ಬಳ್ಳಾರಿ: ನಗರದ ಡಿಎಆರ್ ಕವಾಯಿತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಮೂರು ದಿನಗಳ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ತೆರೆಬಿತ್ತು. ಜಿಲ್ಲೆಯ ವಿವಿಧ ಠಾಣೆಗಳಿಂದ ಆಗಮಿಸಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ನಾನಾ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.ಡಿಎಆರ್ ಮೈದಾನದಲ್ಲಿ ಜರುಗಿದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕ ವರ್ತಿಕ ಕಟಿಯಾರ್ ಪೊಲೀಸ್ ಸಿಬ್ಬಂದಿಗೆ ದೈಹಿಕ ಚಟುವಟಿಕೆಗಳ ಅಗತ್ಯ ಕುರಿತು ತಿಳಿಸಿದರು.
ಸಮಯ ಪಾಲನೆ ಎಂಬುದು ಪೊಲೀಸ್ ವೃತ್ತಿ ಜೀವನದಲ್ಲಿ ತುಂಬಾ ಮಹತ್ವದ್ದು. ಜಿಲ್ಲೆಯಲ್ಲಿ ನಡೆದ ಹಬ್ಬ-ಹರಿ ದಿನಗಳಲ್ಲಿ ರಜೆ ತೆಗೆದುಕೊಳ್ಳದೇ ಎಲ್ಲ ಹಂತದ ಪೊಲೀಸ್ ಅಧಿಕಾರಿಗಳು ನಿಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ಮಾಡಿದ್ದೀರಿ.
ಮೂರು ದಿನಗಳಲ್ಲಿ ಶಿಸ್ತು ಮತ್ತು ಸಮಯ ಬದ್ಧವಾದ ಕ್ರೀಡಾಕೂಟ ನಡೆಸಿದ್ದೀರಿ. ಮುಂದೆ ಕೂಡ ಇದೇ ರೀತಿ ಪ್ರತಿ ದಿನ ಪೊಲೀಸ್ ಕೆಲಸದಲ್ಲಿ ಮತ್ತು ಜೀವನದಲ್ಲಿ ಶಿಸ್ತು ಮತ್ತು ಸಮಯ ಬದ್ಧತೆಯನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರಲ್ಲದೆ, ಪೊಲೀಸ್ ಕುಟುಂಬ ವರ್ಗ ಹಾಗೂ ಮಕ್ಕಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿರುವುದು ನನಗೆ ಹೆಚ್ಚು ಸಂತಸ ತಂದಿದೆ ಎಂದು ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ ಮೂರು ದಿನಗಳ ಕ್ರೀಡಾಕೂಟದಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡ ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಶುಭ ಹಾರೈಸಿದರು. ಕಾರ್ಯಕ್ರಮಕ್ಕೂ ಮುನ್ನ 6 ತಂಡಗಳಿಂದ ಗೌರವ ವಂದನೆಯನ್ನು ಎಸ್ಪಿ ಶೋಭಾರಾಣಿ ಸ್ವೀಕರಿಸಿದರು. ಪೊಲೀಸ್ ಸಿಬ್ಬಂದಿಗಳು ಪೊಲೀಸ್ ಧ್ವಜ ಹಸ್ತಾಂತರಿಸಿದರು.
ಕ್ರೀಡಾಕೂಟದಲ್ಲಿ ವಿಜೇತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.ಹೆಚ್ಚುವರಿ ಪೊಲೀಸ್ ಅಧೀಕ್ಷಕ ನವೀನಕುಮಾರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹಾಗೂ ಕುಟುಂಬ ವರ್ಗ, ಸಾರ್ವಜನಿಕರು ಉಪಸ್ಥಿತರಿದ್ದರು.