ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗದಲ್ಲಿ ಮಂಗಳವಾರ ಆರಂಭಗೊಂಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ನುಡಿಗಳನ್ನಾಡಿದ ಅವರು, ಬದುಕಿಗೆ ಆಧಾರವಾದ ಭಾಷೆಯನ್ನು ಕಳೆದುಕೊಳ್ಳಬಾರದು. ಭಾಷೆಯ ಸಾವಿರಾರು ಪದಗಳು ಇಂದು ರೂಢಿಯಿಂದ ಅಳಿದು ಹೋಗಿವೆ. ಈಗಿನ ಮಕ್ಕಳು ಐದು ಹೂ, ಐದು ಮರ, ಐದು ಆಹಾರ ಧಾನ್ಯಗಳ ಹೆಸರನ್ನು ಹೇಳಲಾರರು. ಅದೇ ರೀತಿ ದಿನಬಳಕೆಯ ಅದೆಷ್ಟೇ ಪದಗಳು ಕಣ್ಮರೆಯಾಗಿವೆ ಎಂದು ವಿಷಾಧ ವ್ಯಕ್ತಪಡಿಸಿದರು.
ಈಗ ಸಾಹಿತ್ಯ ಕೃತಿಗಳಷ್ಟೇ ಅಲ್ಲ, ಕನ್ನಡದ ದಿನ ಪತ್ರಿಕೆಗಳ ಓದುವವರ ಸಂಖ್ಯೆಯೂ ಕ್ಷೀಣಿಸುತ್ತಿದೆ. ಪತ್ರಿಕೆಗಳವರು ಬರೀ ಜಾಹೀರಾತುಗಳಿಂದ ಹೊಟ್ಟೆ ತುಂಬಿಸಿಕೊಳ್ಳಬೇಕಾಗಿದೆ. ಕನ್ನಡ ಸಾಹಿತ್ಯ ಓದುವ ವಿದ್ಯಾರ್ಥಿಗಳಿಗಳೂ ದಿನ ಪತ್ರಿಕೆ, ಮಾಸ ಪತ್ರಿಕೆ, ಪಾಕ್ಷಿಗಳ ಅರ್ಥ ತಿಳಿದಿಲ್ಲ. ಐವತ್ತು ವರ್ಷಗಳ ಹಿಂದೆ ಕನ್ನಡದ ಹೊಸ ಪುಸ್ತಕದ ಸಾವಿರ ಪ್ರತಿಗಳು ಮುದ್ರಣವಾಗುತ್ತಿದ್ದವು. ಈಗ ಅದು ಐದುನೂರಕ್ಕೆ ಇಳಿದಿದೆ. ಇಲ್ಲೂ ಕೂಡ ಗ್ರಂಥಾಲಯ ಖರೀದಿಗಾಗಿ ಪ್ರಕಾಶಕರು ಕಾಯುತ್ತಿರುತ್ತಾರೆ.ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಮೊಬೈಲ್ ಗಳ ದಾಸರಾಗಿದ್ದಾರೆ. ಭಾಷೆಯ ಅಳಿವಿನೊಂದಿಗೆ ಸಾಮಾಜಿಕ, ಸಾಂಸ್ಕೃತಿಕ ಮೌಲ್ಯಗಳೂ ಕ್ಷೀಣಿಸುತ್ತ ಒಂದು ರೋಗಗ್ರಸ್ತ ಪೀಳಿಗೆ ಸೃಷ್ಟಿಯಾಗುತ್ತಿದೆಯೇ ಎಂಬ ಆತಂಕ ಮೂಡಿದೆ ಎಂದರು.ಪುಸ್ತಕ ಅಥವಾ ಸಾಹಿತ್ಯದ ಓದಿನ ಮೂಲಕವೇ ನಮ್ಮ ಆದರ್ಶಗಳು, ಮೌಲ್ಯಗಳು ಹಾಗೂ ಜ್ಞಾನದ ಪ್ರಸಾರ ಮಾಡಲು ಸಾಧ್ಯವಿಲ್ಲ.ಇದಕ್ಕಾಗಿ ಬೇರೆ ಬೇರ ಮಾರ್ಗಗಳ ಶೋಧಿಸಬೇಕಾದ ತುರ್ತು ಅಗತ್ಯವಿದೆ. ಓದುಗಳ ಬಳಗ ರೂಪಿಸಿಕೊಂಡು ತಿಂಗಳಿಗೊಮ್ಮೆ ಒಂದೆಡೆ ಸೇರಿ ನಿರ್ಧಿಷ್ಟ ಪುಸ್ತಕವೊಂದನ್ನು ಪರಿಚಯಿಸುವ ಕೆಲಸವಾಗಬೇಕು. ಶಾಲಾ ಕಾಲೇಜುಗಳಲ್ಲಿ ಹೆಚ್ಚು ಹೆಚ್ಚು ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಗಳ ನಡೆಸಬೇಕು. ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಸಾಹಿತ್ಯ ಸ್ಪರ್ಧೆಗಳ ಏರ್ಪಡಿಸುವುದು ಓದಿನ ಆಸಕ್ತಿ ಬೆಳೆಸಲು ಸಹಕಾರಿ ಆಗುತ್ತದೆ ಎಂದು ಡಾ.ಸಂಧ್ಯಾರೆಡ್ಡಿ ಹೇಳಿದರು.
ಕುಪ್ಪಳ್ಳಿ ರೀತಿ ಬಯಲು ಸೀಮೆಯ ಜನ ಜೀವನ ಸಂಸ್ಕೃತಿ ಪ್ರತಿಬಿಂಬಿಸುವ ಒಂದು ಮ್ಯೂಜಿಯಂ ಚಿತ್ರದುರ್ಗದಲ್ಲಿ ಸ್ಥಾಪನೆಯಾಗಬೇಕು. ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವ ಈ ದಿನಗಳಲ್ಲಿ ಇಂತಹದ್ದೊಂದು ಸಂಗ್ರಹಾಲಯ ಕೋಟೆ ಪ್ರವೇಶಿಸುವ ಆವರಣದಲ್ಲಿ ಇರುವಂತೆ ನೋಡಿಕೊಳ್ಳಬೇಕು. ವಿಪರೀತ ಒತ್ತುವರಿಯಿಂದಾಗಿ ಬೆಟ್ಟದ ಸುತ್ತಮುತ್ತಲಿನ ಸೌಂದರ್ಯಕ್ಕೆ ಧಕ್ಕೆಯಾಗಿದೆ. ಈ ಬಗ್ಗೆ ನಗರಾಡಳಿತದವರು ಎಚ್ಚರ ವಹಿಸಬೇಕೆಂದು ಹೇಳಿದರು.ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಸಾಹಿತ್ಯಕವಾಗಿ ಸಾಂಸ್ಕೃತಿಕವಾಗಿ ಸಂಘಟನೆಯ ಮೂಲಕ, ಜಿಲ್ಲೆಯ ಘನತೆ ಮತ್ತು ಗೌರವವನ್ನು ಎತ್ತಿ ಹಿಡಿದ ಪ್ರತಿಭಾನ್ವಿತ ಲೇಖಕಿ, ಅನುವಾದಕಿ, ಡಾ.ಕೆ.ಆರ್.ಸಂಧ್ಯಾ ರೆಡ್ಡಿ ಅವರು, ಚಿತ್ರದುರ್ಗದ ಸ್ವತಂತ್ರ ಹೋರಾಟಗಾರರ ಮನೆತನದಿಂದ ಬಂದವರು. ಸಾಹಿತ್ಯ ರಚನೆ ಸಾಮಾಜಿಕ ಸಾಂಸ್ಕೃತಿಕ, ಹೋರಾಟಗಳಲ್ಲಿ ಗುರುತಿಸಿಕೊಂಡಿರುವ ಕೆ.ಆರ್.ಸಂದ್ಯಾ ರೆಡ್ಡಿಯವರು, ಕಾವ್ಯ ಕಥಾ ಸಂಕಲನ, ಅಂಕಣ ಬರಹ ಜೀವನ ಚರಿತ್ರೆ, ಜನಾಂಗೀಯ ಅಧ್ಯಯನ, ಜನಪದ ಅಧ್ಯಯನ, ಮಹಿಳಾ ಸಾಹಿತ್ಯ ಅನುಪಾತ ಸಾಹಿತ್ಯ ಹೀಗೆ ಹತ್ತು ಹಲವಾರು ಸಾಹಿತ್ಯ ಕ್ಷೇತ್ರಗಳ ಸಾಹಿತ್ಯ ಕೃಷಿ ಮೂಲಕ ಜಿಲ್ಲೆಯ ಘನತೆ ಮತ್ತು ಗೌರವವನ್ನು ಎತ್ತಿ ಹಿಡಿದರ ಸಮ್ಮೇಳನಾಧ್ಯಕ್ಷರಾಗಿರುವುದು ಸಂತಸದ ಸಂಗತಿ ಎಂದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಟಿ.ಎಸ್.ವೆಂಕಣ್ಣಯ್ಯನವರ ಆದಿಯಾಗಿ ತರಾಸು, ಶಾಮರಾಯ, ಬೆಳಗೆರೆ ಚಂದ್ರಶೇಖರ ಶಾಸ್ತ್ರಿ, ಬೆಳಗೆರೆ ಜಾನಕಮ್ಮ, ಬೆಳಗೆರೆ ಕೃಷ್ಣ ಶಾಸ್ತ್ರಿಗಳು, ಮುಂತಾದ ಸಾಹಿತಿಗಳ, ಬರಹಗಾರರ ಮೂಲಕ ಜಿಲ್ಲೆಯ ಸಾಂಸ್ಕೃತಿಕ ಸಾಹಿತ್ಯಕ ಪರಂಪರೆ ಶ್ರೀಮಂತವಾಗಿದೆ. ಬಿ.ಎಲ್.ವೇಣು, ಡಾ.ಲೋಕೇಶ್ ಅಗಸನಕಟ್ಟೆ, ಚಂದ್ರಶೇಖರ ತಾಳ್ಯ, ಮೀರಾಸಾಬಿ ಹಳ್ಳಿ ಶಿವಣ್ಣ, ಡಾ.ಸಿ ಶಿವಲಿಂಗಪ್ಪ, ತಾರಿಣಿ ಶುಭದಾಯಿನಿ, ಡಾ.ಬಂಜಗೆರೆ ಜಯಪ್ರಕಾಶ್, ಡಾ.ಬಿ.ರಾಜಶೇಖರಪ್ಪ, ಡಾ.ಲಕ್ಷ್ಮಣ ತೆಲಗಾವಿ, ಪ್ರೊ. ಎಂ.ಜಿ ರಂಗಸ್ವಾಮಿ ಮುಂತಾದ ಲೇಖಕರು ಸಂಶೋಧಕರು ಜಿಲ್ಲೆಯ ಹೆಮ್ಮೆಯ ಕನ್ನಡದ ಕವಿಗಳಾಗಿದ್ದಾರೆ ಎಂದು ಸ್ಮರಿಸಿದರು.ಪಂಪ ರನ್ನ ಜನ್ನ ಪೊನ್ನ, ರಂತಹ ಕನ್ನಡದ ಪ್ರಾಚೀನ ಜೈನ ಕವಿಗಳ ಕಾವ್ಯ ಪರಂಪರೆಯ ಮನುಜ ಕುಲಂ ತಾನೊಂದೇ ವಲಂ ಎಂದು ಪರಿಭಾವಿಸುವ ಜೈನ ಪರಂಪರೆಯ ಜೀವ ಪರಕಾಳಜಿಯ ವ್ಯಕ್ತಿಯಾಗಿ, ಕನ್ನಡದ ಶಕ್ತಿಯಾಗಿ ಕನ್ನಡ ಕಟ್ಟುವ ಕೆಲಸದಲ್ಲಿ ಜಿಲ್ಲೆಯ ಜನತೆಯೊಂದಿಗೆ ನಾನು ಸದಾ ತಮ್ಮ ಸೇವೆಯಲ್ಲಿ ಇರುತ್ತೇನೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ಶಾಸಕ ಟಿ.ರಘುಮೂರ್ತಿ, ವಿಪ ಸದಸ್ಯ ಕೆ.ಎಸ್.ನವೀನ್, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೀಶ್, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್ ಫೀರ್, ಗ್ಯಾರಂಟಿಯೋಜನೆ ಜಿಲ್ಲಾಧ್ಯಕ್ಷ ಶಿವಣ್ಣ ಗಂಜಿಗಟ್ಟೆ, ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪರಮೇಶ್ವರಪ್ಪ ಇದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಆಶಯ ಮಾತುಗಳನ್ನಾಡಿದರು.