ಗದಗ: ಉದ್ಯೋಗ ಅರಸಿಕೊಂಡು ವಲಸೆ ಹೋಗುವುದನ್ನು ತಪ್ಪಿಸುವುದು, ವಿಶೇಷವಾಗಿ ಯುವಕರು ಮತ್ತು ಮಹಿಳೆಯರ ಉದ್ಯೋಗಕ್ಕಾಗಿ ಜಿಲ್ಲೆಯಲ್ಲಿ ವಿಶೇಷ ಪ್ರಯತ್ನಗಳು ನಡೆಯುತ್ತಿವೆ. ಇರುವ ನೆಲೆಯಲ್ಲಿಯೇ ಉದ್ಯೋಗಕ್ಕಾಗಿ ಅವಕಾಶ ಸೃಷ್ಟಿ ಮಾಡುವುದು ನಮ್ಮ ಗುರಿ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಮಹಿಳೆಯರಿಗೆ ಅವರ ಸುತ್ತಲಿನ ಜಗತ್ತನ್ನು ಪರಿಚಯಿಸಿದ ಶಕ್ತಿಯೋಜನೆ, ಹಸಿವು ಮುಕ್ತ ಕರ್ನಾಟಕ ಮಾಡುವ ದೃಢ ಸಂಕಲ್ಪದೊಂದಿಗೆ ಅನುಷ್ಠಾನಕ್ಕೆ ಬಂದ ಅನ್ನಭಾಗ್ಯ ಯೋಜನೆ, ಉಚಿತ ಬೆಳಕು ಸುಸ್ಥಿರ ಬದುಕು, ಸರ್ವರನ್ನು ಒಳಗೊಂಡ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಪರ ಅಭಿವೃದ್ಧಿಯ ಸಂಕೇತವಾದ ಗೃಹಜ್ಯೋತಿ ಯೋಜನೆ, ದೇಶದಲ್ಲಿಯೇ ಅತಿ ದೊಡ್ಡ ಆರ್ಥಿಕ ಭದ್ರತಾ ಯೋಜನೆಯಾದ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಕಾರಣವಾದ ಗೃಹಲಕ್ಷ್ಮಿ, ಯುವಕರಿಗೆ ನಿರುದ್ಯೋಗ ಭದ್ರತೆ ಒದಗಿಸುವ ಯುವನಿಧಿ ಯೋಜನೆಗಳು ರಾಜ್ಯದ 99ರಷ್ಟು ಫಲಾನುಭವಿಗಳಿಗೆ ತಲುಪಿವೆ.
ಗದಗ ಜಿಲ್ಲೆಯ ಭೀಷ್ಮ ಕೆರೆ ಪ್ರವಾಸಿ ತಾಣದಲ್ಲಿ ₹ 62 ಲಕ್ಷ ವೆಚ್ಚದಲ್ಲಿ ವರ್ಗ ಎ ಮಾದರಿಯ ಪ್ರವಾಸಿ ಸ್ನೇಹಿ ಸಂಕಿರ್ಣ ನಿರ್ಮಿಸಲು ಅನುದಾನ ಬಿಡುಗಡೆ ಮಾಡಲಾಗಿದೆ. ಸೊರಟೂರು ವಲಯದ ಕಪ್ಪತ್ತಗುಡ್ಡದ ಅರಣ್ಯ ಪ್ರದೇಶದಲ್ಲಿ ಅಂದಾಜು ₹850 ಲಕ್ಷ ವೆಚ್ಚದಲ್ಲಿ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ನಿರ್ಮಿಸಲು ಭೂಮಿಪೂಜೆ ಮಾಡಲಾಗಿದೆ.ಗದಗ ಶಹರದಲ್ಲಿ ತ್ರೀ ಸ್ಟಾರ್ ಹೋಟೆಲ್ ಕಾಮಗಾರಿಗೆ ₹9 ಕೋಟಿ, ಕ್ಯಾಟರಿಂಗ್ ಹಾಸ್ಪಿಟ್ಯಾಲಿಟಿ ಮತ್ತು ಹೋಟೆಲ್ ಮ್ಯಾನೇಜ್‌ಮೆಂಟ್ ಸಂಸ್ಥೆ ನಿರ್ಮಾಣಕ್ಕೆ ₹ 8 ಕೋಟಿ, ಮಹಾಲಿಂಗಪುರ ಗ್ರಾಮದ ಕಪ್ಪತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮ ಶಿಬಿರಕ್ಕೆ ₹7 ಕೋಟಿ, ಲಕ್ಕುಂಡಿ ಗ್ರಾಮದ 13 ದೇವಸ್ಥಾನದ ಪುನರುಜ್ಜೀವನ ಕಾಮಗಾರಿಗೆ ₹5 ಕೋಟಿ, ಬಿಂಕದಕಟ್ಟಿಯ ಮೃಗಾಲಯ ನೈಟ್ ಸಫಾರಿಗೆ ₹4 ಕೋಟಿ, ತಿರಂಗಾ ಪಾರ್ಕ್ ಪ್ರದರ್ಶನ ಕಾಮಗಾರಿಗೆ ₹3 ಕೋಟಿ, ಭೀಷ್ಮ ಕೆರೆ ಮತ್ತು ಮೃಗಾಲಯದಲ್ಲಿ ಪುಟಾಣಿ ರೈಲು ಕಾಮಗಾರಿಗೆ ₹3 ಕೋಟಿ, ಕೊಣ್ಣೂರ ಸಮುದಾಯ ಭವನ ನಿರ್ಮಾಣಕ್ಕೆ ₹1 ಕೋಟಿ, ಜಿಗಳೂರು ಕೆರೆ ಹತ್ತಿರ ಪ್ರವಾಸಿ ಉದ್ಯಾನವನ ನಿರ್ಮಾಣಕ್ಕೆ ₹50 ಲಕ್ಷ ಸೇರಿದಂತೆ ವಿವಿಧ ಒಟ್ಟು 24 ಕಾಮಗಾರಿಗಳಿಗೆ ₹50.85 ಕೋಟಿ ಅನುದಾನ ಮಂಜೂರಾಗಿದ್ದು, ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿವೆ.