕೆ.ಆರ್. ಕೋಣ್ತಿ, ಸಿ.ಎಫ್ ಜಾಡರ, ಸುರೇಶ ಮಲ್ಲಾಡದ, ಚನ್ನವೀರ ಚಕ್ರಸಾಲಿ, ಹನಮಂತಗೌಡ ಭರಮಣ್ಣನವರ, ಕುಸುಮಾವತಿ ಮೇಗಳಮನಿ ಮುಂತಾದವರು ಇದ್ದರು. ನುಡಿ ಹಬ್ಬ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳಿಂದ ಕನ್ನಡ ಗೀತೆಗಳ ರಸ ಮಂಜರಿ ಕಾರ್ಯಕ್ರಮಗಳು ನೆರೆದ ಜನರ ಮನಸೂರೆಗೊಂಡಿತು.