ನಾಮಫಲಕದಲ್ಲಿ ಕನ್ನಡ ಕಡ್ಡಾಯ: ಜ.7ರ ಗಡುವು

KannadaprabhaNewsNetwork |  
Published : Dec 27, 2024, 12:47 AM IST
ಸಿಕೆಬಿ-2 ಕನ್ನಡ ಅನುಷ್ಠಾನ ಸಮಿತಿ  ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿದರು | Kannada Prabha

ಸಾರಾಂಶ

ಕನ್ನಡದ ಜತೆ ಇಂಗ್ಲಿಷ್‌ ಸೇರಿದಂತೆ ಇತರೆ ಭಾಷೆ ಅಳವಡಿಸಿಕೊಳ್ಳಲು ಯಾವುದೇ ನಿರ್ಬಂಧವಿಲ್ಲ. ಇತರೆ ಕನ್ನಡ ಅಕ್ಷರಗಳಿಗಿಂತ ದಪ್ಪ ಅಕ್ಷರದಲ್ಲಿ ಇರಬಾರದು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ನಗರಸಭೆ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಪೌರಾಯುಕ್ತರು ಹಾಗೂ ಮುಖ್ಯಾಧಿಕಾರಿಗಳು ಜಾರಿ ಅಧಿಕಾರಿಗಳಾಗಿರುತ್ತಾರೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲಾ ರೀತಿಯ ವ್ಯಾಪಾರಿ ಮಳಿಗೆಗಳು, ಸಂಘ ಸಂಸ್ಥೆಗಳು, ಖಾಸಗಿ ಶಾಲಾ ಕಾಲೇಜುಗಳ ನಾಮಫಲಕಗಳಲ್ಲಿ ಶೇ. 60 ರಷ್ಟು ಪ್ರಮಾಣದಲ್ಲಿ ಕನ್ನಡ ಭಾಷೆಯಲ್ಲಿ ಬರೆದಿರಬೇಕು. ಈ ವರೆಗೂ ಯಾರಾದರೂ ಈ ರೀತಿ ಫಲಕ ಅಳವಡಿಸದಿದ್ದಲ್ಲಿ ಜನವರಿ 7 ರೊಳಗೆ ಕಡ್ಡಾಯವಾಗಿ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಕಟ್ಟುನಿಟ್ಟಿನ ಸೂಚನೆ ನೀಡಿದರು. ಗುರುವಾರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಕನ್ನಡ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲ ನಾಮಫಲಕಗಳಲ್ಲಿ ಶೇ. 60ರಷ್ಟು ಪ್ರಮಾಣ ಕನ್ನಡ ಇರಬೇಕು ಎಂದರು.

ಉಲ್ಲಂಘಿಸಿದರೆ ದಂಡ ವಿಧಿಸಿ

ಈ ಬಗ್ಗೆ ಅಧಿಕಾರಿಗಳು ಭೇಟಿ ನೀಡಿ ವರದಿ ನೀಡಬೇಕು ಉಲ್ಲಂಘನೆ ಮಾಡಿರುವವರಿಗೆ ದಂಡ ವಿಧಿಸಬೇಕು. ಮೊದಲ ಬಾರಿಗೆ ನಿಯಮ ಉಲ್ಲಂಘಿಸಿದವರಿಗೆ 5000, ಎರಡನೇ ಬಾರಿಗೆ ಉಲ್ಲಂಘಿಸಿದವರಿಗೆ 10,000 ಮೂರನೇ ಬಾರಿಗೆ ಉಲ್ಲಂಘಿಸಿದವರಿಗೆ ಗರಿಷ್ಠ 20 ಸಾವಿರ ವರೆಗೆ ದಂಡ ವಿಧಿಸುವುದು ಮತ್ತು ಪರವಾನಿಗೆಯನ್ನೇ ರದ್ದುಗೊಳಿಸಬೇಕು ಎಂದು ತಿಳಿಸಿದರು.

ಕನ್ನಡದ ಜತೆ ಇಂಗ್ಲಿಷ್‌ ಸೇರಿದಂತೆ ಇತರೆ ಭಾಷೆ ಅಳವಡಿಸಿಕೊಳ್ಳಲು ಯಾವುದೇ ನಿರ್ಬಂಧವಿಲ್ಲ. ಇತರೆ ಕನ್ನಡ ಅಕ್ಷರಗಳಿಗಿಂತ ದಪ್ಪ ಅಕ್ಷರದಲ್ಲಿ ಇರಬಾರದು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ನಗರಸಭೆ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಪೌರಾಯುಕ್ತರು ಹಾಗೂ ಮುಖ್ಯಾಧಿಕಾರಿಗಳು ಜಾರಿ ಅಧಿಕಾರಿಗಳಾಗಿರುತ್ತಾರೆ. ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಪರಿಶೀಲಿಸಬೇಕು. ಈ ಕುರಿತು ಮೇಲುಸ್ತುವಾರಿ ಪರಿಶೀಲಿಸಲು ತಾಲೂಕು ಮಟ್ಟದ ಕನ್ನಡ ಅನುಷ್ಠಾನ ಸಮಿತಿ ಸಭೆಗಳನ್ನು ಕರೆದು ಪ್ರಗತಿ ಪರಿಶೀಲನೆ ನಡೆಸಿ ಜಿಲ್ಲಾ ಮಟ್ಟದ ಕನ್ನಡ ಅನುಷ್ಠಾನ ಸಮಿತಿಗೆ ವರದಿ ನೀಡಬೇಕು ಎಂದರು.

ಸರ್ಕಾರಿ ವೆಬ್‌ಗಳಲ್ಲಿ ಕನ್ನಡ ಸರ್ಕಾರದ ಎಲ್ಲ ಕಚೇರಿಗಳ ವೆಬ್ ಸೈಟ್‌ನಲ್ಲಿ ಕನ್ನಡದಲ್ಲಿ ಮಾಹಿತಿ ನೀಡುವ ಬಗ್ಗೆ ಪರಿಶೀಲನೆ ಮಾಡಿ ಕ್ರಮ ವಹಿಸಬೇಕು.ಜಿಲ್ಲೆಯ ಎಲ್ಲ ಕೈಗಾರಿಕೆಗಳಲ್ಲಿ ಎಷ್ಟು ಕಾರ್ಮಿಕರು ಕಾರ್ಯನಿರತರಾಗಿದ್ದಾರೆ. ಈ ಪೈಕಿ ಸ್ಥಳೀಯರು ಮತ್ತು ಕನ್ನಡಿಗರ ಸಂಖ್ಯೆ ಎಷ್ಟಿದೆ ಎಂಬ ನಿಖರ ಮಾಹಿತಿಯನ್ನು ನೀಡಬೇಕು ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬೇಕು ಎಂದರು.

ಅನ್ಯಭಾಷಾ ಫಲಕ ತೆರವು ಕನ್ನಡ ಬಳಸದಿರುವ ಅನ್ಯಭಾಷೆಯ ನಾಮಫಲಕಗಳನ್ನು ಕಡ್ಡಾಯವಾಗಿ ತೆರವುಗೊಳಿಸಬೇಕು. ಸರ್ಕಾರಿ ವಾಹನಗಳ ಮೇಲೆ ಹಾಗೂ ಕಚೇರಿಯ ನಾಮಫಲಕಗಳ ಮೇಲೆ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಬಳಕೆ ಮಾಡಬೇಕು. ಎಲ್ಲ ವಿದ್ಯಾಸಂಸ್ಥೆಗಳ ದೈನಂದಿನ ಬಳಕೆಯಲ್ಲಿ ಕನ್ನಡವನ್ನು ಬಳಸಬೇಕು ಈ ಕುರಿತ ಸರ್ಕಾರದ ನಿಯಮಗಳನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ತಮ್ಮ ಅಧೀನದ ಸರ್ಕಾರಿ ಹಾಗೂ ಖಾಸಗಿ ಶಾಲಾ ಸಂಸ್ಥೆಗಳ ಮುಖ್ಯಸ್ಥರಿಗೆ ತಿಳಿಸಬೇಕು.

ಪರಿಶೀಲನಾ ಸಮಿತಿ ರಚನೆತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕನ್ನಡ ಅನುಷ್ಠಾನ ಪರಿಶೀಲನಾ ಸಮಿತಿಗಳು ನಿಯಮಿತವಾಗಿ ಸಭೆ ನಡೆಸಿ ಕನ್ನಡ ಅನುಷ್ಠಾನಕ್ಕಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಣೆ ಮಾಡಬೇಕು. ಮಕ್ಕಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ನಿಯಂತ್ರಣಕ್ಕಾಗಿ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ “ಲೋಕಲ್ ಕಂಪ್ಲೇಂಟ್ ಕಮಿಟಿ” ಹಾಗೂ “ಇಂಟರ್ನಲ್ ಕಂಪ್ಲೇಂಟ್ ಕಮಿಟಿ” ರಚಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು,ಈ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ರವಿ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್. ಮಹೇಶ್ ಕುಮಾರ್, ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಈಶ್ವರಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಕೋಡಿರಂಗಪ್ಪ, ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ