ಕೆರೆಗದ್ದೆಯಲ್ಲಿ ಕನ್ನಡ ರಾಜ್ಯೋತ್ಸವ ಸುವರ್ಣ ಸಂಭ್ರಮ
ಕನ್ನಡ ಭಾಷೆ ಅನ್ನದ ಭಾಷೆಯಾಗಿದೆ. ಪ್ರೀತಿ, ಮಮತೆಯ ಭಾಷೆಯಾಗಿದೆ ಎಂದು ಕೊಪ್ಪದ ವಕೀಲರು ಹಾಗೂ ವಾಗ್ಮಿ ಸುಧೀರ್ ಕುಮಾರ್ ಮುರೊಳ್ಳಿ ತಿಳಿಸಿದರು.
ಮಂಗಳವಾರ ಸಂಜೆ ಸೀತೂರು ಗ್ರಾಮದ ಕೆರೆಗದ್ದೆಯಲ್ಲಿ ಕನ್ನಡ ರಾಜ್ಯೋತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ವನ ದುರ್ಗಾ ಪರಮೇಶ್ವರಿ ಸಭಾ ಭವನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸುವರ್ಣ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತರೂ ಮಕ್ಕಳು ಕನ್ನಡ ಭಾಷೆ ಆರಾಧಿಸಬೇಕು. ಕನ್ನಡದಲ್ಲೇ ಮಾತನಾಡ ಬೇಕು. 1947 ರ ನ. 26 ಸಂವಿಧಾನ ಸ್ವೀಕಾರ ಮಾಡಿದ ದಿನವಾಗಿದೆ. ಇಂದು ಕನ್ನಡ ರಾಜ್ಯೋತ್ಸ ಆಚರಿಸುತ್ತಿದ್ದೇವೆ. ಕುವೆಂಪು ಅವರು ಮೈಸೂರು ರಾಜ್ಯದ ಭಾಷಾವಾರು ವಿಂಗಡನೆಗಿಂತ ಮುಂಚೆಯೇ ನಾಡಗೀತೆ ರಚನೆ ಮಾಡಿದ್ದರು. ಸರ್ವಜನಾಂಗದ ತೋಟ ಎಂದು ನಾಡಗೀತೆಯಲ್ಲಿ ವರ್ಣನೆ ಮಾಡಿದ್ದರು. 14 ನೇ ಶತಮಾನದಲ್ಲೇ ಬಸವಣ್ಣ ಶರಣ ಚಳುವಳಿ ಮೂಲಕ ಅನುಭವ ಮಂಟಪ ರಚಿಸಿದ್ದು ಸಹ ಕನ್ನಡದ ನೆಲದಲ್ಲೇ ಎಂದು ಹೆಮ್ಮೆಯಿಂದ ಹೇಳಬಹುದು ಎಂದರು.ಶಿವಮೊಗ್ಗ ಭದ್ರಾ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧೀಕಾರ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ರಾಜ್ಯೋತ್ಸವ ಕನ್ನಡವನ್ನು ಮತ್ತೆ, ಮತ್ತೆ ನೆನಪಿಸಿಕೊಳ್ಳುವ ಹಬ್ಬವಾಗಿದೆ. ಸ್ಥಳೀಯ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಸಿಕ್ಕಿದಂತಾಗುತ್ತದೆ. ಕೆರೆಗದ್ದೆಯಲ್ಲಿ ಇದೇ ಪ್ರಥಮ ಬಾರಿಗೆ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದಾರೆ . ಕರ್ನಾಟಕ ರಾಜ್ಯೋತ್ಸವವನ್ನು ಕೇವಲ ರಾಜ್ಯದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿರುವ ಕನ್ನಡಿಗರು ಸಹ ಕನ್ನಡ ಆಚರಿಸುತ್ತಿದ್ದಾರೆ. ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿ ಸಿಕ್ಕಿದೆ. ಕರ್ನಾಟಕ ರಾಜ್ಯ ವಿವಿಧತೆಯಲ್ಲಿ ಏಕತೆ ಹೊಂದಿರುವ ರಾಜ್ಯ. ನಾವು ಕನ್ನಡಿಗರು ಎಂಬುದೇ ನಮಗೆ ಹೆಮ್ಮೆ ಎಂದರು.
ಇದೇ ಸಂದರ್ಭದಲ್ಲಿ ಕೆರೆಗದ್ದೆ ಹಿರಿಯರಾದ ಗುಲಾಬಿ ಶೆಡ್ತಿ ಅವರನ್ನು ಸನ್ಮಾನಿಸಲಾಯಿತು. ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರಾದ ದಿಶಾ, ಆದ್ಯ, ನಿರೀಕ್ಷ, ಧನ್ಯ ಶ್ರೀ ಅವರನ್ನು ಅಭಿನಂದಿಸಲಾಯಿತು. ಕೊಪ್ಪದ ಡೆಸ್ಟಿನಿ ಸ್ಕೂಲ್ ಆಫ್ ಡ್ಯಾನ್ಸ್ ತಂಡದವರಿಂದ ನೃತ್ಯ ಕಾರ್ಯಕ್ರಮ ನಡೆಯಿತು.