ಗದಗ: ಕನ್ನಡ ನಾಡು ಕಲೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಸಂಗೀತ ಕ್ಷೇತ್ರದ ಬೀಡಾಗಿದೆ. ಇಷ್ಟೊಂದು ಶ್ರೀಮಂತ ಸಂಸ್ಕೃತಿ ಹೊಂದಿದ ನಾಡು ಮತ್ತೊಂದಿಲ್ಲ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅನೇಕ ಮಹನೀಯರು ನಾಡಿನ ಏಕೀಕರಣಕ್ಕಾಗಿ ಹೋರಾಡಿದ ಫಲಶ್ರುತಿಯಾಗಿ ಹರಿದು ಹಂಚಿಹೋಗಿದ್ದ ಈ ರಾಜ್ಯವು 1956 ರಲ್ಲಿ ಮೈಸೂರು ರಾಜ್ಯವಾಗಿ ಉದಯವಾಯಿತು. ಭಾಷಾವಾರು ಪ್ರಾಂತ್ಯ ನಿರ್ಮಾಣವಾಗಬೇಕೆಂದು ಕರ್ನಾಟಕ ಏಕೀಕರಣ ಚಳವಳಿಯ ಉದ್ದೇಶವಾಗಿದ್ದರಿಂದ ಮೈಸೂರು ರಾಜ್ಯವನ್ನು 1973 ನ. 1 ರಂದು ಕರ್ನಾಟಕ ರಾಜ್ಯವೆಂದು ಪುನರ್ ನಾಮಕರಣ ಮಾಡಲಾಯಿತು.
ಏಕೀಕರಣ ಚಳವಳಿಯ ಅಗತ್ಯ ಪ್ರಬಲವಾಗಿ ಪ್ರತಿಪಾದಿಸಿದ್ದ ಕನ್ನಡದ ಕುಲಪುರೋಹಿತರಾದ ವೆಂಕಟರಾಯರು, ಅಂದಾನಪ್ಪ ದೊಡ್ಡಮೇಟಿ ಅವರನ್ನು ನಾವೆಲ್ಲ ಈ ಸಂದರ್ಭದಲ್ಲಿ ಗೌರವದಿಂದ ಸ್ಮರಿಸೋಣ. ಸಾಹಿತ್ಯ ಕ್ಷೇತ್ರ ಶ್ರೀಮಂತಗೊಳಿಸಿದ ರನ್ನ, ಸವಡಿಯ ಒಂದನೆಯ ನಾಗವರ್ಮ, ಚಿಕ್ಕಹಂದಿಗೋಳದ ಶಾಸನಕವಿ ಮಲ್ಲ, ದುರ್ಗಸಿಂಹ, ಕುಮಾರವ್ಯಾಸ, ಚಾಮರಸ, ನಯಸೇನ, ಪುಲಿಗೆರೆಯ ಸೋಮನಾಥ, ಮುಕ್ತಾಯಕ್ಕ ಒಂದಡೆಯಾದರೆ ಇನ್ನೊಂದೆಡೆ ನಮ್ಮ ಸಾಹಿತ್ಯ ಕ್ಷೇತ್ರದ ಶ್ರೀಮಂತಿಕೆಯ ಕಿರೀಟಕ್ಕೆ ಗರಿ ಮೂಡಿಸಿದವರು ಎಂದರು.ಸಂಗೀತ ಕ್ಷೇತ್ರದ ದಿಗ್ಗಜರಾದ ಪಂಚಾಕ್ಷರಿ ಗವಾಯಿಗಳು ಮತ್ತು ವಿಕಲಚೇತನರ ಬಾಳಿನ ಬೆಳಕಾದ ಡಾ. ಪುಟ್ಟರಾಜ ಕವಿಗವಾಯಿಗಳು, ಕನ್ನಡದ ಜಗದ್ಗುರುಗಳೆಂದೇ ಮನೆಮಾತಾದ ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು. ಪತ್ರಿಕಾರಂಗದ ದಿಗ್ಗಜ ಪ.ಲೋ. ಬಂಕಾಪುರ, ಎಂ.ಜೀವನ, ಪಂಢರಿನಾಥ ಗಲಗಲಿ, ಹ.ರಾ. ಕಿದಿಯೂರ, ಎಚ್.ಎಸ್. ಹೊಂಬಾಳಿ, ಕೌತಾಳ ವೀರಪ್ಪ, ಆರ್.ಕೆ.ಜಮಾದಾರ ಮೊದಲಾದವರು ಸ್ಮರಣೀಯರು ಎಂದರು.
ನಾಮಕರಣದ ಸಂಭ್ರಮಾಚರಣೆಯನ್ನು ಗದುಗಿನಲ್ಲಿ 1973 ರ ನ. 3 ರಂದು ಹಂಪೆಯ ವಿರುಪಾಕ್ಷೇಶ್ವರ ದೇವಾಲಯದಲ್ಲಿ ಪ್ರಜ್ವಲಿಸಿದ ಕನ್ನಡ ಜ್ಯೋತಿಯನ್ನು ಗದುಗಿನ ವೀರನಾರಾಯಣ ದೇವಸ್ಥಾನದಲ್ಲಿ ಸ್ವೀಕರಿಸಿದ ಅಂದಿನ ಮುಖ್ಯಮಂತ್ರಿ ದೇವರಾಜ ಅರಸ, ಮೈಸೂರಿನ ಅರಸರಾದ ಜಯಚಾಮರಾಜೇಂದ್ರ ಒಡೆಯರ ಹಾಗೂ ಅರಣ್ಯ ಮತ್ತು ಕೃಷಿ ಸಚಿವ ಕೆ. ಎಚ್. ಪಾಟೀಲ, ಪೌರಾಡಳಿತ ಸಚಿವ ಡಿ.ಕೆ. ನಾಯ್ಕರ, ಕನ್ನಡ ಮತ್ತು ಸಂಸ್ಕೃತಿ ಸಚಿವ ದೇವೇಂದ್ರಪ್ಪ ಗಾಳಪ್ಪ ಹಾಗೂ ಕನ್ನಡಾಭಿಮಾನಿಗಳು ವೀರನಾರಾಯಣ ದೇವಸ್ಥಾನದಿಂದ ಕಾಟನ್ ಸೇಲ್ ಸೊಸೈಟಿಯವರೆಗೆ ಮೆರವಣಿಗೆ ಮೂಲಕ ಬಂದು ಸಾರ್ವಜನಿಕ ಸಭೆ ನಡೆಸಿ ಕರ್ನಾಟಕ ನಾಮಕರಣ ಮಹೋತ್ಸವ ಸಂಭ್ರಮಿಸಿದ್ದು ಇತಿಹಾಸದಲ್ಲಿ ದಾಖಲಾರ್ಹ ಎಂದು ತಿಳಿಸಿದರು.
ವಿಪ ಸದಸ್ಯ ಎಸ್.ವಿ.ಸಂಕನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಜಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಪಂ ಸಿಇಓ ಭರತ್ ಎಸ್, ಎಸ್ಪಿ ಬಿ.ಎಸ್. ನೇಮಗೌಡ, ಡಿಎಫ್ ಓ ಲೇಖರಾಜ್ ಮೀನಾ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರುಗಳು, ಸಾರ್ವಜನಿಕರು, ಶಾಲಾ ವಿಧ್ಯಾರ್ಥಿಗಳು ಹಾಜರಿದ್ದರು.