ಗಡಿ ಜಿಲ್ಲೆಯಲ್ಲಿ ಕನ್ನಡವೇ ಸಾರ್ವಭೌಮ: ಶಾಸಕ ಎ.ಆರ್.ಕೃಷ್ಣಮೂರ್ತಿ

KannadaprabhaNewsNetwork |  
Published : Nov 02, 2024, 01:23 AM IST
1ಸಿಎಚ್‌ಎನ್60ಯಳಂದೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟ ಶಾಲಾ ಮಕ್ಕಳಿಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು. | Kannada Prabha

ಸಾರಾಂಶ

ನಮ್ಮ ಚಾಮರಾಜನಗರ ಜಿಲ್ಲೆ ತಮಿಳುನಾಡು ಹಾಗೂ ಕೇರಳ ರಾಜ್ಯದ ಗಡಿಯನ್ನು ಹಂಚಿಕೊಂಡಿದೆ ಆದರೂ ಸಹ ಇಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದ್ದು ಇಲ್ಲಿನವರು ಕನ್ನಡಾಭಿಮಾನಿಗಳಾಗಿದ್ದಾರೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು. ಯಳಂದೂರಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ನಮ್ಮ ಚಾಮರಾಜನಗರ ಜಿಲ್ಲೆ ತಮಿಳುನಾಡು ಹಾಗೂ ಕೇರಳ ರಾಜ್ಯದ ಗಡಿಯನ್ನು ಹಂಚಿಕೊಂಡಿದೆ ಆದರೂ ಸಹ ಇಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದ್ದು ಇಲ್ಲಿನವರು ಕನ್ನಡಾಭಿಮಾನಿಗಳಾಗಿದ್ದಾರೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಬೆಂಗಳೂರಿನಂತಹ ಮಹಾನಗರದಲ್ಲಿ ಕನ್ನಡ ಭಾಷೆ ಮಾತನಾಡುವರ ಸಂಖ್ಯೆ ಕಡಿಮೆಯಾಗುತ್ತಿದೆ. ನಾವು ಕನ್ನಡದಲ್ಲೇ ವ್ಯವಹರಿಸುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಭಾಷೆಯ ಬಗ್ಗೆ ಅಭಿಮಾನವನ್ನು ಮೂಡಿಸಿಕೊಳ್ಳಬೇಕು ಎಂದರು. ನಮ್ಮ ಜಿಲ್ಲೆಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಪುಟ್ಟೀರಮ್ಮ ಹಾಗೂ ಸುವರ್ಣ ಮಹೋತ್ಸವ ಸಾಧಕ ಪ್ರಶಸ್ತಿಗೆ ಎಂ.ಪಿ. ರಾಜು ಹಾಗೂ ಪ್ರೇಮಲತಾ ಪುಟ್ಟಸ್ವಾಮಿ ಎಂಬ ಮೂವರು ಆಯ್ಕೆಯಾಗಿರುವುದು ಅತೀವ ಸಂತಸ ತಂದಿದ್ದು ಇವರಿಗೆ ನಾನು ಅಭಿನಂದಿಸುತ್ತೇನೆ ಎಂದರು.

ಗ್ರಾಮೀಣ ಭಾಗದಲ್ಲಿ ಸಿಎಸ್‌ಆರ್ ಫಂಡ್‌ನಿಂದ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಹೊಂಗನೂರು, ಕೆಸ್ತೂರು, ಕುದೇರು ಗ್ರಾಮಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ನೂತನ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುವುದು ಈ ಮೂಲಕ ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಅನುವು ಮಾಡಿಕೊಡಲಾಗುವುದು. ತಾಲೂಕಿನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗದ ಕೊರತೆ ಇದೆ. ಈಗಾಗಲೇ ಹೊನ್ನೂರು, ಮೆಳ್ಳಹಳ್ಳಿ, ವಡಗೆರೆ ಗ್ರಾಮಗಳಲ್ಲಿ ಜಾಗವನ್ನು ಗುರುತಿಸಲಾಗಿದ್ದು ಶೀಘ್ರದಲ್ಲೇ ಕ್ರೀಡಾಂಗಣ ನಿರ್ಮಾಣ ಮಾಡಲು ಕ್ರಮ ವಹಿಸಲಾಗುವುದು ಎಂದರು.

ಇದಕ್ಕೂ ಮುಂಚೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲು ಕನ್ನಡಾಂಬೆಯ ಫೋಟೋವನ್ನೇ ಇಟ್ಟಿರಲಿಲ್ಲ. ಇದಕ್ಕೆ ಕನ್ನಡ ಪರ ಸಂಘಟನೆಯ ಸದಸ್ಯರು ಹಾಗೂ ಕೆಲ ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಎಚ್ಚೆತ್ತುಕೊಂಡ ತಾಲೂಕು ಆಡಳಿತ ಪೋಟೋವನ್ನು ಇಟ್ಟು ಮೆರವಣಿಗೆಗೆ ಮುಂದಾಯಿತು. ಇದಲ್ಲದೆ ಪೂರ್ವಭಾವಿ ಸಭೆಯಲ್ಲಿ ವಿವಿಧ ಶಾಲೆಗಳಿಂದ ಟ್ಯಾಬ್ಲೋಗಳನ್ನು ಮಾಡಬೇಕೆಂದು ಹೇಳಲಾಗಿದ್ದರೂ ಇದನ್ನು ಮಾಡಿರಲಿಲ್ಲ. ಒಂದು ಮಂಗಳವಾದ್ಯವೂ ಇಲ್ಲದೆ ಮೆರವಣಿಗೆ ಕೇವಲ ಕಾಟಾಚಾರಕ್ಕೆ ಎಂಬಂತೆ ನಡೆಯಿತು.

ಕನ್ನಡದಲ್ಲಿ ಹೆಚ್ಚು ಅಂಕಗಳಿದ ವಿದ್ಯಾರ್ಥಿಗಳಿಗೆ ಗೋಪಾಲಸ್ವಾಮಿ ಗ್ಯಾಸ್ ಏಜೆನ್ಸೀಸ್ ವತಿಯಿಂದ ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರವನ್ನು ವಿತರಣೆ ಮಾಡಲಾಯಿತು. ಶಾಲಾ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯಿತು.

ಟಿ.ನರಸೀಪುರ ಬಿಆರ್‌ಸಿ ಎನ್.ನಾಗೇಶ್ ಗಂಗವಾಡಿ, ಪಪಂ ಅಧ್ಯಕ್ಷೆ ಲಕ್ಷ್ಮಿಮಲ್ಲು, ಉಪಾಧ್ಯಕ್ಷೆ ಶಾಂತಮ್ಮ ನಿಂಗರಾಜು, ಸದಸ್ಯರಾದ ಮಹೇಶ್, ವೈ.ಜಿ. ರಂಗನಾಥ, ಸವಿತಾ ಬಸವರಾಜು, ಬಿ.ರವಿ, ಸುಶೀಲಾ ಪ್ರಕಾಶ್ ನಾಮ ನಿರ್ದೇಶಿತ ಸದಸ್ಯರಾದ ಲಿಂಗರಾಜಮೂರ್ತಿ, ಮುನವ್ವರ್ ಬೇಗ್, ಶ್ರೀಕಂಠಸ್ವಾಮಿ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷ ಎಚ್.ವಿ.ಚಂದ್ರು, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್ ತಹಸೀಲ್ದಾರ್ ಜಯಪ್ರಕಾಶ್ ಮುಖ್ಯಾಧಿಕಾರಿ ಎಂಪಿ. ಮಹೇಶ್‌ಕುಮಾರ್, ಬಿಇಒ ಮಾರಯ್ಯ, ಉಪಪ್ರಾಂಶುಪಾಲ ನಂಜುಂಡಯ್ಯ ಕಸಾಪ ಅಧ್ಯಕ್ಷ ಯರಿಯೂರು ನಾಗೇಂದ್ರ, ಕರವೇ ಜಿಲ್ಲಾ ಉಪಾಧ್ಯಕ್ಷ ವೈ.ಕೆ.ಮೋಳೆ ನಾಗರಾಜು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ