ಹಾವೇರಿ: ಬಸವಾದಿ ಶರಣರ ಸಮಾಜವಾದದ ಸಂಕಲ್ಪ ಈಡೇರುವ ಕಾಲ ಸನ್ನಿಹಿತವಾಗಿದ್ದು, ಈಗ ಇಡೀ ಜಗತ್ತು ಶರಣ ಸಂದೇಶಗಳಿಗಾಗಿ ಹಾತೊರೆಯುತ್ತಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಜಿ.ಎಂ. ಓಂಕಾರಣ್ಣನವರ ಹೇಳಿದರು.
ನಗರದ ಭಗತ್ ಪದವಿಪೂರ್ವ ಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ ಶರಣರ ಚಿಂತನಗಳು ಹಾಗೂ ಆಧುನಿಕ ವಚನಗಳು ಕುರಿತು ವಿಚಾರ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಚನಗಳು ಸಾರ್ವಕಾಲಿಕ ಸತ್ಯಗಳು. ಎಲ್ಲ ಕಾಲಕ್ಕೂ ಸಲ್ಲುವ ಚಿಂತನೆಗಳನ್ನು ಲೋಕಕ್ಕೆ ನೀಡುವ ಮೂಲಕ 12ನೇ ಶತಮಾನ ಸಮಾಜವಾದದ ಸತ್ಯಾಸತ್ಯತೆಗಳನ್ನು ಅರಿವಿಗೆ ತಂದಿದೆ ಎಂದರು.ತಾಲೂಕು ಘಟಕದ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಹಿಂಚಿಗೇರಿ ಮಾತನಾಡಿ, ವಚನ ಚಳವಳಿಯ ಕಾಲ ಸುವರ್ಣಾಕ್ಷರಗಳಿಂದ ಬರೆಯಲ್ಪಟ್ಟ ಕಾಲಘಟ್ಟ. ತಾರತಮ್ಯ ಇಲ್ಲದ ಸಮಸಮಾಜದ ಚಿಂತನೆಗಳು ಶರಣರ ಅನುಭಾವದಲ್ಲಿ ಒಡಮೂಡಿವೆ. ಅವು ಕೇವಲ ಜ್ಞಾನದ ಸಂದೇಶಗಳಲ್ಲಿ ನಿಜಾನುಭಾವದ ಆದರ್ಶಗಳನ್ನೊಳಗೊಂಡು ಅನುಭವ ಮಂಟಪದಲ್ಲಿ ಚಿಂತನ-ಮಂಥನವಾಗಿ ಸಮಾಜದ ಅರಿವಿಗೆ ಬಂದ ಅನುಭವದ ನುಡಿಗಳು. ಕನ್ನಡವನ್ನು ದೇವಭಾಷೆ ಮಾಡಿರುವುದು ವಚನಗಳ ಹೆಗ್ಗಳಿಕೆ ಎಂದರು. ವಚನಗಳನ್ನು ವಿಶೇಷವಾಗಿ ಮಕ್ಕಳು ಹಾಗೂ ಯುವ ಸಮುದಾಯ ವಾಚಿಸಿ, ಅರ್ಥೈಸಿಕೊಂಡು ಜೀವನದಲ್ಲಿ ಅನುಷ್ಠಾನಗೊಳಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಜಗದೀಶ ಹತ್ತಿಕೋಟಿ ಮಾತನಾಡಿ, ಒಳ್ಳೆಯ ಕೆಲಸಗಳನ್ನು ಮುಂದೂಡಬೇಡಿ. ಶರಣರ ವಚನಗಳಲ್ಲಿ ಆಧ್ಯಾತ್ಮ, ವಿಜ್ಞಾನ, ಮನಶಾಸ್ತ್ರ, ಜೀವಶಾಸ್ತ್ರ ಸೇರಿದಂತೆ ಮನುಷ್ಯನ ಅರಿವಿಗೆ ಬೇಕಾದ ಎಲ್ಲವೂ ಇದೆ. ಮನಸ್ಸಿಗೆ ಸಂಸ್ಕಾರ ನೀಡುವುದೇ ವಚನಗಳ ಹೆಚ್ಚುಗಾರಿಕೆ. ವಿದ್ಯಾರ್ಥಿ ಯುವ ಜನತೆಗೆ ಉತ್ತಮ ಸಂದೇಶಗಳು ಇಲ್ಲಿವೆ. ಜ್ಞಾನವೇ ಒಡವೆ ಎಂಬ ಸತ್ಯವನ್ನು ನಾವೆಲ್ಲ ಅರಿಯಬೇಕಾಗಿದೆ. ಜಗದ ಒಳಿತಿಗೆ ಬೇಕಾಗುವ ಎಲ್ಲ ನುಡಿ ಸಂದೇಶಗಳು ಇಲ್ಲಿವೆ ಎಂದರು.ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ. ಮಾರುತಿ ಶಿಡ್ಲಾಪುರ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಕಾರ್ಯದರ್ಶಿ ಎಂ.ಬಿ. ಸತೀಶ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ ಮಾಳಗಿ, ಪರವೀನಬಾನು ಯಲಿಗಾರ, ಪ್ರಾಚಾರ್ಯ ರತನ್ ಕಾಶಪ್ಪನವರ ಉಪಸ್ಥಿತರಿದ್ದರು.
ರಶ್ಮಿ ಬಾದರ ಸ್ವಾಗತಿಸಿದರು. ದೀಪಾ ಜೋಗಿಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಆತ್ಮಾ ತಳಕಲ್ಲ ವಂದಿಸಿದರು.