ಕನ್ನಡಿಗರ ನಿರಂತರ ಹೋರಾಟದಿಂದ ಕನ್ನಡ ಭಾಷೆಗೆ ಬೆಲೆ: ಕೆ.ಎಸ್.ಆನಂದ್

KannadaprabhaNewsNetwork | Published : Nov 2, 2024 1:25 AM

ಸಾರಾಂಶ

ಕಡೂರು, ಕನ್ನಡಿಗರ ನಿರಂತರ ಹೋರಾಟದಿಂದ ಕನ್ನಡ ಭಾಷೆಗೆ ಬೆಲೆ ಸಿಗುವ ಮೂಲಕ ಕನ್ನಡದಲ್ಲಿಯೇ ತಾಂತ್ರಿಕ ಶಿಕ್ಷಣ, ವೈದ್ಯಕೀಯ ಮತ್ತಿತರ ಪರೀಕ್ಷೆಗಳನ್ನು ಬರೆಯುವ ವ್ಯವಸ್ಥೆ ಜಾರಿಯಿಂದ ಕನ್ನಡ ಶಕ್ತಿ ಶಕ್ತಿಶಾಲಿ ಭಾಷೆಯಾಗಿ ಬೆಳೆದಿದೆ ಎಂದು ಶಾಸಕ ಕೆ.ಎಸ್.ಆನಂದ್ ಬಣ್ಣಿಸಿದರು.

ಕಡೂರು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವ

ಕನ್ನಡಪ್ರಭ ವಾರ್ತೆ, ಕಡೂರು

ಕನ್ನಡಿಗರ ನಿರಂತರ ಹೋರಾಟದಿಂದ ಕನ್ನಡ ಭಾಷೆಗೆ ಬೆಲೆ ಸಿಗುವ ಮೂಲಕ ಕನ್ನಡದಲ್ಲಿಯೇ ತಾಂತ್ರಿಕ ಶಿಕ್ಷಣ, ವೈದ್ಯಕೀಯ ಮತ್ತಿತರ ಪರೀಕ್ಷೆಗಳನ್ನು ಬರೆಯುವ ವ್ಯವಸ್ಥೆ ಜಾರಿಯಿಂದ ಕನ್ನಡ ಶಕ್ತಿ ಶಕ್ತಿಶಾಲಿ ಭಾಷೆಯಾಗಿ ಬೆಳೆದಿದೆ ಎಂದು ಶಾಸಕ ಕೆ.ಎಸ್.ಆನಂದ್ ಬಣ್ಣಿಸಿದರು.

ಕಡೂರು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ತಾಲೂಕು ಆಡಳಿತದಿಂದ ಗೌರವಿಸಿ ಮಾತನಾಡಿದರು. ರಾಜ್ಯಾದ್ಯಂತ ಸಂಭ್ರಮದಿಂದ 69ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ ಪ್ರಾದೇಶಿಕ ಭಾಷೆಗಳ ಆಧಾರದ ಮೇಲೆ ಮೈಸೂರು ರಾಜ್ಯವಾಗಿದ್ದ ಕನ್ನಡನಾಡನ್ನು, ಮುಖ್ಯಮಂತ್ರಿ ದೇವರಾಜ್ ಅರಸು ಅವರು ಕೈಗೊಂಡ ತೀರ್ಮಾನದಿಂದ ಕರ್ನಾಟಕ ಎಂದು 1973ರ ನವೆಂಬರ್ 1ರಂದು ನಾಮಕರಣವಾಯಿತು.

ಕನ್ನಡ ಎಂಬುದೇ ಶಕ್ತಿ ಭಾಷೆಯಾಗಿದ್ದು ದೇಶದ ಅತ್ಯಂತ ಸುಂದರವಾದ ಭಾಷೆ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದಿದೆ. ಕರ್ನಾಟಕದ ಹೆಮ್ಮೆಯ ಕುವೆಂಪು, ಬೇಂದ್ರೆ, ಶಿವರಾಮ ಕಾರಂತ, ವಿ ಕೃ ಗೋಕಾಕ್ ಮತ್ತಿತರರು ಕನ್ನಡದ ಭಾಷೆಗೆ ತಮ್ಮ ಕೊಡುಗೆ ನೀಡಿದ್ದಾರೆ ಎಂದರು.

ನಮ್ಮ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ರಾಜ್ಯದ ಜನರು ಹಸಿವು ಮುಕ್ತರಾಗಬೇಕೆಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಬಡತನ ನಿರ್ಮೂಲನೆಗೆ ಕ್ರಮ ಕೈಗೊಂಡಿದ್ದಾರೆ. ಕನ್ನಡ ಭಾಷೆಗೆ ಅಂದಿನ ಗೋಕಾಕ್ ಚಳುವಳಿಯಲ್ಲಿ ಮೇರು ನಟ ಡಾ. ರಾಜಕುಮಾರ್ ಮಾಡಿದ ಐತಿಹಾಸಿಕ ಹೋರಾಟ ಸ್ಮರಣೀಯ ಎಂದರು.

ಕನ್ನಡ ಭಾಷೆ ಕಲಿತು ಕನ್ನಡಿಗರಾಗಿ ಕನ್ನಡವೇ ಸತ್ಯ ಕನ್ನಡವೇ ನಿತ್ಯಎಂಬಂತೆ ಕನ್ನಡ ನಮ್ಮ ಉಸಿರಾಗಬೇಕು ಎಂದರು.

ನಮ್ಮ ಜಿಲ್ಲೆಗೆ ಎರಡು ರಾಜ್ಯ ಪ್ರಶಸ್ತಿ ಬಂದಿರುವುದು ಸಂತಸದ ಸಂಗತಿ. ಕಡೂರಿನ ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್, ತರೀಕೆರೆ ತಾಲೂಕಿನ ಲಕ್ಷ್ಮಿ ದೇವಮ್ಮ ನವರಿಗೆ ಲಭಿಸಿರುವುದು ಅಭಿನಂದನೀಯ ಎಂದರು.

ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಕರ್ನಾಟಕದ ಸಾಂಸ್ಕೃತಿಕ ಪ್ರತಿನಿಧಿಯಾಗಿರುವ ಮೈಸೂರು ಸಂಸ್ಕೃತಿಗಳ ತವರು ಆಗಿದ್ದು ಕವಿಗಳು ಕೂಡ ಕರ್ನಾಟಕ ಏಕತೆಗೆ ಕೊಡುಗೆ ನೀಡಿದ್ದಾರೆ. ಗೋವಾದಲ್ಲಿ ಕನ್ನಡಿ ಗರನ್ನು ವಕ್ಕಲೆಬ್ಬಿಸುವ ಸಂಧರ್ಭದಲ್ಲಿ ನಮ್ಮ ಸರಕಾರ ಕನ್ನಡಿಗರ ಪರವಾಗಿ ನಿಂತಿದ್ದನ್ನು ನೋಡಿದ್ದೇವೆ. ಎಲ್ಲರೂ ಕನ್ನಡ ಭಾಷೆ ಬೆಳವಣಿಗೆ ಕೈಜೋಡಿಸ ಬೇಕು ಎಲ್ಲೆಡೆ ಉತ್ತಮ ಮಳೆಯಿಂದ ರೈತರು ಸಂಭ್ರಮದಲ್ಲಿದ್ದಾರೆ. ಭಾಷೆ ಜೊತೆ ಸ್ವಚ್ಛತೆ ಬಗ್ಗೆಯೂ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಪೂರ್ಣಿಮಾ ಮಾತನಾಡಿ, ಕನ್ನಡ ಭಾಷೆ, ನೆಲ, ಜಲ , ಕನ್ನಡ ನಾಡು ನುಡಿಗೆ ಕೊಡುಗೆ ನೀಡಿರುವ ಎಲ್ಲರನ್ನು ಸ್ಮರಿಸೋಣ ಮತ್ತು ಕನ್ನಡದ ಉಳಿವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು

ಕಾರ್ಯಕ್ರಮದಲ್ಲಿ ವೈದ್ಯ ಡಾ. ರಾಮಚಂದ್ರಪ್ಪ, ಹಿರಿಯ ಪತ್ರಕರ್ತ ಎ.ಜೆ.ಪ್ರಕಾಶಮೂರ್ತಿ, ಚಂದ್ರಪ್ಪ, ಕರವೇ ಸಿದ್ದಪ್ಪ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು. ಶಾಲಾ ಮಕ್ಕಳಿಂದ ಕನ್ನಡದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ತಾಪಂ ಇಒ ಸಿ ಆರ್ ಪ್ರವೀಣ್, ಪೊಲೀಸ್ ವೃತ್ತ ನಿರೀಕ್ಷಕ ರಫೀಕ್, ಪಿಎಸ್ಐ ಗಳಾದ ಪವನ್ ಕುಮಾರ್, ಅಜರುದ್ದೀನ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದರಾಜು ನಾಯ್ಕ, ಮಾಜಿ ಗ್ರಾಪಂ ಅಧ್ಯಕ್ಷ ಕಂಸಾಗರ ಸೋಮಶೇಖರ್, ರಾಜಸ್ವ ನಿರೀಕ್ಷಕ ಪಿ.ಒ. ರವಿಕುಮಾರ್, ಶೈಲಾಸಿದ್ದಪ್ಪ, ನಾಗರಾಜ್, ಲಿಂಗರಾಜ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಶಾಲಾ ಮಕ್ಕಳು ಭಾಗವಹಿಸಿದ್ದರು.

-- ಬಾಕ್ಸ್‌---

ಅಧಿಕಾರಿಗಳು ಗೈರು : ಕ್ರಮಕ್ಕೆ ಸೂಚನೆ ರಾಜ್ಯ ಮತ್ತು ರಾಷ್ಟ್ರಾಭಿಮಾನದ ಕಾರ್ಯಕ್ರಮಗಳಿಗೆ ಅಧಿಕಾರಿಗಳು ಗೈರು ಹಾಜರಾಗುತ್ತಿರುವ ಬಗ್ಗೆ ಶಾಸಕ ಆನಂದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಶಾಲೆಗಳ ಮುಖ್ಯೋಪಾಧ್ಯಾಯರು ಕಡ್ಡಾಯವಾಗಿ ಬರುವಂತೆ ಸೂಚನೆ ನೀಡಬೇಕು. ಬರದಿರುವವರಿಗೆ ತಹಸೀಲ್ದಾರರು ಮತ್ತು ಬಿಇಒ ನೋಟಿಸ್ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. 1ಕೆಕೆಡಿಯು1.

ಕಡೂರು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ರಾಜ್ಯೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ತಾಲೂಕು ಆಡಳಿತದಿಂದ ಗೌರವಿಸಲಾಯಿತು.

Share this article